Advertisement

ಎಂಎಸ್‌ಎಂಇ: ಸವಾಲಿನ ನಡುವೆ ಚೇತರಿಕೆ ನಿರೀಕ್ಷೆಯತ್ತ

01:17 AM Jun 30, 2021 | Team Udayavani |

ಲಾಕ್‌ಡೌನ್‌ ತೆರವಾದ ಬೆನ್ನಲ್ಲೇ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಣ್ಣ, ಕಿರು, ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಮತ್ತೆ ಕಾರ್ಯಾರಂಭ ಮಾಡಲು ಅಣಿಯಾಗುತ್ತಿವೆ. ಆದರೆ ಎರಡು ವರ್ಷಗಳಿಂದ ಸತತ ಸಂಕಷ್ಟಗಳಿಗೆ ಸಿಲುಕಿರುವ ಉದ್ದಿಮೆಗಳಿಗೆ ಸರಕಾರ ಮತ್ತು ಜಿಲ್ಲಾಡಳಿತದ ನೆರವು ಅಗತ್ಯವಾಗಿ ಬೇಕಿದೆ.

Advertisement

ಮಂಗಳೂರು: ಸ್ಥಳೀಯ ಆರ್ಥಿಕತೆ ಮತ್ತು ಉದ್ಯೋಗದ ದೃಷ್ಟಿಯಲ್ಲಿ ಈ ಉದ್ದಿಮೆಗಳ ಪಾತ್ರ ದೊಡ್ಡದಿದ್ದು, ಕ್ಷೇತ್ರದ ಪುನಶ್ಚೇತನಕ್ಕೆ ಸರಕಾರದಿಂದ ಹೆಚ್ಚಿನ ನೆರವು ದೊರಕಿಸಿ ಕೊಡುವಲ್ಲಿ ಸಂಸದರು, ಶಾಸಕರೂ ಶ್ರಮಿಸಬೇಕಿದೆ. ಸದ್ಯಕ್ಕೆ ಕರಾವಳಿ ಉದ್ದಿಮೆಗಳು ತಮ್ಮ ಜನಪ್ರತಿ ನಿಧಿಗಳ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿವೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆಯ ಕಾರಣ ಉತ್ಪಾದನ ಘಟಕಗಳು ಮತ್ತು ಕೈಗಾರಿಕೆಗಳು ತಮ್ಮ ಸಾಮರ್ಥ್ಯದ ಶೇ. 50ರಷ್ಟು ಹಾಗೂ ಉಡುಪು ತಯಾರಿಕೆ ಘಟಕಗಳು ಶೇ. 30ರಷ್ಟು ಸಿಬಂದಿ ಬಳಸಿ ಉತ್ಪಾದನೆ ನಡೆಸಲು ಅನುಮತಿ ದೊರೆತಿದೆ. ಆದರೆ ಎಂಎಸ್‌ಎಂಇ ಉದ್ದಿಮೆಗಳು ಪೂರ್ಣ ಚಟುವಟಿಕೆ ಆರಂಭಿಸಲು ಇನ್ನಷ್ಟು ತಿಂಗಳುಗಳು ಬೇಕಾಗಬಹುದು. ಜತೆಗೆ ಉತ್ಪನ್ನಗಳಿಗೆ ಮಾರುಕಟ್ಟೆಯ ಸವಾಲನ್ನೂ ಎದುರಿಸಬೇಕಾಗಿದೆ. ಹಾಗಾಗಿ ಎಂಎಸ್‌ಎಂಇ ಕ್ಷೇತ್ರಕ್ಕೆ ಸರಕಾರ, ಜಿಲ್ಲಾಡಳಿತ ನೆರವಿನ ಚುಚ್ಚುಮದ್ದನ್ನು ನೀಡಬೇಕಿದೆ.

ಲಾಕ್‌ಡೌನ್‌ ಪ್ರಹಾರದಿಂದ ಕಳೆದ ವರ್ಷ ಶೇ. 20ರಷ್ಟು ಉದ್ದಿಮೆಗಳು ಶಾಶ್ವತವಾಗಿ ಮುಚ್ಚಿದ್ದು, ಸರಕಾರದಿಂದ ಸೂಕ್ತ ನೆರವು ಸಿಗದಿದ್ದರೆ ಈ ಬಾರಿಯೂ ಶೇ. 25ರಷ್ಟು ಉದ್ದಿಮೆಗಳು ಮುಚ್ಚಲಿವೆ ಎನ್ನುತ್ತಾರೆ ಉದ್ದಿಮೆದಾರರು.

ಆರ್ಥಿಕತೆಯ ಜೀವಾಳ
ಸಣ್ಣ ಕೈಗಾರಿಕೆ, ಸಾಂಪ್ರದಾಯಿಕ ವೃತ್ತಿಗಳಾದ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ವ್ಯಾಪಾರ ಮತ್ತು ಸಾರ್ವಜನಿಕ ಸಾರಿಗೆ, ಹೊಟೇಲ್‌, ರಿಯಲ್‌ ಎಸ್ಟೇಟ್‌ ಉದ್ಯಮಗಳು ದಕ್ಷಿಣ ಕನ್ನಡ ಮತ್ತುಉಡುಪಿ ಜಿಲ್ಲೆಯ ಆರ್ಥಿಕತೆಯ ಅವಿಭಾಜ್ಯ ಅಂಗಗಳು. ಈ ಪೈಕಿಬಹುತೇಕ ಉದ್ದಿಮೆಗಳು ಎಂಎಸ್‌ಎಂಇ ವ್ಯಾಪ್ತಿಯಲ್ಲಿ ಬರುತ್ತವೆ. ಉಭಯ ಜಿಲ್ಲೆಗಳಲ್ಲಿ ಸುಮಾರು 2.80 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸುತ್ತ, ಶೇ. 20ರಿಂದ 30ರ ವರೆಗೆ ತೆರಿಗೆ ಪಾವತಿಸುವ ಕ್ಷೇತ್ರ ಇದಾಗಿದೆ.

Advertisement

ಶೇ. 70ರಷ್ಟು ಉದ್ದಿಮೆಗಳು
ಕೊರೊನಾ ಒಂದನೇ ಅಲೆಯ ಸಂದರ್ಭದ ಲಾಕ್‌ಡೌನ್‌ನಿಂದ ಸುಮಾರು 45 ದಿನಗಳ ಕಾಲ ಉದ್ದಿಮೆಗಳು ಸ್ಥಗಿತಗೊಂಡಿದ್ದವು. ಕ್ರಮೇಣ ಸಹಜ ಸ್ಥಿತಿಗೆ ಬರುವಷ್ಟರಲ್ಲೇ ಮತ್ತೂಮ್ಮೆ ಲಾಕ್‌ ಡೌನ್‌ ಘೋಷಿಸಲಾಯಿತು. ಉಭಯ ಜಿಲ್ಲೆಗಳಲ್ಲಿ ಅತ್ಯವಶ್ಯಕ ಶೇ. 25ರಿಂದ ಶೇ. 30 ಕೈಗಾರಿಕೆಗಳು ಮಾತ್ರ ಕಾರ್ಯಾಚರಿಸಿದ್ದು, ಉಳಿದ ಶೇ. 70ರಷ್ಟು ಕೈಗಾರಿಕೆಗಳನ್ನು 60 ದಿನ ಮುಚ್ಚಲಾಗಿತ್ತು.

ಎಂಎಸ್‌ಎಂಇ – ಪ್ರಮುಖ ಉದ್ದಿಮೆಗಳು
– ಆಹಾರ ಮತ್ತು ಕೃಷಿ ಆಧಾರಿತ ಘಟಕಗಳು
– ಸಿದ್ಧ ವಸ್ತು, ಜವುಳಿ
– ಪೇಪರ್‌ ಮತ್ತು ಪೇಪರ್‌ ಉತ್ಪನ್ನ ಉದ್ದಿಮೆಗಳು
– ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಆಧಾರಿತ ಉದ್ದಿಮೆಗಳು
– ಮರ ಮತ್ತು ಮರ ಆಧಾರಿತ ಪೀಠೊಪಕರಣ ಉದ್ದಿಮೆಗಳು
– ಚರ್ಮ ಆಧಾರಿತ ಉದ್ದಿಮೆಗಳು
– ಖನಿಜ ಆಧಾರಿತ ಉದ್ದಿಮೆಗಳು
– ಮೆಟಲ್‌ ಆಧಾರಿತ ಉದ್ದಿಮೆಗಳು
– ಎಂಜಿನಿಯರಿಂಗ್‌ ಘಟಕಗಳು,
– ಎಲೆಕ್ಟ್ರಿಕಲ್‌ ಮೆಷಿನರಿ
– ಟ್ಸಾನ್‌ಪೋರ್ಟ್‌ ಸಾಧನ ಉದ್ದಿಮೆಗಳು
– ದುರಸ್ತಿ, ಸೇವಾ ಚಟುವಟಿಕೆಗಳು

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next