Advertisement

ಉಪ ಚುನಾವಣೆ ಫಲಿತಾಂಶ: ಯುವ ಜನಾಂಗ ಆಕ್ರೋಶಗೊಂಡಿರುವ ಸಂಕೇತವಾಗಿದೆ:ರಕ್ಷಾ ರಾಮಯ್ಯ

07:01 PM Nov 02, 2021 | Team Udayavani |

ಬೆಂಗಳೂರು: ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಂದಿರುವ ಫಲಿತಾಂಶ ರಾಜ್ಯ ಕಾಂಗ್ರೆಸ್ ಗೆ ಹೊಸ ಹುರುಪು ನೀಡಿದ್ದು, ಬಿಜೆಪಿ ವಿರುದ್ಧ ಯುವ ಜನಾಂಗ ತಿರುಗಿ ಬಿದ್ದಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.

Advertisement

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಯುವ ಜನತೆ ಬಿಜೆಪಿ ವಿರುದ್ಧ ಬೇಸರಗೊಂಡಿದ್ದರು. ಎರಡೂ ಕ್ಷೇತ್ರಗಳ ಮತದಾನದಲ್ಲಿ ಇದು ಪ್ರತಿಬಿಂಬಿತವಾಗಿದೆ. ಅದರಲ್ಲೂ ವಿಶೇಷವಾಗಿ ಹಾನಗಲ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಯ ಯುವ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಬಿಜೆಪಿ ವಿರುದ್ಧ ಯುವ ಜನತೆ ಆಕ್ರೋಶಗೊಂಡಿರುವುದು ಇದರಿಂದ ಸ್ಪಷ್ಟವಾಗಿತ್ತು ಎಂದಿದ್ದಾರೆ.

ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಾ ರಾಮಯ್ಯ. ಸಾಮಾನ್ಯವಾಗಿ  ಉಪಚುನಾವಣೆಗಳು ಆಡಳಿತ ಪಕ್ಷದ ಪರವಾಗಿರುತ್ತವೆ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾನಗಲ್ ನಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ದಾಖಲಿಸುವ ಮೂಲಕ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಶುಭ ಯಾತ್ರೆ ಆರಂಭಿಸಿರುವುದಾಗಿ  ಹೇಳಿದ್ದಾರೆ.

ಈ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಬಿಜೆಪಿ ಅವನತಿಗೆ ಹಾದಿ ಸುಗಮವಾಗಲಿದೆ. ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಯಾವುದೇ ಗಿಮಿಕ್ ಮಾಡಿದರೂ ಜನ ಬಿಜೆಪಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಕಾಂಗ್ರೆಸ್ ವಲಯದಲ್ಲಿ ಆಶಾ ಭಾವನೆ ಮೂಡಿಸಿದೆ ಎಂದಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿಯು ಹಣ ಬಲ, ತೋಳ್ಬಲ ಮತ್ತು ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದ್ದು, ಇದರ ಪರಿಣಾಮ ಸಿಂಧಗಿಯಲ್ಲಿ ಬಿಜೆಪಿ ಗೆಲುವು ಸಾಧಿಸುವಂತಾಗಿದೆ. ಆದರೂ ಇಲ್ಲಿ ಜನತೆ ನೀಡಿರುವ ಜನಾದೇಶವನ್ನು ಗೌರವದಿಂದ ಸ್ವೀಕರಿಸುತ್ತೇವೆ. ಪಕ್ಷ ಸಂಘಟನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next