ಚೆನ್ನೈ: ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಎಂದಿಗೂ ಇರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಧೋನಿ ತಂಡವನ್ನು ಅತೀ ಹೆಚ್ಚು ಬಾರಿ ಪ್ಲೇಆಫ್ ಗೆ ಕರೆದೊಯ್ದ ಸಾಧನೆ ಮಾಡಿದ್ದಾರೆ. ಆದರೆ 2008ರಲ್ಲಿ ಆರಂಭದಲ್ಲಿ ಸಿಎಸ್ ಕೆ ಫ್ರಾಂಚೈಸಿ ಧೊನಿಯವರನ್ನು ಖರೀದಿಸುವ ಆಲೋಚನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಚೆನ್ನೈ ತಂಡದ ಭಾಗವಾಗಿದ್ದ ಎಸ್ ಬದ್ರಿನಾಥ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. 2008ರಲ್ಲಿ ಸಿಎಸ್ ಕೆ ಫ್ರಾಂಚೈಸಿಗೆ ನಾಯಕತ್ವ ವಹಿಸಲು ಧೋನಿ ಮೊದಲ ಆಯ್ಕೆ ಆಗಿರಲಿಲ್ಲ. ಮೊದಲ ಆಯ್ಕೆ ವೀರೆಂದ್ರ ಸೆಹವಾಗ್ ಆಗಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಲ್ಲಿಂಗ್ ಶತಕ ವ್ಯರ್ಥ: 150ನೇ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಆಸೀಸ್
ಯೂಟ್ಯೂಬ್ ಚಾನೆಲ್ ಒಂದಕ್ಕೆ ಮಾತನಾಡಿದ ಅವರು, ಚೊಚ್ಚಲ ಐಪಿಎಲ್ ನ ಹರಾಜಿಗೂ ಮೊದಲು ವೀರೆಂದ್ರ ಸೆಹವಾಗ್ ಅವರನ್ನು ನಾಯಕನನ್ನಾಗಿ ಮಾಡಲು ಸಿಎಸ್ ಕೆ ಯೋಚಿಸಿತ್ತು. ಆದರೆ ಸೆಹವಾಗ್ ಅವರ ತವರು ರಾಜ್ಯವಾದ ದಿಲ್ಲಿ ಫ್ರಾಂಚೈಸಿ ಪರ ಆಡಲು ನಿರ್ಧರಿಸಿದರು. ಆದ್ದರಿಂದ ಮಹೇಂದ್ರ ಸಿಂಗ್ ಧೋನಿಯನ್ನು ಖರೀದಿಸಿತು ಎಂದು ಹೇಳಿದ್ದಾರೆ.
2008ರಲ್ಲಿ ಸಿಎಸ್ ಕೆ ಮಹೇಂದ್ರ ಸಿಂಗ್ ಧೋನಿಯವರನ್ನು ಆರು ಕೋಟಿ ರೂಪಾಯಿಗೆ ಖರೀದಿಸಿತ್ತು. ಚೊಚ್ಚಲ ಹರಾಜಿನ ದುಬಾರಿ ಆಟಗಾರರಾಗಿದ್ದರು ಧೋನಿ.