Advertisement
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 2 ವಿಕೆಟಿಗೆ 202 ರನ್ ಪೇರಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್ (47) ಮತ್ತು ನಿಕೋಲಸ್ ಪೂರನ್ (ಅಜೇಯ 64) ಅದ್ಭುತವಾಗಿ ಆಡಿದರು. ಉಳಿದವರು ಈ ಮಟ್ಟಕ್ಕೆ ಏರದ್ದರಿಂದ ಅದು ಸೋಲಬೇಕಾಯಿತು. ಚೆನ್ನೈ ಪರ ಮುಕೇಶ್ ಚೌಧರಿ 46 ರನ್ ನೀಡಿ 4 ವಿಕೆಟ್ ಕಿತ್ತರು.
ಆರಂಭಿಕರಾದ ಋತುರಾಜ್ ಗಾಯಕ್ವಾಡ್-ಡೆವೋನ್ ಕಾನ್ವೆ ಆರಂಭದಿಂದಲೇ ಹೈದರಾಬಾದ್ ಬೌಲರ್‌ಗಳಿಗೆ ಬಿಸಿ ಮುಟ್ಟಿಸುತ್ತ ಹೋದರು. ಹತ್ತರ ಸರಾಸರಿಯಲ್ಲಿ ರನ್ ಪೇರಿಸಿ ಓಟ ಬೆಳೆಸಿದರು. 17.5 ಓವರ್ ತನಕ ಆರಂಭಿಕ ಜತೆಯಾಟ ವಿಸ್ತರಿಸಿ 182 ರನ್ ರಾಶಿ ಹಾಕಿದರು. ಇದು ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ದಾಖಲಾದ ಚೆನ್ನೈ ತಂಡದ ಅತೀ ದೊಡ್ಡ ಜತೆಯಾಟ. ಶತಕ ವಂಚಿತ ಗಾಯಕ್ವಾಡ್: ಈ ಋತುವಿನ ಆರಂಭದಿಂದಲೂ ತೀವ್ರ ರನ್ ಬರಗಾಲದಲ್ಲಿದ್ದ ಋತುರಾಜ್ ಗಾಯಕ್ವಾಡ್ ಇಲ್ಲಿ ಪ್ರಚಂಡ ಬ್ಯಾಟಿಂಗ್‌ಗೆ ಮುಂದಾದರು. ಶತಕದ ನಿರೀಕ್ಷೆಯನ್ನು ತೆರೆದಿರಿಸಿದರು. ಆದರೆ ಗಾಯಕ್ವಾಡ್‌ಗೆ ಅದೃಷ್ಟ ಕೈಕೊಟ್ಟಿತು. ಶತಕಕ್ಕಾಗಿ ಬಾರಿಸಿದ ಚೆಂಡು ನೇರವಾಗಿ ಭುವನೇಶ್ವರ್ ಕೈಸೇರಿತು! 57 ಎಸೆತ ನಿಭಾಯಿಸಿದ ಋತುರಾಜ್ 6 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿ ರಂಜಿಸಿದರು. ನ್ಯೂಜಿಲೆಂಡಿನ ಡೆವೋನ್ ಕಾನ್ವೆ 55 ಎಸೆತಗಳಿಂದ ಅಜೇಯ 85 ರನ್ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 8 ಬೌಂಡರಿ ಹಾಗೂ 4 ಸಿಕ್ಸರ್.
Related Articles
Advertisement
ಸಂಕ್ಷಿಪ್ತ ಸ್ಕೋರ್: ಚೆನ್ನೈ 20 ಓವರ್, 202/2 (ಋತುರಾಜ್ ಗಾಯಕ್ವಾಡ್ 99, ಡೆವೋನ್ ಕಾನ್ವೆ 85, ನಟರಾಜನ್ 42ಕ್ಕೆ 2). ಹೈದರಾಬಾದ್ 20 ಓವರ್, 189/6 (ನಿಕೋಲಸ್ ಪೂರನ್ 64, ವಿಲಿಯಮ್ಸನ್ 47, ಮುಕೇಶ್ ಚೌಧರಿ 46ಕ್ಕೆ 4).