Advertisement

ಇಂದು ಎದುರಾಗಲಿದ್ದಾರೆ ಇಬ್ಬರು “ಕಿಂಗ್ಸ್‌’

10:23 PM Apr 05, 2019 | mahesh |

ಚೆನ್ನೈ: ಧೋನಿ ಮತ್ತು ಅಶ್ವಿ‌ನ್‌ ನಡುವಿನ “ನಾಯಕತ್ವ ಸಾಮರ್ಥ್ಯದ ಹೋರಾಟ’ವೆಂದೇ ಬಿಂಬಿಸಲ್ಪಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಡುವಿನ ಐಪಿಎಲ್‌ ಹಣಾಹಣಿಗೆ ಶನಿವಾರ ವೇದಿಕೆ ಸಜ್ಜಾಗಿದೆ. ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಈ ಪಂದ್ಯ ನಡೆಯಲಿರುವುದರಿಂದ ಧೋನಿ ಪಡೆ ಇಲ್ಲಿ ಮೇಲುಗೈ ಸಾಧಿಸಬಹುದೆಂಬುದೊಂದು ಲೆಕ್ಕಾಚಾರ. ಆದರೆ ಪಂಜಾಬ್‌ ಸವಾಲು ಸುಲಭದ್ದಲ್ಲ ಎಂಬುದು ಮೇಲ್ನೋಟದಲ್ಲೇ ಸಾಬೀತಾಗುವ ಸಂಗತಿ.

Advertisement

ಸತತ 3 ಪಂದ್ಯಗಳನ್ನು ಗೆದ್ದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ಮೊದಲ ಸಲ ಸೋಲಿನ ರುಚಿ ಅನುಭವಿಸಿದೆ. ಬುಧವಾರ ಮುಂಬೈ ಇಂಡಿಯನ್ಸ್‌ ವಿರುದ್ಧ “ವಾಂಖೇಡೆ’ಯಲ್ಲಿ ನಡೆದ ಮುಖಾಮುಖೀಯಲ್ಲಿ ಚೆನ್ನೈ ಎಡವಿತ್ತು. ಮರಳಿ ಗೆಲುವಿನ ಹಳಿ ಏರಲು ಧೋನಿ ಪಡೆಗೆ ತವರಿನ ಪಂದ್ಯ ನೆರವು ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದೆಡೆ ಪಂಜಾಬ್‌ ಸೋಮವಾರದ ಮೊಹಾಲಿ ಪಂದ್ಯದಲ್ಲಿ ಡೆಲ್ಲಿಗೆ ಸೋಲುಣಿಸಿದ ಖುಷಿಯಲ್ಲಿದೆ. ನಾಯಕ ಆರ್‌. ಅಶ್ವಿ‌ನ್‌ಗೆ ಚೆನ್ನೈ ತವರಿನ ಅಂಗಳವಾದ್ದರಿಂದ ಇದರ ಲಾಭವೆತ್ತಲು ಅವರಿಗೂ ಸಾಧ್ಯವಿದೆ. ಹೀಗಾಗಿ ಇದೊಂದು 50-50 ಪಂದ್ಯ.

ಇಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತೀವ್ರ ಬ್ಯಾಟಿಂಗ್‌ ಕುಸಿತ ಅನುಭವಿಸಿ 70 ರನ್ನಿಗೆ ಗಂಟುಮೂಟೆ ಕಟ್ಟಿತ್ತು. ಬೆಂಗಳೂರು ತಂಡದ ಅನಂತರದ ಆಟ ಕಂಡಾಗ ಚೆನ್ನೈ ಪಿಚ್‌ನಲ್ಲಿ ದೋಷವೇನಿಲ್ಲ ಎಂಬುದು ಖಾತ್ರಿಯಾಗಿತ್ತು. ರಾಜಸ್ಥಾನ್‌ ವಿರುದ್ಧ ಧೋನಿ ಸಾಹಸದಿಂದ ಚೆನ್ನೈ 175 ರನ್‌ ಪೇರಿಸಿತ್ತು. ಜವಾಬಿತ್ತ ರಹಾನೆ ಪಡೆ 167ರ ತನಕ ಬಂದಿತ್ತು. ಎಚ್ಚರಿಕೆಯಿಂದ ಆಡಿದರೆ ಚೆನ್ನೈ ಟ್ರ್ಯಾಕ್‌ನಲ್ಲಿ ರನ್ನಿಗೇನೂ ಬರಗಾಲ ಎದುರಾಗದು ಎಂಬುದಕ್ಕೆ ಈ ಪಂದ್ಯವೇ ಸಾಕ್ಷಿಯಾಗಿದೆ.

ಸ್ಪಿನ್ನರ್‌ಗಳ ಮೇಲಾಟ
ಎರಡೂ ತಂಡಗಳಲ್ಲಿ ಕ್ಲಾಸ್‌ ಸ್ಪಿನ್ನರ್ ಇರುವುದರಿಂದ ಇದು ಸ್ಪಿನ್ನರ್‌ಗಳ ಮೇಲಾಟವಾಗಿ ಪರಿಣಮಿಸುವುದು ಬಹುತೇಕ ಖಚಿತ. ಜಡೇಜ, ತಾಹಿರ್‌, ಹರ್ಭಜನ್‌ ಅವರು ಚೆನ್ನೈ ತಂಡದ ಸ್ಪಿನ್‌ ಅಸ್ತ್ರವಾಗಿದ್ದಾರೆ. ಪಂಜಾಬ್‌ ತಂಡದಲ್ಲಿ ಅವಳಿ ಅಶ್ವಿ‌ನ್‌ ಇದ್ದಾರೆ-ನಾಯಕ ಆರ್‌. ಅಶ್ವಿ‌ನ್‌ ಮತ್ತು ಲೆಗ್‌ಸ್ಪಿನ್ನರ್‌ ಮುರುಗನ್‌ ಅಶ್ವಿ‌ನ್‌. ಜತೆಗೆ ಮಿಸ್ಟರಿ ಸ್ಪಿನ್ನರ್‌ ಸಿ.ವಿ. ವರುಣ್‌, ಮುಜೀಬ್‌ ಉರ್‌ ರೆಹಮಾನ್‌ ಕೂಡ ಅಪಾಯಕಾರಿಗಳೇ. ಹ್ಯಾಟ್ರಿಕ್‌ ಹೀರೋ ಸ್ಯಾಮ್‌ ಕರನ್‌ ಈಗಾಗಲೇ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.

Advertisement

ಪಂಜಾಬ್‌ ತಂಡದ ಅಗ್ರ ಕ್ರಮಾಂಕ ಅತ್ಯಂತ ಬಲಿಷ್ಠವಾಗಿದೆ. ಎ. ಒಂದರ ಡೆಲ್ಲಿ ಎದುರಿನ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿ ಹೊರಗುಳಿದಿದ್ದ ಪವರ್‌ ಹಿಟ್ಟರ್‌ ಕ್ರಿಸ್‌ ಗೇಲ್‌ ಶನಿವಾರ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ಡೇವಿಡ್‌ ಮಿಲ್ಲರ್‌ ಪೈಕಿ ಇಬ್ಬರು ಸಿಡಿದರೂ ಪಂಜಾಬ್‌ ಬೃಹತ್‌ ಮೊತ್ತ ದಾಖಲಿಸುವುದರಲ್ಲಿ ಅನುಮಾನವಿಲ್ಲ.

ಆದರೆ ಚೆನ್ನೈ ಆರಂಭದಲ್ಲಿ ಎಂದಿನ ಜೋಶ್‌ ಇಲ್ಲ. ವಾಟ್ಸನ್‌ ಅವರದು ಸಾಧಾರಣ ಪ್ರದರ್ಶನವಾದರೆ, ಅಂಬಾಟಿ ರಾಯುಡು ಸಂಪೂರ್ಣ ವಿಫ‌ಲರಾಗಿದ್ದಾರೆ. ರೈನಾ, ಜಾಧವ್‌, ಧೋನಿ ಅವರನ್ನು ತಂಡ ಹೆಚ್ಚಾಗಿ ಅವಲಂಬಿಸಿದೆ. ಗಾಯಾಳು ಆಲ್‌ರೌಂಡರ್‌ ಡ್ವೇನ್‌ ಬ್ರಾವೊ 2 ವಾರ ವಿಶ್ರಾಂತಿಯಲ್ಲಿದ್ದಾರೆ. ಇದು ಚೆನ್ನೈಗೆ ಭಾರೀ ಹಿನ್ನಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next