Advertisement

ಧೋನಿಗೆ ಪದ್ಮಭೂಷಣ; ಬಿಸಿಸಿಐ ಶಿಫಾರಸು

10:40 AM Sep 21, 2017 | |

ಹೊಸದಿಲ್ಲಿ: ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರನ್ನು ಶಿಫಾರಸು ಮಾಡಿದೆ. 

Advertisement

ಕ್ರಿಕೆಟ್‌ಗೆ ನೀಡಿದ ಮಹಾನ್‌ ಕೊಡುಗೆಗಾಗಿ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಧೋನಿ ಅವರ ಹೆಸರನ್ನು ಈ ವರ್ಷದ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಗೌರವಕ್ಕೆ ಧೋನಿ ಅವರ ಆಯ್ಕೆ ನಿರ್ಧಾರ ಅವಿ ರೋಧವಾಗಿತ್ತು ಮತ್ತು ಅವರೊಬ್ಬರನ್ನೇ ಪದ್ಮಪ್ರಶಸ್ತಿಗೆ ಹೆಸರಿಸಲಾಗಿದೆ ಎಂದು ಬಿಸಿಸಿಐಯ ಹಿರಿಯ ಅಧಿ ಕಾರಿಯೊಬ್ಬರು ದೃಢಪಡಿಸಿದ್ದಾರೆ.

ಧೋನಿ ಅವರ ಸಾಧನೆ ಅಸಾಮಾನ್ಯವಾದುದ್ದು. ಅವರು ಎರಡು ವಿಶ್ವಕಪ್‌ (2011ರಲ್ಲಿ 50 ಓವರ್‌ಗಳ ವಿಶ್ವಕಪ್‌  ಮತ್ತು 2007ರಲ್ಲಿ ಟ್ವೆಂಟಿ20 ವಿಶ್ವಕಪ್‌) ಗೆದ್ದ ಭಾರತದ ಏಕೈಕ ನಾಯಕರಾಗಿದ್ದಾರೆ. ಹಾಗಾಗಿ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂಧು ಪ್ರಭಾರ ಅಧ್ಯಕ್ಷ ಸಿ.ಕೆ. ಖನ್ನಾ ಹೇಳಿದ್ದಾರೆ. 

ಅವರೊಬ್ಬ ಏಕದಿನ ಕ್ರಿಕೆಟ್‌ನ ಸರ್ವಶ್ರೇಷ್ಠ ಕ್ರಿಕೆಟಿಗ. ಅವರು ಹತ್ತಿರ ಹತ್ತಿರ 10 ಸಾವಿರ ರನ್‌ ಪೇರಿಸಿದ ಆಟಗಾರರಾಗಿದ್ದಾರೆ. ಹೆಚ್ಚಿನ ಆಟಗಾರರು 90 ಟೆಸ್ಟ್‌ ಪಂದ್ಯಗಳನ್ನು ಆಡಿರಲಿಕ್ಕಿಲ್ಲ. ಪ್ರತಿಷ್ಠಿತ ಪ್ರಶಸ್ತಿಗೆ ಧೋನಿ ಅವರಿಗಿಂತ ಒಳ್ಳೆಯ ಕ್ರಿಕೆಟಿಗ ಸದ್ಯ ಇರಲಿಕ್ಕಿಲ್ಲ ಎಂದು ಖನ್ನಾ ತಿಳಿಸಿದರು. ಈ ವರ್ಷದ ಪದ್ಮ ಪ್ರಶಸ್ತಿಗೆ ಬಿಸಿಸಿಐ ಧೋನಿ ಹೊರತುಪಡಿಸಿ ಉಳಿದ ಯಾವುದೇ ಕ್ರಿಕೆಟಿಗರ ಹೆಸರನ್ನು ಶಿಫಾರಸು ಮಾಡಿಲ್ಲ.

36ರ ಹರೆಯದ ಧೋನಿ 302 ಏಕದಿನ ಪಂದ್ಯಗಳನ್ನಾಡಿದ್ದು 9737  ರನ್‌ ಬಾರಿಸಿದ್ದಾರೆ. 90 ಟೆಸ್ಟ್‌ ಆಡಿರುವ ಅವರು 4876 ರನ್‌ ಬಾರಿಸಿದ್ದಾರಲ್ಲದೇ 78 ಟ್ವೆಂಟಿ20 ಪಂದ್ಯಗಳನ್ನಾಡಿ 1212 ರನ್‌ ಹೊಡೆದಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಒಟ್ಟಾರೆ 16  ಶತಕ ಬಾರಿಸಿರುವ (ಟೆಸ್ಟ್‌ -6 ಮತ್ತು 11ಏಕದಿನ 10) ಧೋನಿ 100 ಅರ್ಧಶತಕ ಹೊಡೆದಿದ್ದಾರೆ. ವಿಕೆಟ್‌ಕೀಪರ್‌ ಆಗಿ ಧೋನಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ಗಳಲ್ಲಿ 584 ಕ್ಯಾಚ್‌ ಪಡೆದಿದ್ದಾರೆ. 163 ಸ್ಟಂಪಿಂಗ್‌ ಮಾಡಿದ್ದಾರೆ.

Advertisement

ಧೋನಿ ಈ ಹಿಂದೆ ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಒಂದು ವೇಳೆ ಪದ್ಮಭೂಷಣ್‌ ಗೌರವಕ್ಕೆ ಪಾತ್ರರಾದರೆ ಈ ಗೌರವ ಸ್ವೀಕರಿಸಿದ ಭಾರತದ 11ನೇ ಕ್ರಿಕೆಟಿಗರಾಗಲಿದ್ದಾರೆ. ಸಚಿನ್‌ ತೆಂಡುಲ್ಕರ್‌, ಕಪಿಲ್‌ ದೇವ್‌, ಸುನೀಲ್‌ ಗಾವಸ್ಕರ್‌, ರಾಹುಲ್‌ ದ್ರಾವಿಡ್‌, ಚಂದು ಬೋರ್ಡೆ, ಪ್ರೊ| ಡಿಬಿ ದೇವಧರ್‌, ಕರ್ನಲ್‌ ಸಿಕೆ ನಾಯ್ಡು ಮತ್ತು ಲಾಲಾ ಅಮರ್‌ನಾಥ್‌ ಈ ಹಿಂದೆ ಪದ್ಮಭೂಷಣ್‌ ಪ್ರಶಸ್ತಿ  ಸ್ವೀಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next