ಚೆನ್ನೈ: ಬುಧವಾರದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ವೀರೋಚಿತ ಗೆಲುವು ಸಾಧಿಸಿದೆ. ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡವು ಮೂರು ರನ್ ಅಂತರದ ಗೆಲುವು ಸಾಧಿಸಿತು.
ಸಿಎಸ್ ಕೆ ನಾಯಕನಾಗಿ 200ನೇ ಪಂದ್ಯವಾಡಿದ ಧೋನಿ ಕೇವಲ 17 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 32 ರನ್ ಗಳಿಸಿದರು. ಅಲ್ಲದೆ ರವೀಂದ್ರ ಜಡೇಜಾ ಅವರೊಂದಿಗೆ ಅಮೂಲ್ಯ ಜೊತೆಯಾಟವನ್ನು ಆಡಿದರು.
ಪಂದ್ಯದ ನಂತರ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಆತಂಕಕಾರಿ ಸುದ್ದಿಯನ್ನು ಬಹಿರಂಗಪಡಿಸಿದರು. ನಾಯಕ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.
“ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರಿಗೆ ಸ್ವಲ್ಪಮಟ್ಟಿಗೆ ಅಡ್ಡಿಯಾಗುತ್ತಿದೆ. ಅವರ ಫಿಟ್ನೆಸ್ ಯಾವಾಗಲೂ ತುಂಬಾ ವೃತ್ತಿಪರವಾಗಿದೆ. ಅವರು ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಅಭ್ಯಾಸಕ್ಕೆ ಬರುತ್ತಾರೆ. ಅವರು ಶ್ರೇಷ್ಠ ಆಟಗಾರ. ಅದರಲ್ಲಿ ಎಂದಿಗೂ ಅನುಮಾನವಿಲ್ಲ” ಎಂದು ಫ್ಲೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:Karnataka Polls ನಾಳೆ ಜೆಡಿಎಸ್ ಗೆ ದೊಡ್ಡ ಮಟ್ಟದಲ್ಲಿ ಮುಖಂಡರ ಸೇರ್ಪಡೆ: ಕುಮಾರಸ್ವಾಮಿ
ಧೋನಿ ಗಾಯದಿಂದ ಬಳಲುತ್ತಿದ್ದಾರೆ ಎಂದು ದೃಢಪಟ್ಟಿದ್ದರೂ, ಮೊಣಕಾಲಿನ ಸಮಸ್ಯೆಯು ಧೋನಿಯನ್ನು ಮುಂಬರುವ ಪಂದ್ಯಗಳನ್ನು ಆಡದಂತೆ ತಡೆಯಬಹುದು ಎಂದು ಫ್ಲೆಮಿಂಗ್ ಸೂಚಿಸಲಿಲ್ಲ.
ಚೆನ್ನೈ ಕೆಲವು ವಾರಗಳ ಕಾಲ ವೇಗಿ ಸಿಸಂದಾ ಮಗಾಲಾ ಅವರ ಸೇವೆಯನ್ನು ಕಳೆದುಕೊಳ್ಳಲಿದೆ ಎಂದು ಫ್ಲೆಮಿಂಗ್ ಖಚಿತಪಡಿಸಿದ್ದಾರೆ. “ದುರದೃಷ್ಟವಶಾತ್ ಮಗಾಲಾ ಅವರ ಬೆರಳು ಒಡೆದಿತ್ತು, ಆದ್ದರಿಂದ ಅವರು ಕೊನೆಯ ಎರಡು ಓವರ್ ಗಳನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ” ಎಂದು ಫ್ಲೆಮಿಂಗ್ ಹೇಳಿದರು.