Advertisement

ಧೋನಿಯ ಪಾಕ್‌ ಅಭಿಮಾನಿ “ಚಾಚಾ ಶಿಕಾಗೊ’ಕೂಡ ನಿವೃತ್ತಿ!

08:23 PM Aug 17, 2020 | mahesh |

ಹೊಸದಿಲ್ಲಿ: ಧೋನಿ ಬೆನ್ನಲ್ಲೇ ಸುರೇಶ್‌ ರೈನಾ ನಿವೃತ್ತಿ ಘೋಷಿಸಿದ್ದು ಈಗ ಇತಿಹಾಸ. ಈಗ ಧೋನಿ ಅವರ ಪಾಕ್‌ ಅಭಿಮಾನಿ ಮೊಹಮ್ಮದ್‌ ಬಶೀರ್‌ ಸರದಿ. ಧೋನಿ ಕ್ರಿಕೆಟ್‌ ಆಡದ ಮೇಲೆ ತಾನು ಕೂಡ ಅವರಿಲ್ಲದ ಪಂದ್ಯಗಳನ್ನು ಇನ್ನು ನೋಡಲು ಹೋಗುವುದಿಲ್ಲ ಎಂದಿದ್ದಾರೆ 65 ವರ್ಷದ ಬಶೀರ್‌.

Advertisement

ಕೈಯಲ್ಲಿ ಭಾರತ-ಪಾಕಿಸ್ಥಾನ ದೇಶಗಳ ಜಂಟಿ ಧ್ವಜ, ಪಾಕಿಸ್ಥಾನದ ಹಸಿರು ನಿಲುವಂಗಿ, ಅದರ ಮೇಲೆ ಧೋನಿ ಚಿತ್ರ. ಜಗತ್ತಿನ ಯಾವ ಮೂಲೆಯಲ್ಲೂ ಭಾರತ-ಪಾಕಿಸ್ಥಾನ ಪಂದ್ಯ ನಡೆಯಲಿ, ಇಳಿ ವಯಸ್ಸಿನ ಈ ಅಭಿಮಾನಿ ಹಾಜರ್‌. ಶಿಕಾಗೊದಲ್ಲಿ ಹೊಟೇಲ್‌ ನಡೆಸುತ್ತಿರುವ ಕಾರಣ ಇವರು “ಚಾಚಾ ಶಿಕಾಗೊ’ ಕೂಡ ಹೌದು!

ಒಂದೆಡೆ ಪಾಕ್‌ ಅಭಿಮಾನಿಗಳು ತಮ್ಮ ತಂಡದ ಪರ ಘೋಷಣೆ ಕೂಗುತ್ತಿದ್ದರೆ, ಇವರ ನಡುವೆಯೇ ಇರುತ್ತಿದ್ದ ಬಶೀರ್‌, ಧೋನಿಯನ್ನು ಬೆಂಬಲಿಸುವ ದೃಶ್ಯ ಅತ್ಯಂತ ರಮಣೀಯವಾಗಿರುತ್ತಿತ್ತು. ಇವರಿಗೆ ಪಂದ್ಯದ ಟಿಕೆಟ್‌ ವ್ಯವಸ್ಥೆ ಮಾಡಿಕೊಡುತ್ತಿದ್ದುದೇ ಧೋನಿ.

ಆತ್ಮೀಯತೆಯ ಬೆಸುಗೆ
“ಧೋನಿ ನಿವೃತ್ತರಾದರು. ನಾನು ಕೂಡ ಇನ್ನು ನಿವೃತ್ತ. ಧೋನಿ ಇಲ್ಲದ ಪಂದ್ಯಗಳಲ್ಲಿ ಇನ್ನು ನನ್ನನ್ನು ಕಾಣಲು ಸಾಧ್ಯವಿಲ್ಲ. ನಾನು ಧೋನಿಯವರನ್ನು ಅತಿಯಾಗಿ ಗೌರವಿಸುತ್ತೇನೆ, ಅವರೂ ನನ್ನನ್ನು ಪ್ರೀತಿಸುತ್ತಾರೆ. ಪ್ರೀತಿಯ ಈ ನಂಟು, ಆತ್ಮೀಯತೆಯ ಬೆಸುಗೆ ಮುಂದೆಯೂ ಇರುತ್ತದೆ…’ ಎಂದು ಬಶೀರ್‌ ಶಿಕಾಗೊದಿಂದ ದೂರವಾಣಿ ಮೂಲಕ ಪಿಟಿಐ ಜತೆ ಹೇಳಿಕೊಂಡಿದ್ದಾರೆ.

“ಎಲ್ಲ ಮಹಾನ್‌ ಆಟಗಾರರಿಗೂ ನಿವೃತ್ತಿಯ ದಿನವೆಂಬುದು ಇರುತ್ತದೆ. ಈಗ ಧೋನಿ ಸರದಿ. ಆದರೆ ಅವರ ಕ್ರಿಕೆಟ್‌ ವಿದಾಯದ ರೀತಿ ನನಗೆ ಬಹಳ ಬೇಸರ ಮೂಡಿಸಿದೆ. ಅವರಿಗೊಂದು ಸ್ಮರಣೀಯ ಬೀಳ್ಕೊಡುಗೆ ಬೇಕಿತ್ತು. ಇದಕ್ಕೆ ಅವರು ಹಕ್ಕುದಾರರೂ ಆಗಿದ್ದರು’ ಎಂದು ಬಶೀರ್‌ ನೋವಿನಿಂದ ಹೇಳಿದರು.

Advertisement

ಧೋನಿ-ಬಶೀರ್‌ ನಡುವಿನ ನಂಟು ಗಾಢವಾದದ್ದು 2011ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದ ಮೂಲಕ. ಅದು ಮೊಹಾಲಿ ಮುಖಾಮುಖೀ. ಈ “ಬಿಗ್ಗೆಸ್ಟ್‌ ಗೇಮ್‌’ಗಾಗಿ ಬಶೀರ್‌ಗೆ ಟಿಕೆಟ್‌ ಒಂದನ್ನು ತೆಗೆಸಿಕೊಟ್ಟಿದ್ದರು ಧೋನಿ.

ಬರ್ಮಿಂಗ್‌ಹ್ಯಾಮ್‌ ಪಂದ್ಯವೊಂದರ ವೇಳೆ ಧೋನಿಯನ್ನು ಬೆಂಬಲಿಸುತ್ತಿದ್ದಾಗ ಪಾಕ್‌ ಅಭಿಮಾನಿಗಳು ಕಿರಿಕ್‌ ಮಾಡಿದ್ದನ್ನೂ ಬಶೀರ್‌ ನೆನಪಿಸಿಕೊಂಡರು. “ನನ್ನನ್ನು ಗದ್ದರ್‌ ಎಂದೂ ನಿಂದಿಸಿದ್ದರು. ನಾನು ಎರಡೂ ದೇಶಗಳನ್ನು ಪ್ರೀತಿಸುತ್ತೇನೆ. ಮಾನವೀಯತೆಗೆ ಮೊದಲ ಆದ್ಯತೆ’ ಎಂದರು.

ಮುಂದಿನ ನಿಲ್ದಾಣ ರಾಂಚಿ!
ಮೂರು ಬಾರಿ ಹೃದಯಾಘಾತವಾದರೂ ಜಗ್ಗದೆ ಧೋನಿ ಪಂದ್ಯ ವೀಕ್ಷಿಸಲು ಲೋಕ ಸುತ್ತುತ್ತಿದ್ದ ಬಶೀರ್‌ ಅವರ ಮುಂದಿನ ನಿಲ್ದಾಣ ರಾಂಚಿಯಂತೆ! “ಕೋವಿಡ್ ನಿಯಂತ್ರಣಕ್ಕೆ ಬಂದೊಡನೆಯೇ ನಾನು ರಾಂಚಿಯಲ್ಲಿರುವ ಧೋನಿ ಮನೆಗೆ ಹೋಗಲಿದ್ದೇನೆ. ಧೋನಿಯವರ ನಿವೃತ್ತ ಜೀವನ ಹಾಗೂ ಭವಿಷ್ಯ ಉಜ್ವಲಗೊಳ್ಳಲಿ ಎಂದು ಶುಭ ಹಾರೈಸಬೇಕಿದೆ. ನನ್ನ ಮೊಹಾಲಿಯ ಮಿತ್ರ, ಧೋನಿ ಅವರ ಮತ್ತೋರ್ವ ಫ್ಯಾನ್‌ ರಾಮ್‌ ಬಾಬು ಅವರನ್ನೂ ಕರೆದುಕೊಂಡು ಹೋಗೆಬೇಕೆಂದಿದ್ದೇನೆ’ ಎಂದರು.

ಐಪಿಎಲ್‌ನಲ್ಲಿ ಚೆನ್ನೈ ಪಂದ್ಯಗಳನ್ನು ನೋಡಲು ಹೋಗಬೇಕೆಂದಿದ್ದರೂ ಆರೋಗ್ಯ ಸ್ಥಿತಿ ಹಾಗೂ ಕೊರೊನಾದಿಂದಾಗಿ ಈ ನಿರ್ಧಾರವನ್ನು ಕೈಬಿಟ್ಟಿದ್ದಾಗಿ ಬಶೀರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next