ಕೇಪ್‌ಟೌನ್:ಗುರುವಾರದ ಕೇಪ್‌ಟೌನ್ ಪಂದ್ಯದಲ್ಲಿ ಭಾರತದ ಕೀಪರ್ ಮಹೇಂದ್ರ ಸಿಂಗ್ ಧೋನಿ ವಿಶಿಷ್ಟ ಸಾಧನೆಯೊಂದಿಗೆ ಗುರುತಿಸಲ್ಪಟ್ಟರು. ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 400 ಕ್ಯಾಚ್/ಸ್ಟಂಪಿಂಗ್ ನಡೆಸಿದ ಭಾರತದ ಮೊದಲ ಹಾಗೂ ವಿಶ್ವದ ಕೇವಲ 4ನೇ ಕೀಪರ್ ಆಗಿ ಮೂಡಿಬಂದರು.
ಎದುರಾಳಿ ನಾಯಕ ಐಡನ್ ಮಾರ್ಕ್‌ರಮ್ ಅವರನ್ನು ಸ್ಟಂಪ್ಡ್ ಮಾಡುವ ಮೂಲಕ ಧೋನಿ ಈ ಮೈಲುಗಲ್ಲು ನೆಟ್ಟರು. ಇದು ಅವರ 315ನೇ ಏಕದಿನ ಪಂದ್ಯ. ಬಳಿಕ ಮಿಲ್ಲರ್ ಅವರ ಕ್ಯಾಚ್ ಪಡೆದು ಈ ಬೇಟೆಯನ್ನು 401ಕ್ಕೆ ಏರಿಸಿದರು.
ಧೋನಿ ಅವರ ಈ 401 ಸಾಧನೆಯಲ್ಲಿ 106 ಸ್ಟಂಪಿಂಗ್‌ಗಳೇ ಸೇರಿವೆ. ಕ್ಯಾಚ್‌ಗಳ ಸಂಖ್ಯೆ 295. ಅವರು ಏಕದಿನ ಇತಿಹಾಸದಲ್ಲಿ 100 ಸ್ಟಂಪಿಂಗ್ ನಡೆಸಿದ ವಿಶ್ವದ ಏಕೈಕ ಕೀಪರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಏಕದಿನದಲ್ಲಿ 400 ಕ್ಯಾಚ್ ಪ್ಲಸ್ ಸ್ಟಂಪಿಂಗ್ ನಡೆಸಿದ ಉಳಿದ ಮೂವರು ಸಾಧಕರೆಂದರೆ ಕುಮಾರ ಸಂಗಕ್ಕರ-482 (383/99), ಆ್ಯಡಂ ಗಿಲ್‌ಕ್ರಿಸ್ಟ್-472 (417/55) ಮತ್ತು ಮಾರ್ಕ್ ಬೌಷರ್-424 (402/22).
ಧೋನಿ ಹೊರತುಪಡಿಸಿದರೆ ಸಮಕಾಲೀನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಕೀಪರ್ ಎಂದರೆ ಬಾಂಗ್ಲಾದೇಶದ ಮುಶ್ಫಿಕರ್ ರಹೀಂ. ಸದ್ಯ ಅವರು 144 ಕ್ಯಾಚ್ ಹಾಗೂ 41 ಸ್ಟಂಪಿಂಗ್ ಮಾಡಿದ್ದಾರೆ.