ಪಡುಪಣಂಬೂರು: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿರುವ ಬಾಂದ ಕೆರೆಯನ್ನು ಸಂಪೂರ್ಣವಾಗಿ ಎಂಆರ್‌ಪಿಎಲ್ ಸಂಸ್ಥೆಯು ಅಭಿವೃದ್ಧಿ ಪಡಿಸಲಿದ್ದು ಇದರ ನೀಲ ನಕ್ಷೆ ಹಾಗೂ ಯೋಜನೆಯ ಉಸ್ತುವಾರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಎಂಜಿನಿಯರಿಂಗ್ ವಿಭಾಗವು ನಿಭಾಯಿಸಲಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ| ಸೆಲ್ವಮಣಿ ಹೇಳಿದರು.
ಪಡುಪಣಂಬೂರು ಗ್ರಾ.ಪಂ.ನ ಬಾಂದ ಕೆರೆಯ ಪ್ರದೇಶಕ್ಕೆ ವಿಶೇಷ ತಂಡದೊಂದಿಗೆ ತೆರಳಿ ಅನಂತರ ಮಾಧ್ಯಮ
ದೊಂದಿಗೆ ಅವರು ಮಾತನಾಡಿದರು.
ಎಂಆರ್‌ಪಿಎಲ್‌ನ ಚೀಫ್ ಜನರಲ್ ಮ್ಯಾನೇಜರ್ ಹರೀಶ್ ಬಾಳಿಗಾ ಪ್ರತಿಕ್ರಿಯಿಸಿ, ಸಂಸ್ಥೆಯ ಸಿಆರ್‌ಎಫ್‌ನ ಯೋಜನೆಯಲ್ಲಿ ಕೆರೆ ಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಇಚ್ಛಿಸಲಾಗಿದೆ. ಕೆರೆಯನ್ನು ಪಾರಂಪರಿಕವಾಗಿಯೇ ನಿರ್ಮಿಸುವುದು, ಸುತ್ತಮುತ್ತ ವಾಕ್‌ಪಾತ್, ರಕ್ಷಣಾ ಬೇಲಿ ಸಹಿತ ಉದ್ಯಾನವನ ನಿರ್ಮಾಣದ ಬಗ್ಗೆ ಚಿಂತನೆ ಇದೆ. ಜಿಲ್ಲಾ ಪಂಚಾಯತ್‌ನ ಎಂಜಿನಿಯರ್‌ಗಳು ರೂಪಿಸುವ ನೀಲನಕ್ಷೆ ಸಹಿತ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ ವರ್ಷದ ಅವಧಿಯಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ನ ಸದಸ್ಯ ವಿನೋದ್ ಬೊಳ್ಳೂರು, ಪಡುಪಣಂಬೂರು ಗ್ರಾ.ಪಂ.ನ ಅಧ್ಯಕ್ಷ ಮೋಹನ್‌ದಾಸ್, ಮೂಲ್ಕಿ ಅರಮನೆಯ ಗೌತಮ್ ಜೈನ್, ಪಂಚಾಯತ್ ಸದಸ್ಯರು ಸಲಹೆಗಳನ್ನು ನೀಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು, ಎಂಆರ್‌ಪಿಎಲ್‌ನ ಸೀನಿಯರ್ ಮ್ಯಾನೇಜರ್ ರಾಮ ಸುಬ್ರಹ್ಮಣ್ಯಂ ,ಜಿ.ಪಂ.ಎಂಜಿನಿಯರ್‌ಗಳಾದ ಪ್ರಭಾಕರ್, ಪ್ರಶಾಂತ್ ಆಳ್ವ. ಪಡುಪಣಂಬೂರು ಗ್ರಾ.ಪಂ.ಸದಸ್ಯರಾದ ಉಮೇಶ್ ಪೂಜಾರಿ ಪಿ.,ಮಂಜುಳಾ,ಪಂ.ಅಭಿವೃದ್ಧಿ ಅಧಿ ಕಾರಿ ಅನಿತಾ ವಿ.ಕ್ಯಾಥರಿನ್,ಕಾರ್ಯದರ್ಶಿ ಲೋಕನಾಥ ಭಂಡಾರಿ,ಸಿಬಂದಿ,ಗ್ರಾಮಸ್ಥರು ಉಪಸ್ಥಿತರಿದ್ದರು.
ಕೃಷಿಗೆ ವರದಾನ
ಸುಮಾರು 30 ಸೆಂಟ್ಸ್ ಸರಕಾರಿ ಭೂಮಿಯಾಗಿರುವ ಬಾಂದ ಕೆರೆಯಲ್ಲಿನ ನೀರು ಇಲ್ಲಿನ ಕಂಬಳ,ಕೃಷಿ ಭೂಮಿಗಳಿಗೆ ವರದಾನವಾಗಿದೆ.ಇದರಲ್ಲಿ ಈಗ ಹೂಳು ತುಂಬಿದ್ದರೂ ಕನಿಷ್ಠ 7ರಿಂದ 8 ಅಡಿ ನೀರಿದೆ.ಹೂಳೆತ್ತಿ,
ಆಳವಾಗಿಸಿದರೆ ಉಪ್ಪು ನೀರಿನ ಅಪಾಯವು ಇದೆ.ಕೆರೆ ಅಭಿವೃದ್ಧಿ ಪಡಿಸಿದರೆ ಸುತ್ತ ಮುತ್ತಲಿನ 3 ಕಿ.ಮೀ. ವ್ಯಾಪ್ತಿಯ ನೀರಿನ ಒರತೆಗೆ ಜೀವಜಲವಾಗಲಿದೆ.
ಎಚ್ಚರಿಸಿದ್ದ ಉದಯವಾಣಿ ಸುದಿನ
ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಕೆರೆಗಳು ಹಾಗೂ ಅದರ ಅವಶ್ಯಕತೆ ಬಗ್ಗೆ ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು. ಆ ವರದಿಗಳು ಸಹ ಮನವಿಯೊಂದಿಗೆ ಸಲ್ಲಿಕೆ ಮಾಡಲಾಗಿತ್ತು.
ಎರಡು ವರ್ಷಗಳ ಹಿಂದೆಯೇ ಯೋಜನೆ
ಪಡುಪಣಂಬೂರು ಗ್ರಾ.ಪಂ. ಶಾಶ್ವತ ಕುಡಿಯುವ ನೀರಿಗಾಗಿ ಯೋಜನೆಯನ್ನು ಎರಡು ವರ್ಷಗಳ ಹಿಂದೆಯೇ ರೂಪಿಸಿತ್ತು. ಅದರಂತೆ ಎಂಆರ್‌ಪಿಎಲ್‌ಗೆ ಜಿ.ಪಂ.ನ ಮಾರ್ಗದರ್ಶನದಲ್ಲಿ ಮನವಿ ನೀಡಲಾಗಿತ್ತು. ನಿರಂತರ ಪ್ರಯತ್ನದಿಂದ ಇಂದು ಅದು ಫಲ ನೀಡಿದೆ. ತೋಕೂರಿನಲ್ಲಿ ಕಿಂಡಿ ಅಣೆಕಟ್ಟುಗಳು ಆಸರೆಯಾದರೇ ಪಡುಪಣಂಬೂರು, ಬೆಳ್ಳಾಯರುವಿನ ಒಂದು ಭಾಗಕ್ಕೆ ಬಾಂದ ಕೆರೆ ನೆರವಾಗಲಿದೆ.
- ಅನಿತಾ ಕ್ಯಾಥರಿನ್,
ಅಭಿವೃದ್ಧಿ ಅಧಿಕಾರಿ, ಪಡುಪಣಂಬೂರು ಗ್ರಾ.ಪಂ.