ಮಾರುಕಟ್ಟೆಯಲ್ಲಿ ಅಂಗಡಿ-ಮುಂಗಟ್ಟುಗಳ ಮುಂದೆ “ಎಂಆರ್‌ಪಿ’ ಎಂಬ ಬೋರ್ಡ್‌ಗಳನ್ನು ನೇತು ಹಾಕಿರುವುದನ್ನು ನೀವು ನೋಡಿರುತ್ತೀರಿ. ಈಗ ಇದೇ “ಎಂಆರ್‌ಪಿ’ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ.
ಅಂದಹಾಗೆ, ಈ ಹಿಂದೆ “ನನ್ ಮಗಳೇ ಹೀರೋಯಿನ್’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಬಾಹುಬಲಿ “ಎಂಆರ್‌ಪಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ “ಎಂಆರ್‌ಪಿ’ ಅಂದರೆ, “ಮೋಸ್ಟ್ ರೆಸ್ಪಾಂಸಿಬಲ್ ಪರ್ಸನ್’ ಅಂಥ ಅರ್ಥವಂತೆ. ಇಲ್ಲಿಯವರೆಗೆ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಫ್ಟ್ವೇರ್ ಇಂಜಿನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಎಂಆರ್‌ಪಿ’ ಚಿತ್ರವನ್ನು ಇದೇ ಅಕ್ಟೋಬರ್ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಸದ್ಯ ನಿಧಾನವಾಗಿ “ಎಂಆರ್‌ಪಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟರಾದ ವಸಿಷ್ಟ ಸಿಂಹ, ಸಾಧುಕೋಕಿಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ “ಎಂಆರ್‌ಪಿ’ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಎಂಆರ್‌ಪಿ’ ಅಂದರೆ, ಎಲ್ಲರಿಗೂ ಬಾರ್ ನೆನಪಾಗುತ್ತೆ. ಆದರೆ ಇಲ್ಲಿ, “ಎಂಆರ್‌ಪಿ” ಅಂದರೆ ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಎಂದರ್ಥ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ. ಅವರ ಬಾಡಿಗೆ ಅವರವರೇ ಜವಾಬ್ದಾರಿ ಆಗುತ್ತಾರೆ ವಿನಃ, ಬೇರೆ ಯಾರೂ ಆಗಲ್ಲ. ತಮ್ಮ ಬಾಡಿಯ ಜವಾಬ್ದಾರಿ ಏನೆಂಬುದು ಅವರಿಗಷ್ಟೇ ಗೊತ್ತಿರುತ್ತೆ. ಇಲ್ಲಿರುವ ಹೀರೋ ಕೂಡ ತುಂಬಾ ಜವಾಬ್ದಾರಿ ಇರುವ ವ್ಯಕ್ತಿ. ಅದು ಹೇಗೆ ಎಂಬುದನ್ನು ಕಾಮಿಡಿ ರೂಪದಲ್ಲಿ ತೋರಿಸಲಾಗಿದೆ ಎಂಬುದು ಚಿತ್ರತಂಡದ ಮಾತು.
ಇನ್ನು “ಎಂಆರ್‌ಪಿ’ ಚಿತ್ರವನ್ನು ನಿರ್ದೇಶಕ ಎಂ. ಡಿ ಶ್ರೀಧರ್, ಛಾಯಾಗ್ರಹಕ ಕೃಷ್ಣ ಕುಮಾರ್ (ಕೆ.ಕೆ), ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹರ್ಷವರ್ಧನ ಸಂಗೀತ ಸಂಯೋಜಿಸುತ್ತಿದ್ದು, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನವಿದೆ.
ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ “ಎಂಆರ್‌ಪಿ’ ಚಿತ್ರದಲ್ಲಿ ಹರಿ ಅವರೊಂದಿಗೆ, ವಿಜಯ್ ಚೆಂಡೂರ್, ಬಾಲ ರಾಜವಾಡಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಡೀ ಸಿನಿಮಾದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟು, ಹ್ಯೂಮರಸ್ ಆಗಿ ಕಥೆಯನ್ನು ಹೇಳಲಾಗಿದೆ. ಸಿನಿಮಾದ ದೃಶ್ಯದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ನಟ ಜಗ್ಗೇಶ್ ಧ್ವನಿಯನ್ನು ನೀಡಿದ್ದಾರೆ. ಅದನ್ನು ಚಿತ್ರದಲ್ಲಿ ಒಂದೊಳ್ಳೆ ಸಂದೇಶದ ಜೊತೆ ಪ್ರೇಕ್ಷಕರಿಗೆ ಕೇಳಿಸಲಾಗುವುದು ಎಂದಿದೆ ಚಿತ್ರತಂಡ.