Advertisement

ಜಿಎಸ್‌ಟಿ ಜಾರಿಯಾದ್ರೂ ಎಂಆರ್‌ಪಿ ಬದಲಾಗಿಲ್ಲ!

02:45 AM Jul 16, 2017 | Harsha Rao |

ಬೆಂಗಳೂರು: ಜಿಎಸ್‌ಟಿ ಜಾರಿ ಬಳಿಕ ಅಬಕಾರಿ ಸುಂಕದ ವ್ಯಾಪ್ತಿಯಲ್ಲಿದ್ದ ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ ಹುಸಿಯಾಗಿದೆ. ಜುಲೈ 1ರಿಂದ ಹೊಸ ಎಂಆರ್‌ಪಿ ದರಪಟ್ಟಿ ಮುದ್ರಿಸಿ ಪರಿಷ್ಕೃತ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಬೇಕೆಂಬ ನಿಯಮ ಪಾಲನೆಯಾಗದ ಕಾರಣ ಗ್ರಾಹಕರಿಗೆ ಜಿಎಸ್‌ಟಿ ಲಾಭ ಸಿಗದಂತಾಗಿದ್ದು, ಸಗಟುದಾರರು, ಮಳಿಗೆದಾರರೇ ಲಾಭದ ಪಾಲು ಪಡೆಯುತ್ತಿರುವುದು ಕಂಡುಬಂದಿದೆ.

Advertisement

ಜೂನ್‌ 30ರವರೆಗಿನ ಹಳೆಯ ದಾಸ್ತಾನಿಗೆ ಜಿಎಸ್‌ಟಿಯಡಿ ತೆರಿಗೆ ವಿಧಿಸಬೇಕಿದ್ದು, ಪರಿಷ್ಕೃತ ದರ ಪಟ್ಟಿ ನಮೂದಿಸಿ ಮಾರಾಟ ಮಾಡಬೇಕು. ಇದಕ್ಕೆ ಪ್ರತಿಯಾಗಿ ಮಾರಾಟಗಾರರು ಹೂಡುವಳಿ ತೆರಿಗೆ ರೂಪದಲ್ಲಿ ಅಬಕಾರಿ ಸುಂಕ ಮೊತ್ತವನ್ನು ವಾಪಸ್‌ ಪಡೆಯಲಿದ್ದಾರೆ. ಈ ರೀತಿಯ ಅವಕಾಶವಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ವಸ್ತುಗಳ ಬೆಲೆ
ಇಳಿಕೆಯಾಗಿಲ್ಲ. ತೆರಿಗೆ ಪ್ರಮಾಣ ಲೆಕ್ಕ ಹಾಕುವಲ್ಲಿನ ತೊಡಕು, ರಾತ್ರೋರಾತ್ರಿ ಹೊಸ ಎಂಆರ್‌ಪಿ ದರ ಪಟ್ಟಿ ಮುದ್ರಿಸಿ ಲೇಪಿಸುವಲ್ಲಿನ ವಿಳಂಬದಿಂದ ಗ್ರಾಹಕರಿಗೆ ತೆರಿಗೆ ಇಳಿಕೆಯ ಲಾಭ ಸಿಗದಂತಾಗಿದೆ.

ಎಂಆರ್‌ಪಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಿದೆ. ಉತ್ಪಾದಕರಿಂದ ಜೂನ್‌ 30ರವರೆಗೆ (ಎಲ್ಲ ತೆರಿಗೆ ಒಳಗೊಂಡ ಎಂಆರ್‌ಪಿ ದರ) ಖರೀದಿಸಿದ ದಾಸ್ತಾನು ಸದ್ಯ ಸಗಟುದಾರರು, ವಿತರಕರು,
ವರ್ತಕರ ಬಳಿ ಇವೆ. ಈ ವಸ್ತುಗಳ ಎಂಆರ್‌ಪಿಯಲ್ಲಿ ವ್ಯಾಟ್‌, ಅಬಕಾರಿ ಸುಂಕವೂ ಸೇರಿರುತ್ತದೆ. ಈ ವಸ್ತುಗಳಲ್ಲಿನ ವ್ಯಾಟ್‌ ತೆರಿಗೆಯನ್ನು ರಾಜ್ಯ ಸರ್ಕಾರ ಇನ್‌ಪುಟ್‌ ಕ್ರೆಡಿಟ್‌ ರೂಪದಲ್ಲಿ ವಾಪಸ್‌ ನೀಡಲಿದೆ.

ಅಬಕಾರಿ ಸುಂಕ ಪಾವತಿ ರಸೀದಿಯಿದ್ದರೆ ಶೇ.60 ರಷ್ಟು ಮೊತ್ತ ಹಿಂತಿರುಗಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಇಷ್ಟಾದರೂ ಬಹಳಷ್ಟು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗುತ್ತಿಲ್ಲ.

ಬೆಲೆ ಇಳಿಕೆ ಹೇಗೆ?: ಉದಾಹರಣೆ ಮೂಲಕ ಹೇಳುವುದಾದರೆ ಒಂದು ವಸ್ತುವಿನ ಎಂಆರ್‌ಪಿ ದರ 100 ರೂ. ಇದೆ ಎಂದು ಭಾವಿಸೋಣ. ಇದರ ಮೂಲ ಬೆಲೆ 78 ರೂ.ಗಳಾಗಿದ್ದು, 10 ರೂ. ಅಬಕಾರಿ ಸುಂಕ ಹಾಗೂ 12 ರೂ. ವ್ಯಾಟ್‌ ವಿಧಿಸಲಾಗಿದೆ ಎಂದು ಅಂದಾಜಿಸೋಣ. ಜಿಎಸ್‌ಟಿ ಜಾರಿ ಬಳಿಕ ಅಬಕಾರಿ ಸುಂಕ ಹಾಗೂ ವ್ಯಾಟ್‌ ರದ್ದಾಗಿರುವುದರಿಂದ ಗರಿಷ್ಠ 18 ರೂ. ತೆರಿಗೆ ವಿಧಿಸಿದರೂ ವಸ್ತುವಿನಎಂಆರ್‌ಪಿ 96 ರೂ.ಗೆ ಇಳಿಕೆಯಾಗಬೇಕು.

Advertisement

ಅದರಂತೆ 96 ರೂ. ಎಂಆರ್‌ಪಿ ದರಪಟ್ಟಿ ಮುದ್ರಿಸಿ ಮಾರಾಟ ಮಾಡಬೇಕು. ಆದರೆ ಈ ಲೆಕ್ಕಾಚಾರದ ಬಗ್ಗೆ ಮಳಿಗೆದಾರರಿಗೆ ಮಾಹಿತಿ ಇಲ್ಲವೋ ಅಥವಾ ಗೊತ್ತಿದ್ದೂ ದರ ಇಳಿಕೆ ಮಾಡುತ್ತಿಲ್ಲವೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ತಜ್ಞರು.

ಎಂಆರ್‌ಪಿ ಕಾಯ್ದೆ ಉಲ್ಲಂಘನೆ: ಇನ್ನೊಂದೆಡೆ ಒಂದು ವಸ್ತುವಿನ ಎಂಆರ್‌ಪಿ ದರ 100 ರೂ. ಇದ್ದು, ಅದರ ಮೂಲ ಬೆಲೆ 90 ರೂ., ವ್ಯಾಟ್‌ ಮತ್ತು ಅಬಕಾರಿ ಸುಂಕ ಸೇರಿ ಒಟ್ಟು 10 ರೂ. ತೆರಿಗೆ ಇದೆ ಎಂದು ಭಾವಿಸೋಣ. ಜಿಎಸ್‌ಟಿ ಜಾರಿ
ಬಳಿಕ ಶೇ.18ರಷ್ಟು ತೆರಿಗೆ ಹೆಚ್ಚಳವಾಗಿ ವಸ್ತುವಿನ ಬೆಲೆ 108 ರೂ.ಗೆ ಏರಿಕೆಯಾಗುತ್ತದೆ ಎಂದು ಕಲ್ಪಿಸಿಕೊಳ್ಳೋಣ. ಮಳಿಗೆದಾರರು ಗ್ರಾಹಕರಿಂದ ಹೆಚ್ಚುವರಿಯಾಗಿ 8 ರೂ. ಪಡೆದು ಮಾರಾಟ ಮಾಡುತ್ತಾರೆ. ಆದರೆ ಎಂಆರ್‌ಪಿ 100 ರೂ. ಎಂದು ನಮೂದಾಗಿರುತ್ತದೆ. ಎಂಆರ್‌ಪಿ ಕಾಯ್ದೆ ಪ್ರಕಾರ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವುದು ನಿಯಮಬಾಹಿರ. ಆದರೆ ಬಹಳಷ್ಟು ಕಡೆ ಎಂಆರ್‌ಪಿ ದರಕ್ಕಿಂತಲೂ ಹೆಚ್ಚು ಹಣ ಪಡೆಯುವುದು ನಡೆದಿದೆ.
ಜಿಎಸ್‌ಟಿಯಡಿ ತೆರಿಗೆ ಲೆಕ್ಕ ಹಾಕಿ ಅದರಂತೆ ದರ ಪರಿಷ್ಕರಿಸಿ ಎಂಆರ್‌ಪಿ ದರ ಪಟ್ಟಿ ಮುದ್ರಿಸಿ ಅಂಟಿಸಿ ಮಾರಾಟ ಮಾಡಬೇಕು. ಈ ಕಾರ್ಯವನ್ನು ಮಾರಾಟ ಸರಪಳಿಯ ಕೊನೆಯ ಕೊಂಡಿಯೆನಿಸಿರುವ ಮಳಿಗೆದಾರರು ಮಾಡುತ್ತಿಲ್ಲ. ಅಲ್ಲದೇ ಉತ್ಪಾದಕರೂ ತಮ್ಮ ಪ್ರತಿ ವಸ್ತುವಿನ ಹಳೆಯ ದಾಸ್ತಾನಿಗೆ ಜಿಎಸ್‌ಟಿ ದರ ನಿಗದಿಪಡಿಸಿ ಎಂಆರ್‌ಪಿ ಬೆಲೆಪಟ್ಟಿ ರವಾನಿಸುವ ಗೋಜಿಗೆ ಹೋಗದೆ ಜುಲೈ 1ರಿಂದ ಉತ್ಪಾದಿಸುವ ವಸ್ತುಗಳಿಗಷ್ಟೇ ಪರಿಷ್ಕೃತ ದರದಂತೆ ಬೆಲೆಪಟ್ಟಿ
ಮುದ್ರಿಸಿ ಪೂರೈಸುತ್ತಿರುವುದರಿಂದ ಗ್ರಾಹಕರಿಗೆ ಜಿಎಸ್‌ಟಿಯ ಲಾಭ ಸಿಗದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next