ಮುಂಬೈ: ಭಾರತದ ಪ್ರತಿಷ್ಠಿತ ಹಾಗೂ ಜನಪ್ರಿಯ ಟಯರ್ ತಯಾರಕ ಕಂಪನಿ ಎಂಆರ್ ಎಫ್(ಮದ್ರಾಸ್ ರಬ್ಬರ್ ಫ್ಯಾಕ್ಟರಿ)ಬಗ್ಗೆ ಬಹುತೇಕ ಜನರಿಗೆ ತಿಳಿದಿದೆ. ದೇಶದ ನಂಬರ್ ವನ್ ಟಯರ್ ತಯಾರಿಕೆಯ ಕಂಪನಿಯಾಗಿದೆ. ಅಷ್ಟೇ ಅಲ್ಲ ಮಂಗಳವಾರ (ಜೂನ್ 13) ದಲಾಲ್ ಸ್ಟ್ರೀಟ್ ನಲ್ಲಿ ಪ್ರತಿ ಷೇರಿನ ಬೆಲೆ 1 ಲಕ್ಷ ರೂಪಾಯಿಗೆ ಮುಟ್ಟಿದ ಮೊದಲ ಭಾರತೀಯ ಕಂಪನಿಯಾಗಿದೆ.
ಇದನ್ನೂ ಓದಿ:Road mishap: ಭೀಕರ ಕಾರು ಅಪಘಾತ; ಮಾಜಿ ಶಾಸಕರ ಪತ್ನಿ ಮೃತ್ಯು
ಬಾಂಬೆ ಷೇರುಪೇಟೆಯ ವಹಿವಾಟಿನಲ್ಲಿ MRF ಪ್ರತಿ ಷೇರು 1,00,000.95 ಲಕ್ಷ ರೂಪಾಯಿಯಲ್ಲಿ ವಹಿವಾಟು ನಡೆದಿದೆ. ಮೇ ತಿಂಗಳಿನಲ್ಲಿ ಎಂಆರ್ ಎಫ್ ಷೇರು ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿತ್ತಾದರೂ ನಂತರದಲ್ಲಿ ಹೊಸ ದಾಖಲೆ ಬರೆದಿದೆ.
ಭಾರತದ ಷೇರುಪೇಟೆಯಲ್ಲಿ ಎಂಆರ್ ಎಫ್ ಅತ್ಯಂತ ದುಬಾರಿ ಷೇರು ಆಗಿದ್ದರೂ ಕೂಡಾ ವಹಿವಾಟಿನ ಗಳಿಕೆಯ ವಿಚಾರದಲ್ಲಿ ಇದು ದುಬಾರಿಯಲ್ಲ. ಯಾಕೆಂದರೆ ಕಳೆದ ಒಂದು ವರ್ಷದಲ್ಲಿ ಎಂಆರ್ ಎಫ್ ಷೇರು ಶೇ.45ರಷ್ಟು ಲಾಭ ಗಳಿಸಿದೆ. 2023ರ ಜನವರಿ ತಿಂಗಳಿನಿಂದ ಈವರೆಗೆ ಎಂಆರ್ ಎಫ್ ಷೇರು ಅಂದಾಜು ಶೇ.14ರಷ್ಟು ಲಾಭ ಗಳಿಸಿದೆ.
ಎಂಆರ್ ಎಫ್ ಕಂಪನಿ 2022ರ ತ್ರೈಮಾಸಿಕದಲ್ಲಿ168.5 ಕೋಟಿ ರೂ. ಲಾಭ ಗಳಿಸಿದ್ದು, 2023ರ ತ್ರೈಮಾಸಿಕದಲ್ಲಿ ಕಂಪನಿ ಬರೋಬ್ಬರಿ 313.5 ಕೋಟಿ ರೂ. ಲಾಭಗಳಿಸಿದೆ. ಕಂಪನಿಯ ವಾರ್ಷಿಕ ಆದಾಯ 23,261.20 ಸಾವಿರ ಕೋಟಿ ರೂಪಾಯಿಯಾಗಿದೆ.