ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ರವಿವಾರ ಮಣಿಪಾಲ ಆಸ್ಪತ್ರೆಯಲ್ಲಿ ಹರ್ನಿಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆ ನಡೆಸಿದ ಬಳಿಕ ಶ್ರೀಗಳು ಮಣಿಪಾಲ ಆಸ್ಪತ್ರೆಗೆ ತೆರಳಿದರು. ಪೂರ್ವಾಹ್ನ 11.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆದವು. ಶಸ್ತ್ರಚಿಕಿತ್ಸೆ ಬಳಿಕ ಅವರು ಮಾತನಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಸರ್ಜರಿ ವಿಭಾಗದ ಡಾ| ರಾಮಕೃಷ್ಣನ್, ಡಾ| ರಾಜಗೋಪಾಲ ಶೆಣೈ ಶಸ್ತ್ರಚಿಕಿತ್ಸೆ ನಡೆಸಿದರೆ ಯೂರೋಲಜಿ ವಿಭಾಗದ ಡಾ| ಪದ್ಮರಾಜ ಹೆಗ್ಡೆ, ಹೃದಯ ವಿಭಾಗದ ಡಾ| ಪದ್ಮಕುಮಾರ್, ಮೆಡಿಸಿನ್ ವಿಭಾಗದ ಡಾ| ಮಂಜುನಾಥ ಹಂದೆ, ಅರಿವಳಿಕೆ ವಿಭಾಗದ ಡಾ| ಮಂಜುನಾಥ, ಡಾ| ರಾಮಕುಮಾರ್ ಸಹಕರಿಸಿದರು.
ಮುಸ್ಲಿಮರ ನಮಾಜು: ಶಸ್ತ್ರಚಿಕಿತ್ಸೆ ನಡೆಯುವ ಕೆಲವೇ ಹೊತ್ತಿನ ಮುನ್ನ ಅದೇ ಆವರಣದಲ್ಲಿ ಉಡುಪಿ ಮುಸ್ಲಿಂ ಸಮಿತಿ, ಪೇಜಾವರ ಬ್ಲಿಡ್ ಟೀಮ್ ಸದಸ್ಯರು ಟೀಮ್ ಅಧ್ಯಕ್ಷ ಮಹಮ್ಮದ್ ಆರಿಫ್ ನೇತೃತ್ವದಲ್ಲಿ ಶ್ರೀಗಳ ಆರೋಗ್ಯಕ್ಕೆ ಪ್ರಾರ್ಥಿಸಿ ವಿಶೇಷ ನಮಾಜು ನಡೆಸಿದರು. ಗೌರವಾಧ್ಯಕ್ಷ ಪರ್ಕಳ ಅಬೂಬಕ್ಕರ್, ಸಮಿತಿಯ ಅನ್ಸರ್ ಅಹಮ್ಮದ್, ಶಾಹಿಲ್ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷ ಪೂಜೆ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಗಳ ಸುಧಾ ವಿದ್ಯಾರ್ಥಿ ಗಳು, ಹಳೆ ವಿದ್ಯಾರ್ಥಿಗಳು ಕಿರಿಯ ಶ್ರೀಗಳ ನೇತೃತ್ವದಲ್ಲಿ ಧನ್ವಂತರಿ ಹವನ ಮತ್ತು ಜಪ ನಡೆಸಿದರು. ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಕರಂಬಳ್ಳಿ ಬ್ರಾಹ್ಮಣ ವಲಯ ಸಮಿತಿ ಸದಸ್ಯರು ನಂದಾದೀಪ, ವಿಷ್ಣುಸಹಸ್ರನಾಮ ಅರ್ಚನೆ ನಡೆಸಿದರು. ಕಿರಿಯ ಶ್ರೀಗಳು ಹಿರಿಯ ಶ್ರೀಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.
ಪೇಜಾವರ ಕಿರಿಯ ಶ್ರೀಗಳಿಂದ ಚಾಮರ ಸೇವೆ
ಶ್ರೀಕೃಷ್ಣ ಮಠದಲ್ಲಿ ರವಿವಾರ ರಾತ್ರಿ ಪೂಜೆಯನ್ನು ಶ್ರೀ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇದೇ ಮೊದಲ ಬಾರಿ ನಡೆಸಿದರು. ಕಿರಿಯ ಶ್ರೀಗಳು ಪ್ರತಿನಿತ್ಯ ಪೂಜೆಗೆ ಸಹಕರಿಸುತ್ತಿದ್ದರಾದರೂ ಹಿರಿಯರೇ ಇದುವರೆಗೆ ಮಾಡಿಕೊಂಡು ಬಂದ ಚಾಮರ ಸೇವೆಯನ್ನು ನಡೆಸಿದರು. ಈ ಎರಡು ಚಾಮರಗಳು ತಲಾ 1.5 ಕೆ.ಜಿ. ತೂಗುತ್ತವೆ. ಹಿರಿಯ ಶ್ರೀಗಳ ದೇಹದ ತೂಕವೇ ಎರಡು ವರ್ಷಗಳ ಹಿಂದೆ 35 ಕೆ.ಜಿ. ಇತ್ತು. ಈಗ ಕೆಲವು ಕೆ.ಜಿ.ಯಾದರೂ ಕಡಿಮೆಯಾಗಿದೆ. ಈ ಎರಡು ಚಾಮರಗಳನ್ನು ನಾಲ್ಕೈದು ನಿಮಿಷ ಎರಡೂ ಕೈಯಲ್ಲಿ ಬೀಸುತ್ತಿದ್ದರು.