ತುಮಕೂರು: ಮಹಾ ಚುನಾವಣೆ ಆರಂಭವಾದಾ ಗಲಿನಿಂದಲೂ ಒಂದಲ್ಲ, ಒಂದು ರೀತಿಯಲ್ಲಿ ಸದ್ದು ಮಾಡುತ್ತಿದ್ದ ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರ ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡಗೆ ಟಿಕೆಟ್ ತಪ್ಪಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡಗೆ ಟಿಕೆಟ್ ನೀಡಿದ್ದರು. ಅಂದಿನಿಂದಲೂ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ನಂತರ ತಣ್ಣಗಾದರೂ ಒಳಂದೊಳಗೆ ಏನು ನಡೆದಿದೆ ಎನ್ನುವ ಕುತೂಹಲದ ಚರ್ಚೆ ನಡೆಯುತ್ತಿದೆ. ಈ ವೇಳೆಯಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕೆಲವು ಆಪ್ತಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ತೆರೆಳಿರುವುದು. ಈಗ ಚರ್ಚೆ ನಡೆಯುತ್ತಿದ್ದು, ಧರ್ಮಸ್ಥಳದ ಮಂಜುನಾಥನ ಮುಂದೆ ಯಾವ ಸತ್ಯದ ನುಡಿ ನುಡಿಯುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಧರ್ಮ ಸ್ಥಳಕ್ಕೆ ತಮ್ಮ ಆಪ್ತರೊಂದಿಗೆ ಬುಧವಾರ ಬೆಂಗಳೂರಿ ನಿಂದ ಪಯಣ ಬೆಳೆಸಿದ್ದರು. ಬುಧವಾರ ರಾತ್ರಿ ಧರ್ಮಸ್ಥಳ ತಲುಪಿ, ಬೆಳಗ್ಗೆ ಶ್ರೀಕ್ಷೇತ್ರದಲ್ಲಿ ಮಧ್ಯಾಹ್ನ 12.15 ಗಂಟೆಗೆ ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದು ನಂತರ ದೇವಸ್ಥಾನದ ಮುಂಭಾಗದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ.
ತುಮಕೂರು ಕ್ಷೇತ್ರ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಪಟ್ಟು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಮೈತ್ರಿ ಏನೇ ಆಗಲಿ. ಆದರೆ, ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಬೇಕು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸದಿದ್ದರೆ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದಾಗಿ ಹೇಳಿದರು. ಇಡೀ ದೇಶದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ ಹಾಲಿ ಸಂಸದರಿಗೆ ಟಿಕೆಟ್ ಸಿಕ್ಕಿತ್ತು. ಆದರೆ, ತುಮಕೂರಿನ ಹಾಲಿ ಸಂಸದ ಎಸ್.ಪಿ.ಮುದ್ದ ಹನುಮೇಗೌಡಗೆ ಟಿಕೆಟ್ ವಂಚನೆಯಾಗಿತ್ತು. ಮೈತ್ರಿ ಪಕ್ಷಕ್ಕೆ ಈ ಕ್ಷೇತ್ರ ಒಲಿದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಡಿಸಿಎಂ ಎರಡು ಚೆಕ್ ಪ್ರದರ್ಶನ: ಟಿಕೆಟ್ ವಂಚಿತರಾದ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಮತ್ತು ಕೆ.ಎನ್.ರಾಜಣ್ಣ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ವಾಪಸ್ ಪಡೆಯುವ ದಿನ ಸಂಸದ ಎಸ್.ಪಿ. ಮುದ್ದಹನುಮೇಗೌಡರ ಬೆಂಗಳೂರಿನ ಮನೆಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದರು. ಅ ವೇಳೆಯಲ್ಲಿ ಅವರ ಮನೆಗೆ ಆಗಮಿಸಿದ್ದ ಡಿಸಿಎಂ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್, ಮುದ್ದಹನುಮೇಗೌಡರ ಜೊತೆಯಲ್ಲಿ ಮಾತನಾಡುವ ವೇಳೆಯಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಎರಡು ಚೆಕ್‌ಗಳನ್ನು ಪ್ರದರ್ಶಿಸಿದ್ದರು. ನಂತರ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ನಾಮಪತ್ರ ವಾಪಸ್ ಪಡೆದರು. ಈ ವೇಳೆಯಲ್ಲಿ ಮುದ್ದಹನುಮೇಗೌಡ ಮನೆಯಲ್ಲಿ ಪ್ರದರ್ಶಿಸಿದ್ದ ಚೆಕ್‌ಗಳ ಬಗ್ಗೆ ವ್ಯಾಪಕ ಚರ್ಚೆ ಕ್ಷೇತ್ರದಲ್ಲಿ ನಡೆದಿದೆ. ಕೋಟಿ ಕೋಟಿ ಹಣ ಪಡೆದು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಚರ್ಚೆ ನಡೆದಿತ್ತು.
ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ: ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ, ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರಚಾರ ಸಭೆ ನಡೆಸಿದ್ದರೂ. ಎಲ್ಲಿಯೂ ಮುದ್ದಹನುಮೇಗೌಡ ಮತ್ತು ರಾಜಣ್ಣ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆಯಲ್ಲಿ ಮಧುಗಿರಿ ಸಮಾರಂಭ ದಲ್ಲಿ ಮುದ್ದಹನುಮೇಗೌಡ ಮತ್ತು ರಾಜಣ್ಣ ಕಾಣಿಸಿಕೊಂಡರು. ಅ ನಂತರ ತುಮಕೂರಿನಲ್ಲಿ ನಡೆದ ವಕೀಲರ ಪ್ರಚಾರ ಕಾರ್ಯಕ್ರಮದಲ್ಲಿ ಮುದ್ದಹನುಮೇಗೌಡ ಕಾಣಿಸಿದ್ದು ಬಿಟ್ಟರೆ, ಎಲ್ಲಿಯೂ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಣಿಸಿರಲಿಲ್ಲ.
ಚುನಾವಣೆಯ ದಿನ ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮನೆಗೆ ಭೇಟಿ ನೀಡಿದ್ದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರೀ ಚರ್ಚೆ ನಡೆಯಿತು. ಚುನಾವಣೆ ಮುಗಿಯುತ್ತಲೇ ಮೈತ್ರಿ ಅಭ್ಯರ್ಥಿ ಪರ ಕೆಲಸಮಾಡಿಲ್ಲ ಎನ್ನುವ ಕಾರಣ ಹೊಡ್ಡಿ ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಲ್ಲಿಕಾರ್ಜುನ್ ಮತ್ತು ರಾಜ್‌ಗೋಪಾಲ್ ಅವರನ್ನು ಕೆಪಿಸಿಸಿಯಿಂದ ಅಮಾನತು ಮಾಡಲಾಗಿತ್ತು. ಇದಕ್ಕೆ ಕೆಂಡಾಮಂಡ ಲರಾದ ಕೆ.ಎನ್.ರಾಜಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಮಾನತು ವಾಪಸ್ ಪಡೆಯಬೇಕು. ಒಂದು ಪಕ್ಷ ವಾಪಸ್ ಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ ಶೂನ್ಯ ಮಾಡುತ್ತೇವೆ. ಚುನಾಯಿತ ಜಿಪಂ, ತಾಪಂ, ಪುರಸಭೆ ಸೇರಿದಂತೆ ಇತರೆ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡುತ್ತಾರೆ ಎಂದು ಗುಡುಗಿದ್ದರು.
ಪಕ್ಷದೊಳಗಿನ ಅಸಮಾನತೆ ಬಹಿರಂಗ: ಈ ಎಲ್ಲಾ ಬೆಳವಣಿಗೆ ನಂತರ ಚುನಾವಣೆ ಮುಗಿದ ಮೇಲೆ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಎಚ್.ಡಿ. ದರ್ಶನ್ ಮತ್ತು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಪತ್ರಕರ್ತನೆಂದು ಹೇಳಿಕೊಳ್ಳುವ ನೃಪತುಂಗ ನಡುವೆ ನಡೆದಿದ್ದ ಸಂಭಾಷಣೆಯಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ನಾಪಪತ್ರ ವಾಪಸ್ ಪಡೆಯಲು 3.5 ಕೋಟಿ ಹಣ ನೀಡಲಾಗಿತು ಎನ್ನುವ ಸಂಭಾಷಣೆಯು ಎಲ್ಲೆಡೆ ವೈರಲ್ ಆಗಿ ಇಡೀ ಕಾಂಗ್ರೆಸ್ ಪಕ್ಷದಲ್ಲಿ ಮುಜುಗರ ಉಂಟಾಗುವಂತೆ ಮಾಡಿದ್ದರ ಜೊತೆಗೆ ಪಕ್ಷದ ಒಳಗಿನ ಅಸಮಾನತೆ ಬಹಿರಂಗವಾಯಿತು.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಬಾಗದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ. ಅವರ ಈ ನಡೆ ತುಮಕೂರು ರಾಜಕೀಯದಲ್ಲಿ ಕುತೂಹಲ ಮೂಡಿದೆ. ಧರ್ಮಸ್ಥಳದಲ್ಲಿ ಯಾವ ಮಾತಿನ ಬಾಂಬ್ ಸಿಡಿಸುತ್ತಾರೆ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಅವರ ಮನೆಯಲ್ಲಿ ಪ್ರದರ್ಶಿಸಿದ್ದ ಚೆಕ್‌ಗಳ ವಿಷಯ, ಡಿಸಿಎಂ ಆಪ್ತ ದರ್ಶನ್ ಹೇಳಿರುವ 3.5 ಕೋಟಿ ರೂ.ಗಳ ಪ್ರಸ್ತಾಪದ ಬಗ್ಗೆ, 44 ಹಾಲಿ ಕಾಂಗ್ರೆಸ್ ಸಂಸದ ಪೈಕಿ 43 ಜನರಿಗೆ ಸಂಸದರಿಗೆ ಟಿಕೆಟ್ ನೀಡಿ ಮುದ್ದಹನುಮೇಗೌಡರಿಗೆ ತಪ್ಪಿಸಿ ರುವ ಬಗ್ಗೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಯಿಂದ ತುಮಕೂರಿನಲಿ ಕಾಂಗ್ರೆಸ್‌ನಲ್ಲಿ ಉಂಟಾಗಿ ರುವ ಬೇಗುದಿ ಇನ್ನೂ ನಿಂತಿಲ್ಲ, ಚುನಾವಣೆ ಫಲಿತಾಂಶದ ಬಳಿಕ ಇನ್ನೂ ಯಾವ ಯಾವ ವಿಷಯಗಳು ಚರ್ಚೆಗೆ ಬರುತ್ತವೆ ಎನ್ನುವುದು ಕುತೂಹಲ ಮೂಡಿದೆ.
● ಚಿ.ನಿ.ಪುರುಷೋತ್ತಮ್