ಅಫಜಲಪುರ: ಸಂಸದ ಡಾ|ಉಮೇಶ ಜಾಧವ ಅವರು ತಾಲೂಕಿನ 28ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದು ಮಂಗಳವಾರ ಬಳೂರ್ಗಿ ಗ್ರಾಮಕ್ಕೆ ಆಗಮಿಸಿ ಅರ್ಧಗಂಟೆ ಕಾಲ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಇದಕ್ಕೂ ಮುನ್ನ ಗ್ರಾಮದ ಬುದ್ಧ ನಗರಕ್ಕೆ ತೆರಳಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದರು. ನಂತರ ಬಸವಣ್ಣ ದೇಗುಲದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಲು ಸಭೆ ನಡೆಸಿ, ಅಹವಾಲು ಸ್ವೀಕರಿಸಿದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಸಂಸದರಿಗೆ ಕ್ಷೇತ್ರದ ಮೇಲೆ ಅಪಾರ ಕಾಳಜಿಯಿದೆ. ಹೀಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ನಾನು ಸರ್ಕಾರದ ಮೇಲೆ ಒತ್ತಡ ಹಾಕಿ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಮಸ್ಯೆಗಳ ಸರಮಾಲೆ: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ತಾಲೂಕು ಅಧ್ಯಕ್ಷ ರಾಹುಲ್ ದೊಡ್ಮನಿ, ಗ್ರಾ.ಪಂ ಸದಸ್ಯರಾದ ನಾಗೇಶ ಭತ್ತಾ, ಖಾಜಪ್ಪ ಸಿಂಗೆ, ಮುಖಂಡರಾದ ಮಹಾಂತೇಶ ಬಡದಾಳ, ರಾಜಶೇಖರ ಜಮಾಣಿ, ಬಸು ಹಳ್ಳಿ, ಸಂತೋಷ ಫುಲಾರಿ ಮಾತನಾಡಿ ಬಡದಾಳ ಜಿಲ್ಲಾ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಗಡಿ ಹಂಚಿಕೊಂಡ ರಾಜ್ಯದ ಕೊನೆಯ ಗ್ರಾಮವಾಗಿದೆ. ಸರ್ಕಾರಿ ಸೌಲಭ್ಯಗಳಿಂದ ಗ್ರಾಮ ವಂಚಿತವಾಗಿದೆ. ಮೂಲಸೌಕರ್ಯಗಳು ಇಲ್ಲಿಲ್ಲ. ಗ್ರಾಮದ ಐತಿಹಾಸಿಕ ಚನ್ನಮಲ್ಲೇಶ್ವರ ಪಲ್ಲಕ್ಕಿ ಹೋಗುವ ದಾರಿಗೆ ಸಿಸಿ ಆಗಬೇಕು. ಅಪಾರ ಮಳೆಯಿಂದ ಎಲ್ಲ ಬೆಳೆಗಳು ಹಾನೀಗಿಡಾಗಿದ್ದು, ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಸಂಸದರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆಗೆ ಸಂಬಂಧಪಟ್ಟ ಯಾವುದೇ ಇಲಾಖೆ ಅಧಿಕಾರಿಗಳು ಇರಲಿಲ್ಲ ಎಂದು ಗ್ರಾಮದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.