ಬಂಟ್ವಾಳ: ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಹಿರಿಯ ಕಾರು ಚಾಲಕರೋರ್ವರು ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ಅ.29 ರ ಮಂಗಳವಾರ ತುಂಬೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ, ಅಂಬಾಸಿಡರ್ ಕಾರು ಚಾಲಕ ಬೋಜ ಮೂಲ್ಯ (62) ಮೃತಪಟ್ಟ ವ್ಯಕ್ತಿ.
ಅ.11 ರಂದು ರಾತ್ರಿ 7 ರ ಸುಮಾರಿಗೆ ಅವರು ಮನೆಗೆ ಕೋಳಿ ಮಾಂಸ ಕೊಂಡು ಹೋಗುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ತಲಪಾಡಿ- ಬೈಕಂಪಾಡಿ ಚಿಕನ್ ಸ್ಟಾಲ್ ಕಡೆ ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿಯಾಗಿತ್ತು. ಈ ಪರಿಣಾಮ ಕಾಲಿಗೆ ಗಾಯವಾಗಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅ. 12 ರಂದು ಅಪಘಾತದ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 7 ದಿನಗಳ ನಂತರ ಇವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಂಡು ಮನೆಗೆ ತೆರಳಿದ್ದರು.
ಇದೀಗ 19 ದಿನಗಳ ಬಳಿಕ ಬೋಜ ಮೂಲ್ಯ ಅವರಿಗೆ ಮನೆಯಲ್ಲಿ ಉಸಿರಾಟದ ತೊಂದರೆ ಕಂಡುಬಂದಿದ್ದು ಇವರನ್ನು ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಅ.29) ಮೃತಪಟ್ಟ ಬಗ್ಗೆ ಅವರ ಕುಟುಂಬದ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಅಪಘಾತ ಪ್ರಕರಣದ ಬಗ್ಗೆ ಈಗಾಗಲೇ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್.ಐ. ಸುತೇಶ್ ಅವರು ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದರು.
ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬೋಜ ಮೂಲ್ಯ ಅವರು ಸುಮಾರು 42 ವರ್ಷಗಳ ಕಾಲ ಅಂಬಾಸಿಡರ್ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಬಿಸಿರೋಡಿನ ಆಸುಪಾಸಿನಲ್ಲಿ ಬೋಜಣ್ಣ ಎಂದೇ ಖ್ಯಾತಿ ಪಡೆದಿದ್ದ ಇವರು ಕಾರು ಪಾರ್ಕ್ ನಲ್ಲಿ ಪರಿಚಯಸ್ಥರನ್ನು ಕರೆದು ಮಾತನಾಡುವ ವ್ಯಕ್ತಿಯಾಗಿದ್ದರು. ಎಲ್ಲರಿಗೂ ಗೌರವ ನೀಡುವ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಇವರು ಕಾರು ಚಾಲಕರ ಸಂಘದಲ್ಲಿ ಸಕ್ರಿಯರಾಗಿದ್ದುಕೊಂಡು ಚಾಲಕರ ಆಗು ಹೋಗುಗಳಿಗೆ ಸದಾ ಸ್ಪಂದನೆ ನೀಡುತ್ತಿದ್ದರು.