Advertisement

ಸಂಸದರ ಸಂಧಾನ ಯಶಸ್ವಿ: ಉಪವಾಸ ಅಂತ್ಯ

05:14 PM Nov 29, 2018 | |

ಹೊನ್ನಾಳಿ: ಸಂಸದ ಜಿ.ಎಂ.ಸಿದ್ದೇಶ್ವರ ಅವರ ಮಾತಿಗೆ ಮಣಿದು ಶಾಸಕ ಎಂ.ಪಿ. ರೇಣುಕಾಚಾರ್ಯ ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಬುಧವಾರ ರಾತ್ರಿ ವಾಪಸ್‌ ಪಡೆದಿದ್ದಾರೆ.

Advertisement

ಶಾಸಕ ಎಂ.ಪಿ. ರೇಣುಕಾಚಾರ್ಯ ಬುಧವಾರ ಸಂಜೆ ಅಸ್ವಸ್ಥಗೊಂಡ ಸುದ್ದಿ ತಿಳಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾತ್ರಿ 11ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ, ನಾನು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ನಾಳೆಯಿಂದ ಎಸ್‌ಆರ್‌ ದರದಲ್ಲಿ ಮರಳು ಮಾರಾಟ ಮಾಡಲು ಸೂಚಿಸಿದ್ದೇನೆ. ಅದಕ್ಕೆ ಅಧಿಕಾರಿಗಳು ಕೂಡ ಒಪ್ಪಿದ್ದಾರೆ. ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಇಬ್ಬರೂ ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡೋಣ. ನೀವು ಉಪವಾಸ ಧರಣಿ ವಾಪಸ್‌ ಪಡೆಯಿರಿ ಎಂದು ಮನವಿ ಮಾಡಿದರು.

ಉಪವಾಸ ಸತ್ಯಾಗ್ರಹ ವಾಪಸ್‌ಗೆ ಒಪ್ಪಿದ ಶಾಸಕ ರೇಣುಕಾಚಾರ್ಯ, ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಶನಿವಾರ ನ್ಯಾಮತಿ ಹಾಗೂ ಸೋಮವಾರ ಹೊನ್ನಾಳಿ ಬಂದ್‌ಗೆ ಕರೆ ನೀಡಲಾಗಿದೆ. ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಇದ್ದರು.

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಮಳೆ ಇಲ್ಲದೆ ಜನ ಜಾನುವಾರಗಳು ಗುಳೆ ಹೋಗುವ ಪರಿಸ್ಥಿತಿ ಇದೆ. ಎರಡೂ ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಿ ಎಂದು ಮುಖ್ಯಮಂತ್ರಿ, ಕಂದಾಯ ಮಂತ್ರಿಗಳನ್ನು ಭೇಟಿ ಮಾಡಿ ನಾಲ್ಕು ಬಾರಿ ಮನವಿ ಸಲ್ಲಿಸಿದ್ದೆ. ಸರ್ಕಾರ ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದ್ದರಿಂದ ಆಮರಣಾಂತ ಉಪವಾಸ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಬುಧವಾರ, ಆಮರಣಾಂತ ಉಪವಾಸ ಸತ್ಯಾಗ್ರಹದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕಂದಾಯ ಮಂತ್ರಿ ದೇಶಪಾಂಡೆ ಅವರನ್ನು ಭೇಟಿ ಮಾಡಿ, ನನ್ನ ಕ್ಷೇತ್ರದ ಎರಡು ತಾಲೂಕುಗಳ ರೈತರು ಮಳೆ ಇಲ್ಲದೆ, ಬೆಳೆ ಸಂಪೂರ್ಣ ಒಣಗಿ ಸಂಕಷ್ಟದಲ್ಲಿದ್ದಾರೆ ಎಂದು ಮನವಿ ಪತ್ರ ಸಲ್ಲಿಸಿದ್ದೆ. ತಾಲೂಕು, ಜಿಲ್ಲಾಡಳಿತದ ಮೂಲಕವೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಯಾವುದೂ ಫಲ ನೀಡದಾದಾಗ ಈಗ ಉಪವಾಸ ಸತ್ಯಾಗ್ರಹದ ದಾರಿ ಹಿಡಿಯಬೇಕಾಗಿದೆ. ಇದಕ್ಕೂ ಬಗ್ಗದಿದ್ದರೆ ಹೋರಾಟ ಉಗ್ರ ರೂಪ ತಾಳುತ್ತದೆ ಎಂದು ಎಚ್ಚರಿಸಿದರು.

Advertisement

ನೇರ ನಡೆ ಮತ್ತು ಹೋರಾಟಗಳನ್ನು ಮಾಡುತ್ತಾ ಬಂದಿರುವ ನಾನು ಯಾವುದಕ್ಕೂ ಜಗ್ಗುವುದಿಲ್ಲ. ನನ್ನ ಕ್ಷೇತ್ರದ ಜನತೆಯ ಆಶೋತ್ತರಗಳು ಈಡೇರಬೇಕು. ಚುನಾವಣೆ ಸಂದರ್ಭದಲ್ಲಿ ಹಾಗೂ ಗೆದ್ದ ನಂತರ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳ ಬಗ್ಗೆ ವಿಚಾರಿಸಿದಾಗ, ಮರಳು ಸಿಗುವಂತೆ ಮಾಡಿ ಎಂದು ಜನರು ಮನವಿ ಮಾಡಿದ ಕಾರಣ ಮರಳಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.

ತಾಲೂಕಿನಲ್ಲಿ ಆಶ್ರಯ ಮನೆ, ಶೌಚಾಲಯ ಸೇರಿದಂತೆ ಇತರ ಕಾಮಗಾರಿಗೆ ಕಡಿಮೆ ಬೆಲೆಗೆ ಮರಳು ದೊರಯುವಂತೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾನು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗದೇ ನ. 19ರಂದು ನದಿಗಿಳಿದು ಮರಳು ಎತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಮೂಕ ಸರ್ಕಾರ ನಂತರವೂ ಮರಳಿನ ಸಮಸ್ಯೆ ಬಗೆಹರಿಸದ ಕಾರಣ ಉಪವಾಸ ಆಂದೋಲನ ಕೈಗೊಂಡಿದ್ದೇನೆ ಎಂದು ಹೇಳಿದರು.

ಡಿಸಿ-ಎಸ್‌ಪಿ ಹುಶಾರ್‌: ನನ್ನ ಹೋರಾಟಗಳ ಬಗ್ಗೆ ನಿಮಗಿನ್ನು ತಿಳಿದಿಲ್ಲ ಎಂದು ಡಿಸಿ-ಎಸ್‌ಪಿಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ, ನಾನು ಈಗಾಗಲೇ ಜನಪರ ಹೋರಾಟಗಳಿಂದ ಅನೇಕ ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಜೈಲುವಾಸ ನನಗೇನು ಹೊಸದಲ್ಲ. ತಕ್ಷಣ ಜಿಲ್ಲಾಡಳಿತ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ತಾಲೂಕಿನ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದಿದ್ದರೆ ನನ್ನ ಹೋರಾಟದ ಶೈಲಿಯೇ ಬೇರೆಯಾಗುತ್ತದೆ. ಜನರ ಜೀವನದ ಜತೆ ಚೆಲ್ಲಾಟ ಆಡಬೇಡಿ ಹುಶಾರ್‌ ಎಂದು ಹರಿಹಾಯ್ದರು. 

ಜಿ.ಪಂ ಸದಸ್ಯೆ ಎಂ.ಆರ್‌. ಮಹೇಶ್‌, ತಾ.ಪಂ ಉಪಾಧ್ಯಕ್ಷೆ ಎಸ್‌.ಪಿ. ರವಿಕುಮಾರ್‌, ಬೆನಕನಹಳ್ಳಿ ಗ್ರಾ.ಪಂ ಸದಸ್ಯ ಎ.ಜಿ. ಮಹೇಂದ್ರಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್‌ ಪಾಟೀಲ್‌, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್‌, ತಾ.ಪಂ ಸದಸ್ಯೆ ರೇಖಾ ಉಮೇಶ್‌ನಾಯ್ಕ, ಮುಖಂಡ ಕೆ.ವಿ. ಚನ್ನಪ್ಪ ಮಾತನಾಡಿದರು. 

ಜಿ.ಪಂ ಸದಸ್ಯ ಜಿ. ವೀರಶೇಖರಪ್ಪ, ಜಿ.ಪಂ ಮಾಜಿ ಸದಸ್ಯ ಗುರುಮೂರ್ತಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಲ್‌. ರಂಗಪ್ಪ, ತಾ.ಪಂ ಸದಸ್ಯ ತಿಪ್ಪೇಶಪ್ಪ, ಪ.ಪಂ ಸದಸ್ಯರಾದ ಬಾಬುರಾಯಪ್ಪ, ರಂಗನಾಥ್‌, ಕೆ.ವಿ. ಶ್ರೀಧರ್‌, ಸವಿತಾ ಮಹೇಶ್‌ ಹುಡೇದ್‌, ಸುಮಾ ಮಂಜುನಾಥ್‌, ಅನುಶಂಕರ್‌, ಪದ್ಮ, ಸುಮಾ ಸತೀಶ್‌, ರಂಜಿತಾ, ಮಾರುತಿ ನಾಯ್ಕ, ಕನಕದಾಸ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next