Advertisement

ಕನ್ನಡಿಗರಿಗಾದ ಅನ್ಯಾಯಕ್ಕೆ ಸಂಸದರೇ ಹೊಣೆ

12:19 PM Jan 14, 2017 | Team Udayavani |

ದಾವಣಗೆರೆ: ಕನ್ನಡ ಭಾಷೆ, ನೆಲ, ಜಲ, ಉದ್ಯೋಗ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲಿ ಕನ್ನಡಿಗರಿಗೆ ಸಂವಿಧಾನಬದ್ಧ ಹಕ್ಕು ಮತ್ತು ಸೌಲಭ್ಯ ಕೈತಪ್ಪಲು ರಾಜ್ಯದ ಸಂಸದರೇ ನೇರ ಕಾರಣ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ ಆರೋಪಿಸಿದ್ದಾರೆ. 

Advertisement

ಕರ್ನಾಟಕ ಏಕೀಕರಣವಾಗಿ 60 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ “ಕನ್ನಡ, ಕನ್ನಡಿಗ ಮತ್ತು ಕರ್ನಾಟಕ: ಒಂದು ಚಿಂತನಾ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ… ಎಂಬ ನೀತಿ ಅನುಸರಿಸುತ್ತಿದೆ. 

ಕೇಂದ್ರದ ಸುಣ್ಣದ ನೀತಿಯನ್ನು ನಮ್ಮನ್ನು ಪ್ರತಿನಿಧಿಸುವ ಸಂಸದರು ಪ್ರಶ್ನಿಸುವುದೇ ಇಲ್ಲ. ಹಾಗಾಗಿ ಕನ್ನಡಿಗರ ಸಂವಿಧಾನಬದ್ಧ ಹಕ್ಕು ಮತ್ತು ಸೌಲಭ್ಯಗಳ ವಂಚನೆಗೆ ರಾಜ್ಯದ ಸಂಸದರೇ ನೇರ ಕಾರಣ. ತಮಿಳುನಾಡು ಸಂಸದರಂತೆ ನಮ್ಮವರು ಒಟ್ಟಾಗುವುದೇ ಇಲ್ಲ. ನಮ್ಮ ಸಂಸದರನ್ನು ಹಿಡಿದುಕೇಳುವಂತಹ ಶಕ್ತಿ ಕನ್ನಡಿಗರಲ್ಲೂ ಇಲ್ಲ ಎಂದರು. 

ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ 11,784 ಕನ್ನಡದ ಶಾಲೆ ಮುಚ್ಚಿವೆ. ಕನ್ನಡದ ಶಾಲೆ ಉಳಿಸಿ, ಬದುಕಿಸುವ ಅಂತಃಕರಣ ಕನ್ನಡಿಗರಲ್ಲಿ ಇಲ್ಲದಂತಾಗುತ್ತಿದೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಸಮೀಪದ ಸರ್ಕಾರಿ ಶಾಲಾ ಶಿಕ್ಷಕ ಮಾಡಿದ ಅದ್ಬುತ ಕೆಲಸದಿಂದಾಗಿ ಆ ಶಾಲೆ ಪ್ರವೇಶ ಪಡೆಯಲು ಶಿಫಾರಸ್ಸು ಮಾಡಿಸಬೇಕಾದ ವಾತಾವರಣ ಇದೆ.

ಒಬ್ಬ ಶಿಕ್ಷಕಗೆ ಅಂಥಹ ಕೆಲಸ ಸಾಧ್ಯವಾಗಿರುವಾಗ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐಗಳಿಗೆ ಏಕೆ ಸಾಧ್ಯವಾಗದು. ಕನ್ನಡದ ಶಾಲೆ ಮುಚ್ಚಲು, ಆಂಗ್ಲ ಭಾಷಾ ವ್ಯಾಮೋಹ ಹೆಚ್ಚಾಗಲು ಸಾರ್ವಜನಿಕ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು, ನಮ್ಮಂತಹ ಕನ್ನಡದ ಸೇವಕರು ಸಹ ಕಾರಣವಾಗುತ್ತಿರುವುದು ದುರಂತ.

Advertisement

ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯಾವ ಕಾರಣಕ್ಕೆ, ಎಷ್ಟು ಜನರು ಬಿಡುತ್ತಿರುವುದರಿಂದ ಕನ್ನಡ ಶಾಲೆ ಮುಚ್ಚುತ್ತಿವೆ ಎಂಬುದರ ಬಗ್ಗೆ ಅಭಿವೃದ್ಧಿ ಪ್ರಾಧಿಕಾರದಿಂದಲೇ ಹುಳಿಯಾರು ತಾಲೂಕಿನಲ್ಲಿ ಸಾಮಾಜಿಕ ಕಳಕಳಿ, ಕಾಳಜಿಯುಳ್ಳವರಿಂದ ಸಮೀಕ್ಷೆ ಮಾಡಿಸಲಾಗುತ್ತಿದೆ. ಸಮಗ್ರ ವರದಿ ಸಿಕ್ಕ ನಂತರ ಮಾಧ್ಯಮಗಳ ಮೂಲಕ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು. 

ಬೆಂಗಳೂರಿನಲ್ಲಿ ಕಳೆದ 3 ವರ್ಷದಲ್ಲಿ ಕನ್ನಡಿಗರ ಪ್ರಮಾಣ ಶೇ. 30 ರಿಂದ ಶೇ. 27ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಜೊತೆಗೆ ಕನ್ನಡೇತರರು ಅಧಿಕಾರದ ಚುಕ್ಕಾಣಿ ಹಿಡಿಯುವ ಆತಂಕ ಎದುರಾಗಿದೆ. ಬೆಂಗಳೂರಿನ ವಾತಾವರಣ ಮೈಸೂರು, ತುಮಕೂರಿಗೂ ವ್ಯಾಪಿಸಲಿದೆ. ಅನ್ಯಭಾಷಿಕರ ಆಕ್ರಮಣದಿಂದಾಗಿ ಕನ್ನಡದ ನೆಲವನ್ನೇ ಕಳೆದುಕೊಳ್ಳುವತ್ತ ಸಾಗುತ್ತಿದ್ದೇವೆ. 

ಒಕ್ಕೂಟ ವ್ಯವಸ್ಥೆಯಲ್ಲಿ ಪರಭಾಷಿಕರು ಬರುವುದನ್ನು ಬೇಡ ಅನ್ನಲಾಗದು. ಆದರೆ, ಇಲ್ಲಿಗೆ ಬಂದವರು ಕನ್ನಡ ಕಲಿತು, ಇಲ್ಲಿಯವರಾಗಬೇಕು. ಆದರೆ, ಅದು ಆಗುತ್ತಿಲ್ಲ. ಅವರೇ ನಮ್ಮನ್ನು ಆಳುವಂತಾಗುತ್ತಿದೆ. ಇದಕ್ಕೆ ಕನ್ನಡಿಗರ ಇಚ್ಛಾಶಕ್ತಿ  ಕೊರತೆ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು. ತಂತ್ರಾಂಶ ಬಳಕೆ ಪ್ರಾರಂಭವಾದ ನಂತರ ಆಡಳಿತದಲ್ಲಿ ಕನ್ನಡದ ಬಳಕೆ ಕಡಿಮೆ ಆಗುತ್ತಿದೆ. 

ಕೆಲವಾರು ಅಧಿಕಾರಿಗಳು ಕನ್ನಡ ಬಳಸಲು ತೋರುತ್ತಿರುವ ಕುಬjತನದಿಂದ ಕನ್ನಡ ಭಾಷೆಗೆ ತಂತ್ರಾಂಶ ಒಗ್ಗಿಲ್ಲವೇ ಎನ್ನುವಷ್ಟರ ಮಟ್ಟಿಗೆ ಇಂಗ್ಲಿಷ್‌ ಕಂಡು ಬರುತ್ತಿದೆ. ಆಡಳಿತದಲ್ಲಿ ಕನ್ನಡ ಬಳಸಲು ತಪ್ಪು ಮಾಡುವ ಅಧಿಕಾರಿಯ ಸೌಲಭ್ಯ ಕಡಿತ ಮಾಡುವ ಶಿಫಾರಸು, ವಾಗ್ಧಂಡನೆಗೆ ಗುರಿಪಡಿಸುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ಆದರೆ, ಕ್ರಮದ ಅಧಿಕಾರ ಇಲ್ಲ ಎಂದು ಬೇಸರಿಸಿದರು. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಕಲಮರಳ್ಳಿ, ಕನ್ನಡ ನಾಡು- ನುಡಿ: ಆತಂಕಗಳು, ಕನ್ನಡಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪ, ಕರ್ನಾಟಕ ಏಕೀಕರಣಕ್ಕೆ ದಾವಣಗೆರೆ ಜಿಲ್ಲೆಯ ಕೊಡುಗೆ ವಿಷಯ ಮಂಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಪ್ರೊ|ಸಿ. ಎಚ್‌. ಮುರಿಗೇಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಡಿಡಿಪಿಐ ಎಚ್‌.ಎಂ. ಪ್ರೇಮಾ ಇದ್ದರು. ಜಿ.ಎಚ್‌. ರಾಜಶೇಖರ್‌ ಗುಂಡಗಟ್ಟಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next