ಮಂಗಳೂರು: ಬ್ರಾಂಡ್ ವಿಷನ್ ಇವೆಂಟ್ಸ್, ಮಂಗಳೂರು ಅಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸೀ ಬರ್ಡ್ ಕ್ರಿಕೆಟ್ ಅಕಾಡೆಮಿ ಸಂಸ್ಥೆಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅನುಮೋದನೆಯೊಂದಿಗೆ ಆಯೋಜಿಸುವ ಮಂಗಳೂರು ಪ್ರೀಮಿಯಮ್ ಲೀಗ್ (ಎಂಪಿಎಲ್) ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ಆರಂಭವಾಗಲಿದೆ.
ನವಮಂಗಳೂರು ಬಂದರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎ. ಒಂದರ ತನಕ ನಡೆಯುವ ಈ ಪಂದ್ಯಾ ವಳಿಯನ್ನು ಕರ್ನಾಟಕದ ಮಾಜಿ ವೇಗಿ ವೆಂಕಟೇಶ ಪ್ರಸಾದ್ ಉದ್ಘಾಟಿಸುವರು. ಜತೆಗೆ ಕರ್ನಾಟಕದ ಮಾಜಿ ಸ್ಪಿನ್ನರ್ ರಘುರಾಮ್ ಭಟ್, ಶ್ರೀಶಾಂತ್, ಶ್ರೀಲಂಕಾ ಕ್ರಿಕೆಟಿಗರಾದ ರೋಷನ್ ಡಿ’ಸಿಲ್ವ, ಮಿಲಿಂದ ಸಿರಿವರ್ಧನ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅದ್ದೂರಿಯ ವರ್ಣ ರಂಜಿತ ಉದ್ಘಾಟನಾ ಸಮಾ ರಂಭ ಹೊನಲು ಬೆಳಕಿನಲ್ಲಿ ಜರಗಲಿದೆ. ಭಾಗವಹಿಸುವ 12 ತಂಡಗಳ ಆಟಗಾರರು, ಮಾಲಕರು, ತರಬೇತುದಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಮನರಂಜನ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಲಿವೆ. ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ, ಕೋಚ್ ಡೇವ್ ವಾಟ್‌ಮೋರ್ ಕೂಡ ಆಗಮಿಸಿ ಆಟಗಾರರನ್ನು ಹುರಿದುಂಬಿಸುವರು.
ಮಂಗಳವಾರ ಬೆಳಗ್ಗೆ ಪಂದ್ಯಗಳು ಆರಂಭವಾಗ ಲಿದ್ದು, ಹಿಂದಿನೆರಡು ವರ್ಷ ಗಳ ವಿಜೇತ ತಂಡ ಗಳಾದ ಬೆದ್ರ ಬುಲ್ಸ್ ಮತ್ತು ಕೋಸ್ಟಲ್ ಡೈಜೆಸ್ಟ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಕೆಪಿಎಲ್, ಐಪಿಎಲ್, ರಣಜಿಯ ಖ್ಯಾತ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸುವುದು ಈ ಬಾರಿಯ ವಿಶೇಷ.
ಪಂದ್ಯಾವಳಿ ಡೆನ್ ಚಾನೆಲ್ ಮೂಲಕ ರಾಜಾದ್ಯಂತ ನೇರ ಪ್ರಸಾರ ಕಾಣಲಿದೆ. ಸ್ಥಳೀಯ ಚಾನೆಲ್ ಹಾಗೂ ಫೇಸ್ ಬುಕ್ ಮೂಲಕವೂ ಪ್ರಸಾರವಾಗಲಿದೆ.