Advertisement

ಎಂಪಿ 3 ಪ್ಲೇಯರ್‌

10:14 AM Mar 15, 2020 | mahesh |

ಎಂಪಿ 3 ಪ್ಲೇಯರ್‌ ಸಹ ಅಂಥದ್ದೇ ಮೂರು ದಶಕಗಳಲ್ಲಿ ಬಂದು ಹೋದದ್ದು. ಈಗ ಪ್ರಚಲಿತವಿದ್ದರೂ, ಅಂದಿನ ಖದರ್‌ ಇಲ್ಲ. ಮೆಲ್ಲಗೆ ಬದಿಗೆ ಸರಿದುಕೊಂಡು ರಸ್ತೆಯಲ್ಲಿ ಹೋಗುತ್ತಿರುವ ಮತ್ತೂಂದು ದೊಡ್ಡ ಮೆರವಣಿಗೆಯನ್ನು ನೋಡುವಂತಿದೆ ಅದು. ಹಾಗೆಂದು ಇದೂ ಸಹ ಆ ದಿನದಲ್ಲಿ ಹೀಗೆಯೇ ಮೆರವಣಿಗೆ ಮಾಡಿಕೊಂಡೇ ಬಂದಿದ್ದು. ಎಷ್ಟು ವಿಚಿತ್ರ? ಕೇವಲ ಒಂದೆರಡು ದಶಕದಲ್ಲೇ ಬದಿಗೆ ಸರಿಯುವ ಕಾಲ ಬರುತ್ತದೆಂದು ನಿಜಕ್ಕೂ ಅಂದುಕೊಂಡಿರಲಿಲ್ಲವೇನೋ?

Advertisement

ಕಾ ಣದಂತೆ ಮಾಯವಾದ‌ನು ನಮ್ಮ ಶಿವ ಕೈಲಾಸ ಸೇರಿಕೊಂಡನೋ ?
ಸಿಡಿ ಗಳ ಕಥೆ ಕೇಳುವ ಮೊದಲು ಎಂಪಿ 3 ಗಳ ಕಥೆ ಕೇಳುವುದೇ ಉತ್ತಮ. ಅದಕ್ಕಿರುವ ಕಾರಣ ಒಂದೇ. ಎಂಪಿ 3 ಗಳೂ ಒಂದು ಸಂದರ್ಭದಲ್ಲಿ ರಾಜನಂತೆ ಬಾಳಿದವು. ಯುವರಾಜನೆಂದುಕೊಳ್ಳೋಣ. ಆಗಿನ್ನೂ ಸಿಡಿ ರೇಡಿಯೋ ಕೇಳುವ ಕಾಲ ಕೊಂಚ ಮಸುಕಾಗಿತ್ತು. ಟಿವಿ ಯಲ್ಲಿ ಕುಳಿತು ಗಂಟೆಗಟ್ಟಲೆ ನೋಡುವಷ್ಟು ವ್ಯವಧಾನವಿರಲಿಲ್ಲ. ಜತೆಗೆ ಆಗ ಈಗ ಇದ್ದಷ್ಟು ಚಾನೆಲ್‌ಗ‌ಳೂ ಇರಲಿಲ್ಲ. ಈ ಎರಡರ ಕೊರತೆ ಮತ್ತು ಅವಕಾಶಗಳನ್ನು ಬಳಸಿಕೊಂಡು ಒಮ್ಮೆ ಜಗತ್ತಿನಲ್ಲಿ ಇಣುಕಿ ನೋಡಿದ್ದು ಈ ಎಂಪಿ 3 ಗಳು.

ಅಲ್ಲಿಯವರೆಗೆ ಸಂಗೀತ ಕೇಳುವುದೆಂದರೆ ಜೋರಾಗಿ ಮನೆ ಮಂದಿಗೆಲ್ಲಾ, ಅಷ್ಟೇ ಏಕೆ? ಕೇರಿಯ ನಾಲ್ಕೈದು ಮನೆಗೆ ಕೇಳುವಂತೆ ದೊಡ್ಡದೊಂದು ಸ್ಪೀಕರ್‌ಗಳನ್ನಿಟ್ಟು ಹಾಡು ಹಾಕುವುದೆ ಮಜಾ. ಆಗೆಲ್ಲಾ ಎಷ್ಟೋ ಮನೆಗಳಲ್ಲಿ ಯಾರು ಬಂದರು, ಯಾರು ಹೋದರು, ಯಾರು ಇದ್ದಾರೆ ಎನ್ನುವುದೆಲ್ಲವೂ ಸಂಗೀತ ಸ್ವರದಲ್ಲೇ ಲೆಕ್ಕ ಹಾಕಲಾಗುತ್ತಿತ್ತು.

ಕೇರಿಯ ಕೊನೆಯಲ್ಲಿರುವ ಮನೆಯವರ ಮಗ ಬೆಂಗಳೂರಿಗೆ ಹೋದವ ಊರಿಗೆ ರಜೆಗೆ ಬಂದಿರುವುದೂ ಗೊತ್ತಾಗುತ್ತಿದ್ದುದು ಅವರ ಮನೆಯಲ್ಲಿ ಕೇಳಿ ಬರುತ್ತಿದ್ದ ಸಂಗೀತ ಹಾಗೂ ಶಬ್ದದ ಲೆಕ್ಕದಲ್ಲಿ. ಜೋರಾಗಿ ಆಧುನಿಕ ಸಂಗೀತ ಬರುತ್ತಿದ್ದರೆ, ಶ್ಯಾಮ ರಜೆಗೆ ಬಂದಿರಬೇಕು ಎಂದು ಕೊಳ್ಳುತ್ತಿದ್ದರು. ಅಷ್ಟು ಪ್ರಚಲಿತದಲ್ಲಿದ್ದ ಸ್ಪೀಕರ್‌ ಸಿಸ್ಟಂ ನ್ನು ಕ್ರಮೇಣ ಬದಿಗೆ ಸರಿಸಿದ್ದು ಇದೇ ಎಂಪಿ 3 ಪ್ಲೇಯರ್‌.

1980 ರ ದಶಕದಲ್ಲಿ ಡಿಜಿಟಲ್‌ ಆಡಿಯೋ ಪ್ಲೇಯರ್‌ ಎಂಬುದು ಯುರೋಪ್‌ನಲ್ಲಿ ಲಭ್ಯವಾದರೂ, ಎಂಪಿ 3 ಪ್ಲೇಯರ್‌ ಎಂಬುದು ಪರಿಚಯವಾದದ್ದು 1990 ರ ದಶಕದಲ್ಲಿ. ಜಗತ್ತಿನ ಮೊದಲ ಎಂಪಿ3 ಪ್ಲೇಯರ್‌ ಅಭಿವೃದ್ಧಿ ಪಡಿಸಿದ್ದು ದಕ್ಷಿಣ ಕೊರಿಯಾದ ಕಂಪೆನಿ. 90 ನೇ ದಶಕದ ಕೊನೆ ಪಾದದಲ್ಲಿ ಈ ಬೆಳವಣಿಗೆ. ಅನಂತರ ಕೆಲವೇ ಸಮಯದಲ್ಲಿ ಭಾರತಕ್ಕೂ ಬಂದಿತು. ಆದರೂ ಅದು ಜನಪ್ರಿಯಗೊಂಡಿದ್ದು ಮಾತ್ರ 2012 ರ ಮೇಲೆ. ಅದುವರೆಗೆ ಯಾರದೋ ಕೆಲವರ ಕೈಯಲ್ಲಿ ಅದು ಬಳಕೆಯಾಗುತ್ತಿತ್ತು. ಅಷ್ಟೊಂದು ಜನಪ್ರಿಯವೂ ಆಗಿರಲಿಲ್ಲ.

Advertisement

ವೈಯಕ್ತಿಕ ಸಂಗೀತ
ಎಂಪಿ 3 ಪ್ಲೇಯರ್‌ ಜನಪ್ರಿಯವಾಗಿದ್ದೇ ಯುವ ಜನತೆಯಿಂದ. ನನಗೆ ಬೇಕಾದ ಸಂಗೀತವನ್ನು ನಾನಷ್ಟೇ ಕೇಳಿಕೊಳ್ಳುತ್ತೇನೆ ಎಂದು ಯೋಚಿಸಿದವರೆಲ್ಲಾ ಎಂಪಿ 3 ಪ್ಲೇಯರ್‌ ನ್ನು ಖರೀದಿಸಿಕೊಂಡು, ಅದಕ್ಕೆ ಇಯರ್‌ ಫೋನ್‌ಗಳನ್ನು ಹಾಕಿಕೊಂಡು ಕೇಳತೊಡಗಿದರು. ಈಗಲೂ ನೆನಪಿದೆ, ಅದು ಬಂದ ಆರಂಭದಲ್ಲಿ ಎರಡೂ ರೀತಿಯ ತಮಾಷೆಗಳು ನಡೆಯುತ್ತಿದ್ದವು. ಕೆಲವರು ಅದನ್ನು ಹಾಕಿಕೊಂಡು ರಸ್ತೆಯಲ್ಲಿ ತಿರುಗಾಡುತ್ತಿದ್ದುದು ತನ್ನಲ್ಲೂ ಎಂಪಿ 3 ಪ್ಲೇಯರ್‌ ಇದೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿ. ಇದನ್ನು ಕಂಡ ಅನೇಕ ಹಿರಿಯರು, ಟಿವಿ ಧಾರಾವಾಹಿಯಲ್ಲಿ ಬರ್ತಾ ಇದ್ದದ್ದೂ ಇಲ್ಲಿಗೂ ಬಂದಿತೇ ಎಂದು ತಮಾಷೆ ಮಾಡುತ್ತಿದ್ದರು. ಯಾಕೆಂದರೆ, ಅದನ್ನು ಹಾಕಿಕೊಂಡ ಮೇಲೆ ಅವರದ್ದೇ ಲೋಕ.

ಇದು ಜನಪ್ರಿಯವಾಗಿದ್ದೇ ವೈಯಕ್ತಿಕ ನೆಲೆಯಲ್ಲಿ. ಯುವಜನರು ಮನೆಯಲ್ಲಿ ಇದನ್ನು ಖರೀದಿಸಿಕೊಂಡು ತಮ್ಮ ಕೋಣೆಗೆ ಹೋಗಿ ಕುಳಿತರೆಂದರೆ ಮುಗಿಯಿತು. ಇದರಿಂದ ಬದಿಗೆ ಸರಿದದ್ದು ಟೇಪ್‌ ರೆಕಾರ್ಡರ್‌ಗಳು ಹಾಗೂ ಸ್ಪೀಕರ್‌ಗಳು. ಅಲ್ಲಿಯವರೆಗೆ ಸಮುದಾಯ ಸಂಗೀತ ಉಪಕರಣವಾಗಿದ್ದ ಟೇಪ್‌ರೆಕಾರ್ಡರ್‌ ಮೌನ ತಾಳಿತು. ಅದನ್ನು ಬಳಸುತ್ತಿದ್ದವರೇ ಕಡಿಮೆಯಾದರು.

ಹೀಗೆ ಸ್ವಲ್ಪ ಕಾಲ ಎಂಪಿ 3 ಪ್ಲೇಯರ್‌ ಮೆರೆಯುತ್ತಿದ್ದ ಸಂದರ್ಭದಲ್ಲಿ ಮೊಬೈಲ್‌ ಜನಪ್ರಿಯವಾಗ ತೊಡಗಿತು. ಸ್ಮಾರ್ಟ್‌ ಫೋನ್‌ ಹಲವು ಇಂಥ ಉಪಕರಣಗಳಿಗೆ ಪರ್ಯಾಯವಾಗಿಬಿಟ್ಟಿತು. ಅದರ ಪರಿಣಾಮವೇ ಅಧಿಕ. ಈ ಮಧ್ಯೆಯೂ ಎಂಪಿ 3 ಪ್ಲೇಯರ್‌ ಉಳಿದುಕೊಳ್ಳಲು ಮಾಡಿದ ಸಾಹಸ ಹಲವು. ಅದರಲ್ಲಿ ರೆಕಾರ್ಡರ್‌ ಆಯ್ಕೆಯೂ ಒಂದು. ಅದೂ ಸಹ ಬಹಳ ದಿನಗಳ ಕಾಲ ಎಂಪಿ 3 ಗೆ ಶಕ್ತಿ ತುಂಬಲಿಲ್ಲ.

ಇಂದು ಏನೇನೋ ಆಗಿದೆ
ಈಗ ಎಂಪಿ 3 ಪ್ಲೇಯರ್‌ ಜಾಗವನ್ನು ಸ್ಮಾರ್ಟ್‌ಫೋನ್‌ ಆವರಿಸಿಕೊಂಡಿದೆ. ಸಂಗೀತದಿಂದ ಹಿಡಿದು ಸಿನೆಮಾದವರೆಗೂ ಅದರಲ್ಲೇ. ವಾಯ್ಸ ರೆಕಾರ್ಡಿಂಗ್‌. ವಿಡಿಯೋ ರೆಕಾರ್ಡಿಂಗ್‌ ಎಲ್ಲವೂ ಅದರಲ್ಲೇ ಇರುವ ಕಾರಣ ಪರ್ಯಾಯಗಳ ಬಗ್ಗೆಯೂ ಯೋಚಿಸುತ್ತಿಲ್ಲ. ವೈಯಕ್ತಿಕ ನೆಲೆಯ ಆಯ್ಕೆ ಸ್ಮಾರ್ಟ್‌ ಫೋನ್‌ನಿಂದ ಮತ್ತಷ್ಟು ಬೆಳೆದಿದೆ.

ಹೇಗಿದೆ ನೋಡಿ
ಭೂತಕಾಲದ ಎಲ್ಲ ಪರಿಕಲ್ಪನೆಗಳು ಎಲ್ಲರನ್ನೂ ಸೇರಿಸುವ, ಸಾಮೂಹಿಕ ಕಲ್ಪನೆಯನ್ನೇ ಹೊಂದಿದ್ದವು. ಬಹುತೇಕ ಅಂಥದ್ದೇ. ಮಾಹಿತಿ ತಂತ್ರಜ್ಞಾನ ಎಲ್ಲವನ್ನೂ ವೈಯಕ್ತಿಕಗೊಳಿಸುತ್ತಾ ಹೋಗಿತು. ಲೋಕದೊಳಗೆ ಎಲ್ಲರಿಗೂ ಒಂದೊಂದು ಲೋಕ. ಅವರದ್ದೇ ಲೋಕ. ಅದೇ ಗತಿಯಲ್ಲೇ ಇದ್ದೇವೆ ಇಂದೂ ಸಹ. ಎಲ್ಲ ನೆನಪುಗಳನ್ನೂ ವಿದ್ಯುನ್ಮಾನ ಮುದ್ದೆ ಮಾಡಿಹಾಕಿಕೊಂಡು ಕುಳಿತುಕೊಳ್ಳುತ್ತಿದ್ದೇವೆ. ಜಗತ್ತು ತೀರಾ ಸಣ್ಣದಾಗುತ್ತಿದೆ ಎನಿಸುವುದಿಲ್ಲವೇ? ನನಗಂತೂ ಅನಿಸುತ್ತದೆ.

ಆ ಸ್ಪೀಕರ್‌ನ ದಿನಗಳು
ಇದು ಹಾಗೆಯೇ. ಆ ದಿನಗಳು ಎಂದು ನೆನಪು ಮಾಡಿಕೊಂಡ ಹಾಗೆಯೇ. ಸ್ಪೀಕರ್‌ಗಳದ್ದು ದೊಡ್ಡ ದೊಡ್ಡ ಕಥೆಗಳಿವೆ. ಪ್ರತಿ ಹಳ್ಳಿಯಿಂದ ಓದು ಮುಗಿಸಿ ಬೆಂಗಳೂರಿಗೆ ಬಸ್‌ ಹತ್ತಿದವ, ಮೊದಲು (ಇದು 1980-90 ರ ದಶಕದ ಮಾತು) ತನ್ನೂರಿಗೆ ವಾಪಸ್‌ ಹೋಗುವಾಗ ಬಹುತೇಕ ಯುವಕರು ತೆಗೆದುಕೊಂಡು ಹೋಗಿದ್ದ ದೊಡ್ಡ ಗಾತ್ರದ ಕಪ್ಪು ಸ್ಪೀಕರ್‌ಗಳನ್ನು.

ಎರಡು ಕಪ್ಪು ಸ್ಪೀಕರ್‌ ಹಾಗೂ ಅಪ್ಲಿ ಪ್ಲೇಯರ್‌ಗಳನ್ನು ಹೊತ್ತುಕೊಂಡು ಹೋಗಿ, ಊರಿನ ಬಸ್‌ಸ್ಟಾಂಡಿನಿಂದ ಇಳಿದು, ಮನೆಗೆ ಹೋಗಿ ಮೊದಲು ಮಾಡುತ್ತಿದ್ದ ಕೆಲಸವೆಂದರೆ, ಅದರ ಸಂಪರ್ಕವನ್ನು. ಬಹಳಷ್ಟು ಮಂದಿಯಲ್ಲಿ ಅಪ್ಪ-ಅಮ್ಮಂದಿರಿಗೂ ಏನೋ ಒಂದು ಬಗೆಯ ಖುಷಿ. ಮಗನ ಮೊದಲ ಸಂಬಳ, ಏನೋ ತಂದಿದ್ದಾನೆ, ಏಕೆ ಬೇಸರ ವ್ಯಕ್ತಪಡಿಸಬೇಕೆಂದು ಕೊಂಡು, “ದೇವರ ಹಾಡು ಹಾಕಪ್ಪಾ’ ಎಂದು ಹೇಳಿ ಶುರು ಮಾಡಿಸುತ್ತಿದ್ದರು. ಕೆಲವರ ಮನೆಯಲ್ಲಿ, “ಯಾಕಪ್ಪಾ, ಇದಕ್ಕೆಲ್ಲಾ ದುಡ್ಡು ಹಾಕಿ ಹಾಳು ಮಾಡುತ್ತೀ?’ ಎಂದು ಕೇಳಿದ್ದೂ ಉಂಟು. ಈ ಹೊಸ ಸ್ಪೀಕರ್‌ ನೋಡಲು ಬಹಳಷ್ಟು ಮಂದಿ ಮನೆಗೆ ಬಂದು ಸೇರುತ್ತಿದ್ದುದೂ ಉಂಟು. ಅದರೊಂದಿಗೆ, ಸುತ್ತಮುತ್ತಲಿನ ಮನೆಗಳಲ್ಲಿ ನಡೆಯುವ ಸಣ್ಣ ಕಾರ್ಯಕ್ರಮಗಳಿಗೆ ಈ ಸ್ಪೀಕರ್‌ ಸೇವೆ ಲಭ್ಯವಾಗುತ್ತಿತ್ತು. ಒಟ್ಟೂ ಜನರನ್ನು ಸೇರಿಸಲು ಆ ಸ್ಪೀಕರ್‌ಗಳು ಸಾಕಾಗುತ್ತಿದ್ದವು.

- ರೂಪರಾಶಿ

Advertisement

Udayavani is now on Telegram. Click here to join our channel and stay updated with the latest news.

Next