ಭೋಪಾಲ್: 32 ವರ್ಷದ ಪತ್ನಿ ಗಂಡನನ್ನು ಕೊಂದು ಶವವನ್ನು ಅಡುಗೆ ಮನೆಯಲ್ಲಿ ಹೂತು ಹಾಕಿ ಸುಮಾರು ಒಂದು ತಿಂಗಳ ಕಾಲ ಶವವನ್ನು ಹೂತ ಸ್ಥಳದಲ್ಲಿಯೇ ಅಡುಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 22ರಂದು ಕಾರೋಂಡಿ ಗ್ರಾಮದಲ್ಲಿರುವ ತನ್ನ ಮನೆಯಿಂದ ವಕೀಲ ಮಹೇಶ್ ಬಾನ್ವಾಲ್ (35ವರ್ಷ) ನಾಪತ್ತೆಯಾಗಿದ್ದರು. ತನ್ನ ಪತಿ ಮಹೇಶ್ ನಾಪತ್ತೆಯಾಗಿರುವುದಾಗಿ ಪತ್ನಿ ಪ್ರಮೀಳಾ (32ವರ್ಷ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಏತನ್ಮಧ್ಯೆ ನವೆಂಬರ್ 21ರಂದು ಮಹೇಶ್ ಹಿರಿಯ ಅಣ್ಣ ಪೊಲೀಸರನ್ನು ಭೇಟಿಯಾದ ನಂತರ ಪ್ರಕರಣ ತಿರುವು ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ. ಮಹೇಶ್ ಅಣ್ಣ ಅರ್ಜುನ್ ಬಾನ್ವಾಲ್ ವ್ಯಕ್ತಪಡಿಸಿದ ಸಂಶಯದಿಂದ ಪೊಲೀಸರಿಗೆ ಈ ಪ್ರಕರಣ ಬೇಧಿಸಲು ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.
ನನ್ನ ತಮ್ಮ ನಾಪತ್ತೆಯಾದ ನಂತರ ನಾನು ಹಾಗೂ ನಮ್ಮ ಕುಟುಂಬದ ಸದಸ್ಯರು ಮನೆಗೆ ಭೇಟಿ ನೀಡಲು ಪ್ರಯತ್ನಿಸಿದಾಗ ಪತ್ನಿ ಪ್ರಮೀಳಾ ತಡೆಯೊಡ್ಡುತ್ತಿದ್ದಳು. ಹೀಗೆ ಹಲವು ಬಾರಿ ಮನೆಗೆ ಭೇಟಿ ನೀಡುತ್ತೇವೆ ಎಂದು ಹೋದಾಗ ಪ್ರಮಿಳಾ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಪಸ್ ಕಳುಹಿಸುತ್ತಿದ್ದಳು ಎಂದು ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅರ್ಜುನ್ ಹೇಳಿಕೆ ಆಧಾರದ ಮೇಲೆ ಪೊಲೀಸ್ ತಂಡ ಗುರುವಾರ ಗ್ರಾಮಕ್ಕೆ ತೆರಳಿದಾಗ ಮನೆಯಿಂದ ಕೆಟ್ಟ ವಾಸನೆ ಹೊರಬರುತ್ತಿತ್ತು. ಇಡೀ ಮನೆಯನ್ನು ಶೋಧಿಸಿದಾಗ ಏನೂ ಸಿಗಲಿಲ್ಲವಾಗಿತ್ತು. ಕೊನೆಗೆ ಅಡುಗೆ ಮನೆಯ ಸ್ಲ್ಯಾಬ್ ಅನ್ನು ತೆಗೆದು ಅಗೆದಾಗ ಕೊಳೆತ ಶವ ಪತ್ತೆಯಾಗಿತ್ತು ಎಂದು ಪೊಲೀಸ್ ಠಾಣಾಧಿಕಾರಿ ಅಮರಕಂಠಕ್ ಭಾನುಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಗಂಡನ ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿಯೇ ಪತ್ನಿ ಪ್ರಮೀಳಾ ಕಳೆದ ಒಂದು ತಿಂಗಳ ಕಾಲ ಅಡುಗೆ ಮಾಡುತ್ತಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ. ತನ್ನ ಹಿರಿಯ ಭಾವ ಗಂಗಾರಾಮ್ ಬಾನ್ವಾಲ್ ಅವರ ಪತ್ನಿ ಜತೆ ಮಹೇಶ್ ಅನೈತಿಕ ಸಂಬಂಧ ಹೊಂದಿದ್ದು, ಗಂಗಾರಾಮ್ ಮತ್ತು ನಾನು ಸೇರಿ ಗಂಡನನ್ನು ಹತ್ಯೆಗೈಯುವ ಸಂಚು ರೂಪಿಸಿರುವುದಾಗಿ ಪ್ರಮೀಳಾ ಪೊಲೀಸರಿಗೆ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.