ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸೆಪ್ಟೆಂಬರ್ 18ರಂದು ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಶ್ರೀಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Army:ಪತಿಯ ಸಾವಿನ ವಿಷಯ ಪತ್ನಿಗೆ ತಿಳಿದಿಲ್ಲ: ಹುತಾತ್ಮ ಕರ್ನಲ್ ಸಿಂಗ್ ಸಹೋದರ ಗಿಲ್ ನುಡಿ…
8ನೇ ಶತಮಾನದಲ್ಲಿ ಅದ್ವೈತ ಸಿದ್ಧಾಂತವನ್ನು (ಎರಡಿಲ್ಲದ “ಒಂದೇ ಆಗಿರುವ) ಪ್ರತಿಪಾದಿಸಿರುವ ಆದಿಶಂಕರಾಚಾರ್ಯ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿದೆ. ಇಂದೋರ್ ನಗರದಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಓಂಕಾರೇಶ್ವರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಲಾಗಿದೆ ಎಂದು ವರದಿ ವಿವರಿಸಿದೆ.
ಆದಿ ಶಂಕರಾಚಾರ್ಯರು ಪ್ರತಿಪಾದಿಸಿರುವ ಅದ್ವೈತ ಸಿದ್ಧಾಂತದ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಸ್ಫೂರ್ತಿದಾಯಕವಾದ ಬಹುವಿಧದ ಲೋಹದ ಆದಿ ಶಂಕರಾಚಾರ್ಯರ 12 ವರ್ಷದ ಬಾಲಕನ ಪ್ರತಿಮೆ ಇದಾಗಿದ್ದು, ಬರೋಬ್ಬರಿ 108 ಅಡಿ ಎತ್ತರ ಹೊಂದಿದೆ.
ಆದಿ ಶಂಕರಾಚಾರ್ಯರ ಜೀವನ ಆಧ್ಯಾತ್ಮಿಕ ಮಹತ್ವದಿಂದ ಕೂಡಿದೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ತ್ಯಾಗದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದರ ಪರಿಣಾಮ ಆದಿ ಶಂಕರರು ಓಂಕಾರೇಶ್ವರಕ್ಕೆ ಬಂದು, ಅಲ್ಲಿ ತಮ್ಮ ಗುರು ಗೋವಿಂದ್ ಭಗವದ್ಪಾದ ಅವರ ಬಳಿ ನಾಲ್ಕು ವರ್ಷಗಳ ಕಾಲ ಮಾರ್ಗದರ್ಶನದ ಜತೆಗೆ ಶಿಕ್ಷಣ ಪಡೆದಿದ್ದರು. ತಮ್ಮ 12ನೇ ವಯಸ್ಸಿಗೆ ಓಂಕಾರೇಶ್ವರ ತೊರೆದು ಅದ್ವೈತ ಸಿದ್ಧಾಂತ ಪ್ರತಿಪಾದಿಸಲು ದೇಶ ಸಂಚಾರಕ್ಕೆ ಹೊರಟು, ಸನಾತನ ಧರ್ಮಕ್ಕೆ ಅಗಾದವಾದ ಕೊಡುಗೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.