Advertisement

ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಕ್ಕೆ ಸಂಸದ ತೇಜಸ್ವಿ ಸೂರ್ಯ ಚಾಲನೆ

12:48 AM Jan 09, 2020 | Lakshmi GovindaRaj |

ಬೆಂಗಳೂರು: ಯುವಕರಿಗೆ ಹೆಚ್ಚಿನ ಉದ್ಯೋಗ ನೀಡುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಶೀಘ್ರವೇ “ಬೃಹತ್‌ ಉದ್ಯೋಗ ಮೇಳ’ ಹಮ್ಮಿಕೊಳ್ಳುವುದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಬಸವನಗುಡಿಯ ಅಬಲಾಶ್ರಮದಲ್ಲಿ ಬುಧವಾರ “ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ’ ಉದ್ಘಾಟಿಸಿ ಮಾತನಾಡಿ, ಹತ್ತರಿಂದ ಹದಿನೈದು ಸಾವಿರ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಜನಸಂಖ್ಯೆಯ ಶೇ.45ರಷ್ಟು 15ರಿಂದ 30 ವರ್ಷದ ಯುವಜನರನ್ನು ಹೊಂದಿರುವ ಬೆಂಗಳೂರು ಯುವ ಸಿಟಿ ಎಂದು ಕರೆಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಯುವಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಹಲವು ಕ್ಷೇತ್ರಗಳಲ್ಲಿ ಉದ್ಯೋಗಗಳು ಖಾಲಿ ಇವೆ. ಆದರೆ ಆ ಉದ್ಯೋಗಗಳಿಗೆ ಬೇಕಾದ ಕೌಶಲ್ಯ ಹಲವರಲ್ಲಿ ಇಲ್ಲ ಎಂಬ ಮಾತು ಕೇಳಿ ಬರುತ್ತಿವೆ.

ಆ ದೃಷ್ಟಿಯಿಂದ ಪದವಿ ಕೋರ್ಸ್‌ಗಳ ಜತೆಗೆ ಕೌಶಲ್ಯ ತರಬೇತಿಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು. ಅಬಲಾಶ್ರಮದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಆಗಲು ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್‌ ಕಾರಣರಾಗಿದ್ದಾರೆ. ಅವರ ಆಸೆಯಂತೆ ಅಬಲಾಶ್ರಮದಲ್ಲಿ ಕೇಂದ್ರ ತೆರೆಯಲಾಗಿದ್ದು, ಯುವಕರು ಇದರ ಉಪಯೋಗ ಪಡೆಯುವಂತೆ ಸಲಹೆ ನೀಡಿದರು.

ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಗತಿಕಂಡಿದೆ. ಆ ಹಿನ್ನೆಲೆಯಲ್ಲಿ ಯುವ ಸಮುದಾಯ ಪದವಿ ಪಡೆದರಷ್ಟೇ ಸಾಲದು. ಕೌಶಲ್ಯ ತರಬೇತಿಗೂ ಆದ್ಯತೆ ನೀಡಬೇಕು. ಅನಂತಕುಮಾರ್‌ ಅವರು ಅಬಲಾಶ್ರಮದಲ್ಲಿಯೇ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪಿಸಬೇಕು ಎಂಬ ಕನಸು ಕಂಡಿದ್ದರು.

Advertisement

ಅಲ್ಲದೆ ಸಂಬಂಧಪಟ್ಟ ಸಚಿವರ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದರು ಎಂದರು. ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ನಿಗಮದ ಮೇಲ್ವಿಚಾರಣಾಧಿಕಾರಿ ಕ್ಯಾಪ್ಟನ್‌ ಕೌಸ್ತವ್‌ ನಾಥ್‌ ಮಾತನಾಡಿದರು. ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ, ಉದಯ್‌ ಬಿ. ಗರುಡಾಚಾರ್‌, ಮಾಜಿ ಮಹಾಪೌರ ಕಟ್ಟೆ ಸತ್ಯನಾರಾಯಣ, ಅಬಲಾಶ್ರಮದ ಅಧ್ಯಕ್ಷೆ ಡಾ. ವಿಜಯಲಕ್ಷ್ಮೀ ದೇಶ್ಮಾನೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next