ಉಡುಪಿ: ಹಿಂದುಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಅನ್ಯಧರ್ಮೀಯರ ಕುರಿತು ನಿಖರ ತಿಳಿವಳಿಕೆ ಇಲ್ಲದಿರುವುದು ಮುಖ್ಯ ಕಾರಣ. ನಾವು ರಾಜಕೀಯವಾಗಿ ಹಿಂದುತ್ವ ಬೆಂಬಲಗರನ್ನು ಮಾತ್ರ ಆರಿಸುವುದಕ್ಕೆ ಆದ್ಯತೆ ಕೊಡಬೇಕು. ಹಿಂದುಗಳು ಮತಾಂತರವಾಗದಂತೆ ನೋಡಿಕೊಳ್ಳುವುದಲ್ಲದೆ ಈ ಹಿಂದೆ ಮತಾಂತರವಾದವರನ್ನು ಹಿಂದೂ ಧರ್ಮಕ್ಕೆ ಮರಳಿ ವಾಪಸು ಕರೆತರುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಯುವ ನಾಯಕ, ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು.
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ವತಿಯಿಂದ ಶನಿವಾರ ನಡೆದ “ವಿಶ್ವಾರ್ಪಣಮ್’ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು “ಭಾರತದಲ್ಲಿ ಹಿಂದೂ ಪುನರುತ್ಥಾನ’ ವಿಷಯ ಕುರಿತು ಮಾತನಾಡಿದರು.
ಭಾರತದಲ್ಲಿ ಸನಾತನ ಸಂಸ್ಕೃತಿಯ ಅನುಯಾಯಿಗಳಿಗೆ ತಮ್ಮ ಧರ್ಮಕ್ಕೂ ಇತರರ ಧರ್ಮಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನು ಹಿಂದಿನಿಂದಲೂ ಅರಿತಿಲ್ಲ. ನಾವು ಆಧ್ಯಾತ್ಮಿಕ ಸೆಲೆಯಲ್ಲಿ ಚಿಂತನೆ ನಡೆಸುತ್ತಿದ್ದರೆ, ಇತರರು ಖಡ್ಗ ಹಿಡಿದು ಮತ ಪ್ರಚಾರ ಮಾಡಿದರು ಮತ್ತು ಅವರದು ರಾಜಕೀಯ ಹಿನ್ನೆಲೆಯ ಧರ್ಮ. ಹೀಗಾಗಿಯೇ ಪುರಾತನ ಸಂಸ್ಕೃತಿಯ ರೋಮನ್, ಗ್ರೀಕ್ ಸಂಸ್ಕೃತಿಗಳು ಕೆಲವೇ ವರ್ಷಗಳಲ್ಲಿ ನಿರ್ನಾಮವಾದವು. ಅಲ್ಲಿಗಿಂತ ಹೆಚ್ಚು ದಾಳಿ ಭಾರತದಲ್ಲಿ ನಡೆದಿದ್ದರೂ ಅದನ್ನು ಕೆಚ್ಚೆದೆಯಿಂದ ಹೋರಾಟ ನಡೆದ ಕಾರಣ ಇಲ್ಲಿ ಇನ್ನೂ ಮೂಲಸಂಸ್ಕೃತಿ ಜೀವಂತವಾಗಿದೆ. ಈ ದಾಳಿಗೆ ಪ್ರತ್ಯುತ್ತರವೆಂದರೆ ಹಿಂದುತ್ವವಾಗಿದೆ ಎಂದರು.
ಚೀನಾದಲ್ಲಿ ಅನೇಕ ಬೌದ್ಧ ದೇವಾಲಯಗಳಿವೆ. ಇವುಗಳೆಲ್ಲವನ್ನೂ ಭಾರತದಿಂದ ಹೋದ ಸನ್ಯಾಸಿಗಳು/ಬಿಕ್ಷುಗಳು ಸ್ಥಾಪಿಸಿದ್ದು. ನಮ್ಮ ದೇಶದಿಂದ ಎಲ್ಲಿಯೂ ಧರ್ಮ ಪ್ರಚಾರಕ್ಕೆ ಸೈನಿಕರು ಹೋಗಲಿಲ್ಲ. ಭಾರತದಲ್ಲಿ ಹಿಂದುತ್ವ ದುರ್ಬಲವಾಗಲು ಕಮ್ಯುನಿಸಂ, ಕೊಲೊನಿಸಂ, ಮೆಕಾಲಿಸಂ ಕಾರಣ. ಟಿಪ್ಪು ಜಯಂತಿ ಆಗಬೇಕೆಂದು ಒತ್ತಾಯ ಮಾಡುವವರು ಡಾ|ಅಬ್ದುಲ್ ಕಲಾಂ ಜಯಂತಿ, ಸಂತ ಶಿಶುನಾಳ ಶರೀಫರ ಜಯಂತಿ ಆಗಬೇಕೆಂದು ಒತ್ತಾಯಿಸಿದ್ದಾರಾ? ಇದುವೇ ಮೂಲಭೂತ ವ್ಯತ್ಯಾಸವಾಗಿದೆ ಎಂದು ತೇಜಸ್ವೀ ಸೂರ್ಯ ಬೆಟ್ಟು ಮಾಡಿದರು.
ನಮಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವಿಮಾನಯಾನ, ಬಸ್ ಪ್ರಯಾಣಗಳೆಲ್ಲವೂ ಖಾಸಗಿ ಸಂಸ್ಥೆಗಳದ್ದು ಬೇಕು. ದೇವರಿಗೆ ಮಾತ್ರ ಏಕೆ ಸರಕಾರವಿರಬೇಕು? ಮೈಕ್ರೋಸಾಫ್ಟ್ನಂತಹ ಕಂಪೆನಿಗಳನ್ನು ನಡೆಸುವವರಿಗೆ ದೇವಸ್ಥಾನ ನಡೆಸಲು ಬರುವುದಿಲ್ಲವೆ? ಅನ್ಯಧರ್ಮೀಯರ ಧಾರ್ಮಿಕ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲವೆ? ಉತ್ತರಾಖಂಡದಲ್ಲಿ ದೇವಸ್ಥಾನಗಳ ಆಡಳಿತದಿಂದ ಸರಕಾರ ಹೊರ ನಡೆದಿದೆ. ಇತರ ಕಡೆಗಳಲ್ಲಿಯೂ ಇದು ಆಗಬೇಕು. ಜಾತೀಯ ತಾರತಮ್ಯ ತೊಲಗಬೇಕು ಮತ್ತು ಇದರ ಜತೆ ಜಾತಿ ಸಂಘಟನೆಗಳು ಅವರವರ ಸಮಾಜಕ್ಕೆ ಉತ್ತಮ ಸೌಲಭ್ಯ ಕೊಡಿಸಿ ಅವರನ್ನು ಎತ್ತರಕ್ಕೇರಿಸಬೇಕು ಎಂದು ತೇಜಸ್ವೀ ಸೂರ್ಯ ಆಶಯ ವ್ಯಕ್ತಪಡಿಸಿದರು.
ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಶಾಸಕ ಕೆ.ರಘುಪತಿ ಭಟ್, ಉಡುಪಿಯ ವಾಸ್ತುತಜ್ಞ ವಿ| ಸುಬ್ರಹ್ಮಣ್ಯ ಅವಧಾನಿ, ಹೈದರಾಬಾದ್ ಹೊಟೇಲ್ ಉದ್ಯಮಿ ಬಿ.ಪಿ. ರಾಘವೇಂದ್ರ ರಾವ್ ಪಾಲ್ಗೊಂಡಿದ್ದರು. ಕೇರಳದ ಜ್ಯೋತಿಷ ಶಾಸ್ತ್ರಜ್ಞ ವಿ| ವಿಷ್ಣುಪ್ರಸಾದ್ ಹೆಬ್ಟಾರ್, ಮುಂಬಯಿ ಸಂಜೀವಿನಿ ಆಸ್ಪತ್ರೆಯ ಎಂಡಿ ಡಾ| ಸುರೇಶ್ ರಾವ್, ಉದ್ಯಮಿ ಟಿ. ಶಂಭು ಶೆಟ್ಟಿ, ಹಿರಿಯ ಛಾಯಾಚಿತ್ರಗ್ರಾಹಕ ಯಜ್ಞ ಮಂಗಳೂರು ಅವರನ್ನು ಸಮ್ಮಾನಿಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.