ಕೊಪ್ಪಳ: ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ಕೊಟ್ಟಿಲ್ಲ, ಆದರೆ ಸೌಜನ್ಯಕ್ಕೂ ಈ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. ಇದು ನನಗೆ ಬೇಸರ ತರಿಸಿದೆ. ಒಂದೇ ಮಾತಿನಲ್ಲಿ ಹೇಳುವುದೆಂದರೆ ನಾಯಕರು ನನ್ನನ್ನ ಗುಜರಿ ಲೀಡರ್ ಎಂದು ತಿಳಿದುಕೊಂಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ನಾಯಕರ ವಿರುದ್ದವೇ ಆಕ್ರೋಶ ಹೊರ ಹಾಕಿದ್ದಾರೆ.
ಗಿಣಗೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕರಡಿ ಸಂಗಣ್ಣ ಒಬ್ಬ ಗುಜರಿ ಲೀಡರ್ ಎಂದು ತಿಳಿದು ಅವರು ನನಗೆ ಟಿಕೆಟ್ ಕೊಡದೇ ಬಿಟ್ಟಿರಬಹುದು. ನನಗೆ ಟಿಕಿಟ್ ತಪ್ಪಿದಾಗ ಬೆಂಬಲಿಗರಲ್ಲಿ ಅಸಮಾಧಾನ ಆಗುವುದು ಸಹಜ. ಪಕ್ಷ ಘೋಷಿಸಿದ ಅಭ್ಯರ್ಥಿ ಒಪ್ಪಿಕೊಳ್ಳಬೇಕು. ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಅವರನ್ನು ಬದಲಿಸಿ ಎನ್ನುವುದಿಲ್ಲ. ಟಿಕೆಟ್ ವಿಚಾರ ಮುಗಿದ ಅಧ್ಯಾಯ ಎಂದರು.
ಹೈಕಮಾಂಡ್‌ಗೆ ಮೂರು ಪ್ರಶ್ನೆ ಕೇಳಿರುವೆ. ನನಗೆ ಬಿಜೆಪಿ ಹೈಕಮಾಂಡ್ ಈ ವರೆಗೂ ಯಾಕೆ ಕರೆ ಮಾಡಿಲ್ಲ ? ನನಗೆ ಟಿಕೆಟ್ ತಪ್ಪಿಸಲು ಕಾರಣ ಯಾರು ? ಉದ್ದೇಶವೇನು ? ಈ ಪ್ರಶ್ನೆಗೆ ಅವರು ಉತ್ತರ ಕೊಡುವುದನ್ನು ಕಾಯುತ್ತಿದ್ದೇನೆ. ಹೈಕಮಾಂಡ್‌ನಿಂದ ಉತ್ತರ ಸಿಗುವ ವರೆಗೂ ನಾನು ಕಾದು ನೋಡುವೆ. ನಾವೇನು ಗಡುವು ಕೊಟ್ಟಿಲ್ಲ. ಗುಡುವು ಕೊಟ್ಟರೆ ನಮಗೆ ನಷ್ಟ ಎಂದರು.
ನಾನು ಈ ಬಾರಿ ಮತ್ತೊಮ್ಮೆ ಅವಕಾಶ ಕೊಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೆವು. ಆದರೆ ಟಿಕೆಟ್ ಸಿಗಲಿಲ್ಲ. ಕಾಂಗ್ರೆಸ್‌ನ ಹಲವು ನಾಯಕರು ನನ್ನ ಸಂಪರ್ಕ ಮಾಡಿದ್ದಾರೆ. ಕಾಂಗ್ರೆಸ್‌ಗೆ ಆಹ್ವಾನ ವಿಚಾರ ನಾನು ಇನ್ನು ಯಾವ ನಿರ್ಧಾರ ಮಾಡಿಲ್ಲ. ನಮ್ಮವರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಶ್ರೀನಾಥ್ ಅವರು ನನ್ನ ಮೇಲಿನ ಅಭಿಮಾನಕ್ಕೆ ಅವರು ಆಹ್ವಾನ ಮಾಡಿದ್ದಾರೆ ಎಂದರು.
ನಾನೇನು ರಾಜಕೀಯ ನಿವೃತ್ತಿಯಾಗುವುದಿಲ್ಲ. ನನ್ನನ್ನು ನಂಬಿದ ತುಂಬಾ ಜನರು ಇದ್ದಾರೆ. ಬಿಜೆಪಿ ಬಿಟ್ಟು ಏಲ್ಲಿಗೂ ಹೋಗುವುದಿಲ್ಲ. ರಾಜಕೀಯವಾಗಿ ಮಾಡುವ ಕೆಲಸಗಳು ಸಾಕಷ್ಟಿವೆ. ನನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಸಾಕಷ್ಟು ನೋವಿದೆ ಎಂದು ಭಾವನಾತ್ಮಕ ಮಾತುಗಳನ್ನಾಡಿದರು.