ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅವರ ಬೆಂಬಲಿಗರಿಗೆ ತುಂಬಲಾರದ ನೋವುಂಟು ಮಾಡಿದೆ.
ಮೊದಲಿನಿಂದಲೂ ಬಿಎಸ್ ವೈ ಅವರನ್ನು ಬೆಂಬಲಿಸುತ್ತ ಬಂದಿರುವ ಹೊನ್ನಾಳಿ ಹುಲಿ ಖ್ಯಾತಿಯ ಶಾಸಕ ಎಂ.ಪಿ ರೇಣುಕಾಚಾರ್ಯ ‘ಬಿಎಸ್ ವೈ ವಿದಾಯ’ಕ್ಕೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
“ದಶಕಗಳ ನಿಮ್ಮ(BSY)ಸಂಘಟನೆ ಮತ್ತು ರಾಜಕೀಯ ಸೇವೆ ಲಕ್ಷಾಂತರ ಕಾರ್ಯಕರ್ತರು ಮತ್ತು ಅನೇಕ ನಾಯಕರನ್ನು ಸೃಷ್ಟಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅಪಾರ. ಮುಂದೆಯು ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗು ಇರಲೇಬೇಕು. ನನ್ನ ರಾಜಕೀಯ ಜೀವನದ ಆದಿಯಿಂದ ಇಂದಿನವರೆಗೆ ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ ಇಂದು” ಎಂದು ನೋವಿನ ಮಾತುಗಳನ್ನಾಡಿದ್ದಾರೆ ರೇಣುಕಾಚಾರ್ಯ.
ಬಿ.ಎಸ್ ವೈ ಹಾಗೂ ರೇಣುಕಾಚಾರ್ಯ ಅವರದು ಗಟ್ಟಿ ಸ್ನೇಹ ಸಂಬಂಧ. ಮೊದಲಿನಿಂದಲೂ ಬಿಎಸ್ ವೈ ಅವರನ್ನು ಬೆಂಬಲಿಸುತ್ತಲೆ ಬಂದಿದ್ದಾರೆ. ಸಿಎಂ ಬದಲಾವಣೆ ಕಿಡಿ ಹೊತ್ತಿದಾಗಿನಿಂದಲೂ ಅವರ ಬೆಂಬಲಕ್ಕೆ ನಿಂತಿರುವ ರೇಣುಕಾಚಾರ್ಯ, ಬಿಎಸ್ ವೈ ವಿರೋಧಿಗಳಿಗೆ ಮಾತಿನ ಚಾಟಿ ಬೀಸಿದ್ದು ಕೂಡ ಇದೆ. ಬಿ.ಎಸ್.ವೈ ಅವರ ರಾಜಕೀಯ ಏಳುಬೀಳಿನಲ್ಲಿ ಜೊತೆಯಾಗಿದ್ದ ರೇಣುಕಾಚಾರ್ಯ ಇದೀಗ ತಮ್ಮ ನೆಚ್ಚಿನ ನಾಯಕನ ಪದತ್ಯಾಗಕ್ಕೆ ಕಂಬಿನಿ ಮಿಡಿದಿದ್ದಾರೆ.