Advertisement

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

07:24 PM Sep 25, 2023 | Team Udayavani |

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯ ಮೂರು ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನ ಪ್ರತಿ ಕೆ.ಜಿ.ಗೆ 231ರೂಗೆ ಹರಾಜಾಗಿದ್ದು, ತಂಬಾಕು ಬೆಳೆಗಾರರು ಹರ್ಷಚಿತ್ತರಾಗಿ ತೆರಳಿದರು.

Advertisement

ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸೋಮವಾರ ಸಂಸದ ಪ್ರತಾಪಸಿಂಹರವರು ಸ್ಥಳೀಯ ಜನಪ್ರತಿನಿಧಿಗಳೊಳಗೂಡಿ ಚಾಲನೆ ನೀಡಿದರು.

20 ಕಂಪನಿಗಳು ಭಾಗಿ:
ಈ ಬಾರಿ ಐಟಿಸಿ, ಜಿಪಿಐ, ಪಿಎಸ್‌ಎಸ್, ಡೆಕ್ಕನ್, ಪಿಟಿಪಿ, ಅಲಯನ್ಸ್, ಎಲ್‌ಇಪಿ, ಎಂಟಿಜೆ, ಎಂಇಪಿಎಲ್, ಎನ್‌ಟಿಎಸ್, ಸೇರಿದಂತೆ 20 ಕಂಪನಿಗಳು ಹರಾಜಿನಲ್ಲಿ ಭಾಗವಹಿಸಿದ್ದವು. ಈ ವೇಳೆ ಕಟ್ಟೆಮಳಲವಾಡಿ ಗ್ರಾ.ಪಂ.ಅಧ್ಯಕ್ಷೆ ಚಿನ್ನಮುತ್ತು, ಹರಾಜು ವ್ಯವಸ್ಥಾಪಕ ವೇಣುಗೋಪಾಲ್, ಆರ್.ಎಂ.ಓ. ಬಿ.ಸುಬ್ಬರಾವ್, ಹರಾಜು ಅಧೀಕ್ಷಕರಾದ ಧನರಾಜ್, ಚಂದ್ರಶೇಖರ್, ಸಿದ್ದರಾಮಡಾಂಗೆ, ಜಿ.ಪಂ.ಮಾಜಿ ಸದಸ್ಯರಾದ ತಂಬಾಕು ಮಂಡಳಿ ಮಾಜಿಸದಸ್ಯ ನಾಗರಾಜಮಲ್ಲಾಡಿ, ಐಟಿಸಿ ಕಂಪನಿಯ ಲೀಪ್‌ಮ್ಯಾನೇಜರ್ ಶ್ರೀನಿವಾಸರೆಡ್ಡಿ, ವ್ಯವಸ್ಥಾಪಕ ಚನ್ನವೀರೇಶ್, ವಿವಿಧ ಕಂಪನಿಗಳ ಬೈರ‍್ಸ್, ರೈತ ಮುಖಂಡರಾದ ಶಿವಣ್ಣೇಗೌಡ, ರಾಮೇಗೌಡ, ವಕೀಲ ಮೂರ್ತಿ, ನಾಗರಾಜಪ್ಪ, ನಂಜುಡೇಗೌಡ, ಚಂದ್ರೇಗೌಡ, ಅಶೋಕ, ಶ್ರೀಧರ್, ವಿಜಯ್‌ಕುಮಾರ್, ಸತೀಶ್ ಸೇರಿದಂತೆ ನೂರಾರು ರೈತರು ಹಾಜರಿದ್ದರು.

ಸ್ಥಿರ ಬೆಲೆ ನೀಡಲು ಸಂಸದ ಸೂಚನೆ:
ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಪ್ರತಾಪಸಿಂಹ ಈ ಬಾರಿ ಕೈಕೊಟ್ಟ ಮಳೆಯಿಂದಾಗಿ ಎಲ್ಲ ಬೆಳೆಯು ಕೈಕೊಟ್ಟಿದ್ದು, ತಂಬಾಕು ಬೆಳೆ ಮಾತ್ರ ರೈತರಿಗೆ ವರದಾನವಾಗಿದೆ. ಈಬಾರಿ ಸುಮಾರು 8೦ಮಿಲಿ ತಂಬಾಕು ಉತ್ಪಾದನೆಯಾಗಿರುವ ನಿರೀಕ್ಷೆಇದೆ. ಕಳೆದ ಬಾರಿ ಕೆ.ಜಿ.ಗೆ ಸರಾಸರಿ 228ರೂ ಬೆಲೆ ಸಿಕ್ಕಿತ್ತು. ಈಗ 230ರೂನಿಂದ ಆರಂಭವಾಗಿರುವುದು ಸಂತಸ ತಂದಿದೆ. ಯಾವುದೇ ಕಾರಣಕ್ಕೂ ಇದಕ್ಕಿಂದ ದರ ಕಡಿಮೆಯಾಗದಂತೆ ಉತ್ತಮ ಸರಾಸರಿ ಬೆಲೆ ಕಾಯ್ದುಕೊಳ್ಳುವಂತೆ ಐಟಿಸಿ ಸೇರಿದಂತೆ ಎಲ್ಲ ಕಂಪನಿಗಳಿಗೆ ಸೂಚಿಸಿದ್ದೇನೆಂದರು.

ಅನಧಿಕೃತ ತಂಬಾಕು ಮಾರಾಟಕ್ಕೂ ಅವಕಾಶ:
ಕಳೆದ ಬಾರಿಯಂತೆ ಅನಧಿಕೃತ ಬೆಳೆಗಾರರು ಹಾಗೂ ಹೆಚ್ಚುವರಿಯಾಗಿ ಬೆಳೆದಿರುವ ತಂಬಾಕಿಗೆ ವಿಧಿಸುತ್ತಿದ್ದ ದಂಡಶುಲ್ಕವನ್ನು ಸಂಪೂರ್ಣ ತೆಗೆದುಹಾಕಲಾಗಿದೆ.

Advertisement

ಕರ್ನಾಟಕಕ್ಕೆ ನಿಗದಿಪಡಿಸಿರುವ 99ಮಿಲಿಯನ್ ತಂಬಾಕಿಗೆ 80ಮಿಲಿಯನ್ ಮಾತ್ರ ಬೆಳೆದಿದ್ದು, ಅನಧಿಕೃತ ಬೆಳೆಗಾರರಿಗೆ ಅಧಿಕೃತ ಲೈಸನ್ಸ್ ನೀಡುವ ಸಂಬಂಧ ಮಂಗಳವಾರ ನಡೆಯುವ ವಾಣಿಜ್ಯ ಮಂತ್ರಾಲಯದ ಅಧಿಕಾರಿಗಳು, ತಂಬಾಕು ಮಂಡಳಿಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಹಾಗೂ ಮಂಡಳಿ ಸದಸ್ಯರ ಸಭೆಯಲ್ಲಿ ಚರ್ಚಿಸಲಾಗುವುದೆಂದರು.

ಕೆ.ಜಿ.ಗೆ 231ರೂಗೆ ಮಾರಾಟ:
ಮೊದಲ ದಿನವೇ ಗುಣಮಟ್ಟದ ತಂಬಾಕು 231ರೂಗಳಿಗೆ ಹರಾಜಾಗುವ ಮೂಲಕ ಕಳೆದ ಬಾರಿಗಿಂತ 31ರೂ ಹೆಚ್ಚಿನ ಬೆಲೆ ಸಿಕ್ಕಂತಾಗಿದೆ. ಪ್ರತಿ ಪ್ಲಾಟ್ ಫಾರಂನಲ್ಲಿ ತಲಾ 27ಬೇಲ್‌ಗಳಂತೆ 71ಬೇಲ್‌ಗಳನ್ನು ಮಾರಾಟಕ್ಕಿಡಲಾಗಿತ್ತು. ಎಲ್ಲವೂ ತಲಾ 230 231ರೂಗೆ ಹರಾಜಾದವು. ಉತ್ತಮ ಬೆಲೆಯಿಂದ ಬೆಳೆಗಾರರು ಹರ್ಷಚಿತ್ತರಾಗಿದ್ದರು.

ನಿರ್ದೇಶಕಿ ವಿರುದ್ದ ಸಂಸದರ ಆಕ್ರೋಶ:
ಮಂಡಳಿಯ ನಿರ್ದೇಶಕಿ ಅಶ್ವಿನಿನಾಯ್ಡು ತಂಬಾಕು ಬೆಳೆಗಾರರ ಸಭೆಗೆ ಬರಲ್ಲ. ಸಮಸ್ಯೆ ಕೇಳಲ್ಲವೆಂಬ ದೂರುಗಳಿವೆ ಎಂಬ ಪ್ರಶ್ನೆಗೆ ನಿರ್ದೇಶಕಿ ಹರಾಜು ಆರಂಭದ ದಿನವೂ ಬಂದಿಲ್ಲ. ಕರ್ನಾಟಕದ ರೈತರೆಂದರೆ ಇವರಿಗೆ ತಾತ್ಸಾರ ಹೀಗಾಗಿ ಇಂತವರನ್ನು ಮುಂದುವರೆಸದಂತೆ ವಾಣಿಜ್ಯ ಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ. ಇನ್ನು ಬೆಂಗಳೂರಿನ ನಿರ್ದೇಶಕರ ಕಚೇರಿಯನ್ನು ಮೈಸೂರಿಗೂ, ಮೈಸೂರಿನ ಆರ್‌ಎಂಓ ಕಚೇರಿಯನ್ನು ಹುಣಸೂರಿಗೂ ಸ್ಥಳಾಂತರಿಸುವಂತೆ ಮಂಡಳಿ ಸಭೆಯಲ್ಲಿ ನಿರ್ದೇಶಿಸಿದ್ದರೂ ಯಾವ ಕ್ರಮವಾಗಿಲ್ಲವೆಂದು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಈ ವಿಚಾರವನ್ನು ಸಭೆಯಲ್ಲಿ ಪ್ರಶ್ನಿಸುವುದಾಗಿ ಭರವಸೆ ಇತ್ತರು.

ಶಾಸಕರ ಸಂದೇಶ:
ತಾವು ಬೆಂಗಳೂರಿನ ನ್ಯಾಯಾಲಯಕ್ಕೆ ಡಿಸಿಸಿ ಬ್ಯಾಂಕಿನ ವಿಚಾರವಾಗಿ ಭಾಗವಹಿಸಬೇಕಿರುವುದರಿಂದ ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲವೆಂದಿರುವ ಶಾಸಕ ಜಿ.ಡಿ.ಹರೀಶ್‌ಗೌಡರು ತಂಬಾಕು ಉತ್ಪಾದನೆ ವೆಚ್ಚ ಹೆಚ್ಚಿದ್ದು, ಕಂಪನಿಗಳು ಕನಿಷ್ಟ 250ರೂ ದರ ನೀಡುವಂತೆ, ಯಾವುದೇ ದಂಡ ವಿಧಿಸದಂತೆ ಹಾಗೂ ಬೆಳೆಗಾರರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮಂಡಳಿ ಅಧಿಕಾರಿಗಳಿಗೆ ಪತ್ರದಲ್ಲಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next