ಮೈಸೂರು: ಕ್ರೈಸ್ತ ಅಥವಾ ಇತರ ಧರ್ಮಕ್ಕೆ ಮತಾಂತರ ಹೋಗುವ ಬುಡಕಟ್ಟು ಸಮುದಾಯದವರಿಗೆ ಇಲಾಖೆ ಯಿಂದ ನೀಡುವ ಸೌಲಭ್ಯ ಹಾಗೂ ಮೀಸಲಾತಿಗಳನ್ನು ರದ್ದುಪಡಿಸುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅನೇಕ ಸೌಲಭ್ಯ ನೀಡಿದರೂ ಹಾಡಿಗಳಲ್ಲಿ ಏಕೆ ಮತಾಂತರ ಹೆಚ್ಚಾಗುತ್ತಿದೆ? ಕೆಲವರು ಏಸುಸ್ವಾಮಿ ಕೊಡುತ್ತಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿ ನಲ್ಲಿ ಹೆಚ್ಚಿನ ಸಂಖ್ಯೆಯ ಹಾಡಿಗಳಿವೆ. ಹುಣಸೂರಿನಲ್ಲಿ 54, ಪಿರಿಯಾಪಟ್ಟಣದಲ್ಲಿ 38 ಹಾಗೂ ನಂಜನಗೂಡಿನಲ್ಲಿ 5 ಹಾಡಿಗಳಿವೆ. ಎಲ್ಲಾ ಹಾಡಿ ಜನರಿಗೂ ಸಮರ್ಪಕವಾಗಿ ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲೂ ಅಂಗನವಾಡಿ ಕೇಂದ್ರಗಳ ಮೂಲಕ ಮನೆ-ಮನೆಗೆ ಆಹಾರ ಉತ್ಪನ್ನಗಳನ್ನು ತಲುಪಿಸಲಾಗಿದೆ ಎಂದರು.
ಬಳಿಕ ಮಾತನಾಡಿದ ಸಂಸದರು, ವಿದ್ಯುತ್‌ವಂಚಿತ ಹಾಡಿಗಳಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮಳೆಗಾಲ ಶುರುವಾಗುವ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂಸಿಇಒ ಎ.ಎಂ.ಯೋಗೇಶ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ಮತ್ತಿತರರಿದ್ದರು.