ಬೆಂಗಳೂರು: ಕಳೆದ ಹಾಸನ ಲೋಕಸಭಾ ಚುನಾವಣೆ ವೇಳೆ ಚುನಾವಣ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಸೂಚನೆ ನೀಡಿದೆ.
ವಿಚಾರಣೆಯನ್ನು ಜೂ. 24ಕ್ಕೆ ಮುಂದೂಡಿತು.
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು’ ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹಾಗೂ ಜಿ. ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ದೇವರಾಜೇಗೌಡರ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಪ್ರಜ್ವಲ್ ರೇವಣ್ಣ ಹೇಗೆ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ, ಆಸ್ತಿ ಮೌಲ್ಯ, ಬ್ಯಾಂಕ್ ಖಾತೆಗಳಲ್ಲಿನ ಹಣದ ಬಗ್ಗೆ ಯಾವ ರೀತಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪರಾಜಿತ ಅಭ್ಯರ್ಥಿ ಎ. ಮಂಜು ಅವರ ಹೇಳಿಕೆಯೂ ದಾಖಲಿಸಿಕೊಳ್ಳಲಾಯಿತು.
ಪ್ರಜ್ವಲ್ ಸರ್ಕಾರಿ ಜಮೀನು ಖರೀದಿಸಿದ್ದಾರೆ , ಆದಾಯ ತೆರಿಗೆ ವಂಚಿಸಿದ್ದಾರೆ , ಬೇನಾಮಿ ಆಸ್ತಿ ಗಳಿಸಿದ್ದಾರೆ , ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರೂ. ಬೆಲೆ ಬಾಳುತ್ತದೆ, ಆದರೆ ಅದರ ಮೌಲ್ಯವನ್ನು 14 ರೂ. ಲಕ್ಷ ಎಂದು ತೋರಿಸಲಾಗಿದೆ.
ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂ. ಹೊಂದಿದ್ದರೂ, ಕೇವಲ 5 ಲಕ್ಷ ಇದೆ ಎಂದು ತೋರಿಸಿದ್ದಾರೆ ಎಂದು ದೇವರಾಜೇಗೌಡ ತಮ್ಮ ಹೇಳಿಕೆಯಲ್ಲಿ ವಿವರಿಸಿದರು, ಬಳಿಕ ಮುಂದಿನ ವಿಚಾರಣೆಗೆ ಖುದ್ದು ಹಾಜರಿರಲು ಪ್ರಜ್ವಲ್ ರೇವಣ್ಣ ಅವರಿಗೆ ಹೇಳುವಂತೆ ಅವರ ಪರ ವಕೀಲರಿಗೆ ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿತು.