ಭೋಪಾಲ್: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಮಧ್ಯಪ್ರದೇಶದ ಜಬಲ್ ಪುರ್ ನ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ ಟಿಒ)ಯ ಮನೆ ಮೇಲೆ ಬುಧವಾರ(ಆಗಸ್ಟ್ 17) ರಾತ್ರಿ ಆರ್ಥಿಕ ಅಪರಾಧ ದಳ ದಾಳಿ ನಡೆಸಿದ್ದು, ಬೃಹತ್ ಪ್ರಮಾಣದ ಆಸ್ತಿ, ಪಾಸ್ತಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಲಿಂಗಾಯತ ಮತ ಬೇಟೆ ನಾಚಿಗೆಗೇಡಿನ ಸಂಗತಿ: ಕೈ ನಾಯಕರಿಗೆ ಬಿಜೆಪಿ ಟಾಂಗ್
ವರದಿಯ ಪ್ರಕಾರ, ಜಬಲ್ ಪುರದ ಶತಾಬ್ದಿ ಪುರಂ ಕಾಲೋನಿಯಲ್ಲಿರುವ ಆರ್ ಟಿಒ ಸಂತೋಷ್ ಪಾಲ್ ನಿವಾಸದಲ್ಲಿ ಆತನ ಆದಾಯಕ್ಕಿಂತ 650ಪಟ್ಟು ಹೆಚ್ಚು ಮೌಲ್ಯದ ಆಸ್ತಿಯನ್ನು ಆರ್ಥಿಕ ಅಪರಾಧ ದಳ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದು, ಪಾಲ್ ಪತ್ನಿ ಕೂಡಾ ಆರ್ ಟಿಒ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ವಿವರಿಸಿದೆ.
ಆರ್ಥಿಕ ಅಪರಾಧ ದಳ ದಾಳಿ ನಡೆಸಿದ್ದ ಸಂದರ್ಭದಲ್ಲಿ ಪಾಲ್ ಮನೆಯಲ್ಲಿ 16 ಲಕ್ಷ ರೂಪಾಯಿ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು, ಐಶಾರಾಮಿ ಕಾರುಗಳು, ಹಲವು ಇನ್ನಿತರ ದಾಖಲೆಗಳು ಪತ್ತೆಯಾಗಿದ್ದು, ಮನೆಯಲ್ಲಿ ಮಿನಿ ಥಿಯೇಟರ್ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಲ್ ಹೆಸರಿನಲ್ಲಿ ಡಜನ್ ಗಟ್ಟಲೇ ಮನೆಗಳು, ಫಾರಂ ಹೌಸ್ ಗಳು ಇದ್ದಿರುವ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ತಮ್ಮ ಆದಾಯಕ್ಕಿಂತ ನೂರಾರು ಪಟ್ಟು ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದಾಗಿ ಆರ್ ಟಿಒ ಸಂತೋಷ್ ಪಾಲ್ ಮತ್ತು ಆತನ ಪತ್ನಿ, ಕ್ಲರ್ಕ್ ರೇಖಾ ಪಾಲ್ ವಿರುದ್ಧ ದೂರು ಬಂದಿರುವುದಾಗಿ ಆರ್ಥಿಕ ಅಪರಾಧ ದಳದ ಎಸ್ಪಿ ದೇವೇಂದ್ರ ಪ್ರತಾಪ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.