ದಾವಣಗೆರೆ: “ಕಾಂಗ್ರೆಸ್ ಸರ್ಕಾರ ಕೈಗೊಂಡ ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ’ ಎಂಬ ಡಿಕೆಶಿ ಹೇಳಿಕೆ ಸಮರ್ಥಿಸಿಕೊಂಡಿರುವ ಹಿರಿಯ ಶಾಸಕ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ತಮ್ಮದೇ ಪಕ್ಷದ ಶಾಸಕ ಎಂ.ಬಿ.ಪಾಟೀಲ್ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವ ಡಿ.ಕೆ.ಶಿವಕುಮಾರ್ ಹಿಂದೆ ನಾವು ಮಾಡಿದ್ದು ತಪ್ಪಾಯಿತು ಎಂಬುದಾಗಿ ಹೇಳಿದ್ದಾರೆ. ಅದು ತಪ್ಪಲ್ಲ, ಸರಿ ಎಂದು ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಹೇಳುತ್ತಿದ್ದಾರೆ. ಇಷ್ಟು ವರ್ಷ ಸುಮ್ಮನಿದ್ದು ಈಗ ಎಂ.ಬಿ.ಪಾಟೀಲ್ ಇಷ್ಟೊಂದು ಜೋರು ಮಾಡ್ತಾನಲ್ಲ. ಅವನಿಗೆ ಏನು ಅಧಿಕಾರ ಇದೆ. ಅವನೇನು ಕಾಂಗ್ರೆಸ್‌ನ ಸುಪ್ರೀಮಾ? ಡಿಕೆಶಿ ವಿರುದ್ಧ ದೂರು ಕೊಡುತ್ತೇವೆ ಎಂದೆಲ್ಲಾ ಹೇಳುತ್ತಾನೆ. ನಾವು ಸಹ ಅವನ ವಿರುದ್ಧ ದೂರು ಕೊಡುತ್ತೇವೆ’ ಎಂದರು.
“ವಿನಯ್ ಕುಲಕರ್ಣಿ ಸೋತು ಮನೆಯಲ್ಲಿ ಕುಂತಿದ್ದಾನೆ. ಅವನು ಕೂಡ ಬಂದು ಲಿಂಗಾಯಿತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುತ್ತಾನೆ. ಇವರೆಲ್ಲ ಇಷ್ಟು ದಿನ ಮಲಗಿಕೊಂಡಿದ್ರಾ? ಸಮಾಜ ಒಡೆಯುವ ಕೆಲಸವನ್ನು ಯಾರು ಮಾಡಿದರೂ ತಪ್ಪು. ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಬೆಂಬಲಿಗರು ಸಮಾಜ ಒಡೆಯುವ ಘಾತುಕ ಕೆಲಸ ಮಾಡಬಾರದು. ಸಮಾಜ ಒಂದೇ. ಬಸವಣ್ಣ ಏನು ಹೇಳಿದ್ದಾರೋ ಅದನ್ನು ಎಲ್ಲರೂ ಪಾಲಿಸಬೇಕು’ ಎಂದರು.
“ಎಂ.ಬಿ.ಪಾಟೀಲ್ ಎದೆಯುಬ್ಬಿಸಿಕೊಂಡು, ಮುಖ ಸೊಟ್ಟ ಮಾಡಿಕೊಂಡು ಮಾತನಾಡುವದನ್ನು ಬಿಡಲಿ. ತಾನು ಟಿವಿಯಲ್ಲಿ ಏನು ಮಾತನಾಡುತ್ತಿದ್ದೇನೆ ಎಂಬುದನ್ನು ನೋಡಿ, ಸರಿಯಾದ ರೀತಿ ಮಾತನಾಡುವುದನ್ನು ಕಲಿಯಲಿ. ಹಣ ಇದ್ರೆ ಗರ್ವ ಇರಬಾರದು. ಗರ್ವ ಬಿಟ್ಟು ಸಮಾಜ ಒಂದಾಗಲು ಪಾಟೀಲ್ ಹಾಗೂ ವಿನಯ್ ಇಬ್ಬರೂ ಸಹಕರಿಸಲಿ.
ಒಳಪಂಗಡಗಳಲ್ಲಿ ಮದುವೆ ನಡೆದಲ್ಲಿ ಬೇಧ-ಭಾವ ಹೋಗಲಿದೆ ಎಂಬುದಾಗಿ ಎಲ್ಲಾ ಜಗದ್ಗುರುಗಳು ಹೇಳುತ್ತಾರೆ. ಆ ಕೆಲಸ ಮಾಡಲಿ. ಅದನ್ನು ಬಿಟ್ಟು ಸಮಾಜ ಒಡೆಯುವ ಕಾರ್ಯಕ್ಕೆ ಕೈ ಹಾಕುವುದು ಬೇಡ’ ಎಂದರು. “ಯಾವ ಸ್ವಾಮೀಜಿಯೇ ಆಗಲಿ ಸಮಾಜ ಒಡೆಯುವ ಕಾಯಕ ಮಾಡಬಾರದು. ಇಷ್ಟು ವರ್ಷ ಇವರೆಲ್ಲಾ ಮಲಗಿದ್ದರಾ?’ ಎಂದು ಕಿಡಿ ಕಾರಿದರು.
ಈ ಹಿಂದೆ ಸಿದ್ದರಾಮಯ್ಯನವರು ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಮಾತು ಕೇಳಿ ಆ ನಿರ್ಧಾರ ಕೈಗೊಂಡರು. ವೀರಶೈವ ಲಿಂಗಾಯಿತರು ಒಟ್ಟು 2 ಕೋಟಿಯಷ್ಟಿದ್ದೆವು. ಜನಗಣತಿ ಮಾಡಿಸಿ, ಸಮಾಜ ಒಡೆದು ಕೇವಲ 70 ಲಕ್ಷ ಅಂತ ಹೇಳಿದ್ರು. ಉಪಪಂಗಡ ಮಾಡಿ, ಜನಸಂಖ್ಯೆ ಕಡಿಮೆ ಮಾಡಿದ್ರು. ರಾಜ್ಯದಲ್ಲಿ ಒಕ್ಕಲಿಗ-ಲಿಂಗಾಯಿತ ಇಬ್ಬರದೇ ಪ್ರಾಬಲ್ಯ ಇದೆ. ಒಟ್ಟು ಜನಸಂಖ್ಯೆಯಲ್ಲಿ ಶೇ. 20-25ರಷ್ಟು ವೀರಶೈವ ಲಿಂಗಾಯಿತರಿದ್ದಾರೆ. ಉಪ ಪಂಗಡ ಬಿಡಬೇಕು ಎಂದು ಆಗ್ರಹಿಸಿದರು.