ಹುಬ್ಬಳ್ಳಿ: ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ ರೈಲ್ವೆ ಅಧಿಕಾರಿಗಳ ಕ್ಲಬ್‌ನಲ್ಲಿ ಮಂಗಳವಾರ ನಡೆಯಿತು. ಈ ವೇಳೆ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಹುಬ್ಬಳ್ಳಿ ನಿಲ್ದಾಣದ ಸಮೀಪ ಸಂಚಾರ ದಟ್ಟಣೆ ನಿಯಂತ್ರಿಸಲು ಗದಗ ರಸ್ತೆಯ ಮೂಲಕ ನಿಲ್ದಾಣಕ್ಕೆ ಪ್ರವೇಶ ಪಡೆಯಲು ವ್ಯವಸ್ಥೆ ಕಲ್ಪಿಸಬೇಕು.
ಹುಬ್ಬಳ್ಳಿ-ಚಿಕ್ಕಜಾಜೂರ ರೈಲ್ವೆ ಜೋಡು ಮಾರ್ಗ ಕಾರ್ಯವನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ, ಹುಬ್ಬಳ್ಳಿ-ತಿರುಪತಿ ನಿತ್ಯದ ಪ್ಯಾಸೆಂಜರ್ ರೈಲಿಗೆ ಹಿಟ್ನಾಳ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಬೇಕು. ಅಲ್ಲದೆ ರೈಲ್ವೆ ಜೋಡು ಮಾರ್ಗ ಕಾರ್ಯ ತ್ವರಿತಗೊಳಿಸಬೇಕು ಎಂದರು.
ಶಾಸಕ ಬಿ.ಆರ್.ಯಾವಗಲ್ಲ ಮಾತನಾಡಿ, ಹೊಳೆಆಲೂರ ಹಾಗೂ ಮಲ್ಲಾಪುರ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋವಾ ಶಾಸಕ ನಿಲೇಶ್ ಕಬ್ರಾಲ್ ಮಾತನಾಡಿ, ಗೋವಾ-ಲೋಂಡಾ ವಲಯದಲ್ಲಿ ರೈಲ್ವೆ ಜೋಡು ಮಾರ್ಗ ಮಾಡಬೇಕು ಎಂದು ಒತ್ತಾಯಿಸಿದರು.
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಮಾತನಾಡಿ, ನೈಋತ್ಯ ರೈಲ್ವೆಯಲ್ಲಿ 2016-17ನೇ ಸಾಲಿನಲ್ಲಿ 193 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ವರ್ಷಕ್ಕಿಂತ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.2ರಷ್ಟು ಹೆಚ್ಚಳವಾಗಿದೆ. ಪ್ರಯಾಣಿಕರ ಸಂಚಾರದಿಂದ 1929 ಕೋಟಿ ರೂ. ಆದಾಯ ಲಭಿಸಿದೆ ಎಂದರು.
ಮೈಸೂರು ವಿಭಾಗ ಭಾರತೀಯ ರೈಲ್ವೆಯ ಸಮಯ ನಿಖರತೆಯಲ್ಲಿ ಶೇ.97ರಷ್ಟು ಸಾಧನೆ ಮಾಡಿ ತೃತೀಯ ಸ್ಥಾನ ಗಳಿಸಿದೆ. ಪ್ರಸಕ್ತ ಸಾಲಿನಲ್ಲಿ 12 ಜೋಡಿ ರೈಲುಗಳನ್ನು ಪರಿಚಯಿಸಲಾಗಿದ್ದು, 3238 ವಿಶೇಷ ರೈಲುಗಳು ಸಂಚರಿಸಿದ್ದು, 2235 ಹೆಚ್ಚುವರಿ ಕೋಚ್‌ಗಳನ್ನು ಜೋಡಿಸಲಾಗಿದೆ ಎಂದು ತಿಳಿಸಿದರು. ನೈರುತ್ಯ ರೈಲ್ವೆ ವಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಜರಿದ್ದರು.