ಶಿರಸಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾದ ಗೋಕರ್ಣದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ ರಾಜ್ಯ ಸರಕಾರವು ರೋರಿಕ್ ಮತ್ತು ದೇವಿಕಾರಾಣಿ ರೋರಿಕ್ ಎಸ್ಟೇಟ್ ನ ಅಭಿವೃದ್ಧಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಂಜೂರು ಮಾಡಿರುವ “ಇನ್ವೆಸ್ಟ್ಮೆಂಟ್ ಆಫ್ ಎಲೆಕ್ಟ್ರಾನಿಕ್ ಟೂರಿಸ್ಟ್ ಸೆಂಟರ್ ಟು ಗ್ಲೋಬಲ್ ಸ್ಕೇಲ್” ಯೋಜನೆಯಡಿಯಲ್ಲಿ ರಾಜ್ಯಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿ, ಸ್ಥಳೀಯ ಪ್ರವಾಸೋದ್ಯಮಗಳನ್ನು ಮೇಲ್ದರ್ಜೆಗೇರಿಸಲು ಕರ್ನಾಟಕದಿಂದ ಎರಡು ಪ್ರವಾಸೋದ್ಯಮ ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ವಿಶೇಷವಾಗಿ ಗೋಕರ್ಣವನ್ನು ಕೈ ಬಿಡಲಾಗಿದೆ.
ಈ ಹಿಂದೆ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಪತ್ರ ಮುಖೇನ ಗೋಕರ್ಣದ ಪ್ರಸ್ತಾವನೆಯನ್ನು ನೀಡಲಾಗಿತ್ತು.ಇದಕ್ಕೆ ಸಚಿವರು ಭರವಸೆಯನ್ನು ಸಹ ನೀಡಿದ್ದರು.ಈ ಕುರಿತಾಗಿ ರಾಜ್ಯ ಸರಕಾರದ ಪ್ರವಾಸೋದ್ಯಮ ಮಂತ್ರಿಗಳಾದ ಎಚ್ ಕೆ ಪಾಟೀಲ್ ಅವರೊಂದಿಗೂ ಸಮಾಲೋಚನೆ ನಡೆಸಲಾಗಿತ್ತು. ಆದರೆ ಈಗಾಗಲೇ ರಾಜ್ಯಾದ್ಯಂತ ಪುರಾತನ ಕೋಟೆಗಳು, ಪ್ರಾಚೀನ ಧಾರ್ಮಿಕ ಪುಣ್ಯಕ್ಷೇತ್ರಗಳು, ನೈಸರ್ಗಿಕ ಸುಂದರ ತಾಣಗಳು ಹಾಗೂ ಇತರ ಪ್ರವಾಸಿ ತಾಣಗಳು ಇರುವಾಗ ಅವುಗಳೆಲ್ಲವನ್ನು ನಿರ್ಲಕ್ಷಿಸಿದ ಕರ್ನಾಟಕ ಸರ್ಕಾರವು ವಿವಾದಿತ ಸ್ಥಳವಾದ ‘ರೋರಿಕ್ ಮತ್ತು ದೇವಿಕಾರಾಣಿ ರೋರಿಕ್ ಎಸ್ಟೇಟ್ನ್ನು’ ಪ್ರವಾಸೋಧ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಅತ್ಯಂತ ಬೇಸರದ ಸಂಗತಿ. ರಾಜ್ಯ ಸರ್ಕಾರದ ಇಂತಹ ನಿಲುವನ್ನು ಖಂಡಿಸುವುದಾಗಿ ಸಂಸದ ಕಾಗೇರಿ ಹೇಳಿದ್ದಾರೆ.
ಒಂದು ಕಡೆ ಉತ್ತರಕನ್ನಡ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿಯನ್ನು ಪ್ರಕಟಿಸುವುದಾಗಿ ರಾಜ್ಯ ಸರಕಾರ ಆಶ್ವಾಸನೆ ನೀಡುತ್ತದೆ. ಅದೇ ಸಂದರ್ಭದಲ್ಲಿ ಜಿಲ್ಲೆಗೆ ಬರಬಹುದಾದ ಕೇಂದ್ರದ ಅನುದಾನವನ್ನು ಬೇರೆ ಕಡೆ ನೀಡಲು ಪ್ರಸ್ತಾವನೆ ಸಲ್ಲಿಸುತ್ತದೆ. ರಾಜ್ಯ ಸರಕಾರಕ್ಕೆ ಈ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಬದ್ಧತೆಯಿದ್ದಲ್ಲಿ ಈ ಹಿಂದೆಯೇ ಸಂಸದರು ಸಲ್ಲಿಸಿದ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸಬೇಕು ಮತ್ತು ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಬೆರೆಸಬಾರದು ಎಂದು ಕಾಗೇರಿಯವರು ಆಗ್ರಹಿಸಿದ್ದಾರೆ.