ನವದೆಹಲಿ:ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ನಿರ್ಲಕ್ಷ್ಯದಿಂದ ವಿಮಾನ ಅಪಘಾತಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಹಿರಿಯ ಪೈಲಟ್ ಮಜೀದ್ ಅಖ್ತರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಬೆಳಗಾವಿ ಚಳಿಗಾಲ ಅಧಿವೇಶನ ಕಲಾಪ ನೇರಪ್ರಸಾರ: ಸಭಾಪತಿ ಬಸವರಾಜ ಹೊರಟ್ಟಿ
ಮಧ್ಯಪ್ರದೇಶದ ನಾಗರಿಕ ಯಾನ ಇಲಾಖೆಯ ಕಾರ್ಯದರ್ಶಿ ಎಂ.ಸೆಲ್ವೆಂದ್ರನ್ ಇತ್ತೀಚೆಗೆ ಹೊರಡಿಸಿರುವ ಅಮಾನತು ಆದೇಶದಲ್ಲಿ, ಕ್ಯಾಪ್ಟನ್ ಮಜೀದ್ ಅಖ್ತರ್ ಗಂಭೀರವಾದ ನಿರ್ಲಕ್ಷ್ಯದ ಪರಿಣಾಮ ವಿಮಾನ ಅಪಘಾತಕ್ಕೆ ಕಾರಣವಾಗಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಿರುವುದಾಗಿ ತಿಳಿಸಿದ್ದರು.
ಕಳೆದ ವರ್ಷ ಮಧ್ಯಪ್ರದೇಶ ಸರ್ಕಾರ ಅಮೆರಿಕದ ಟೆಕ್ಸ್ ಟ್ರಾನ್ ಏವಿಯೇಷನ್ ಕಂಪನಿಯಿಂದ ಏಳು ಆಸನಗಳ ಬೀಚ್ ಕ್ರಾಫ್ಟ್ ಕಿಂಗ್ ಏರ್ ಬಿ-200ಜಿಟಿ ವಿಟಿ ಎಂಪಿಕ್ಯೂ ಎಂಬ ವಿಮಾನವನ್ನು 65 ಕೋಟಿ ರೂಪಾಯಿಗೆ ಖರೀದಿಸಿತ್ತು.
ಅಖ್ತರ್ ಪೂರ್ವಾನುಮತಿ ಇಲ್ಲದೆ ಭೋಪಾಲ್ ನ ಕೇಂದ್ರ ಕಚೇರಿಯಿಂದ ಹೊರ ಹೋಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದು, ನಾಗರಿಕ ಸೇವೆಗಳ ಕಾಯ್ದೆಯಡಿ ಪೈಲಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ವಿವರಿಸಿದೆ.
ನೂತನವಾಗಿ ಖರೀದಿಸಿದ ವಿಮಾನ ಸ್ಕಿಡ್ ಆಗಿ ಅಪಘಾತಕ್ಕೀಡಾದ ಪರಿಣಾಮ ಕಾಕ್ ಪಿಟ್ ಮುಂಭಾಗ ಹಾನಿಯಾಗಿತ್ತು. ಅಷ್ಟೇ ಅಲ್ಲ ಪ್ರೊಪೆಲ್ಲರ್ ಬ್ಲೇಡ್ಸ್ ಗಳು, ಚಕ್ರ ಜಖಂಗೊಂಡಿತ್ತು. ಘಟನೆಯಲ್ಲಿ ಪೈಲಟ್ ಅಖ್ತರ್, ಸಹ ಪೈಲಟ್ ಶಿವ್ ಜೈಸ್ವಾಲ್ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದರು.