Advertisement

ಸಂಸದ ಗೋಪಾಲ ಸಿ. ಶೆಟ್ಟಿ ವಿಜಯೋತ್ಸವ ;ಒಲಿಯಲಿದೆಯೇ ಸಚಿವ ಸ್ಥಾನ?

01:40 PM May 25, 2019 | Vishnu Das |

ಮುಂಬಯಿ: ಭಾರತೀಯ ಜನತಾ ಪಕ್ಷದಿಂದ ಮುಂಬಯಿ ಉತ್ತರ ಲೋಕಸಭಾ ಬೊರಿವಲಿ ಕ್ಷೇತ್ರದಿಂದ ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಕಣಕ್ಕಿಳಿದ ಬೃಹನ್ಮುಂಬಯಿಯ ಏಕೈಕ ತುಳು-ಕನ್ನಡಿಗ ಅಭ್ಯರ್ಥಿ ಗೋಪಾಲ್‌ ಸಿ. ಶೆಟ್ಟಿ ಈ ಬಾರಿ 7,05,555 ಮತಗಳನ್ನು ಪಡೆದು ಸುಮಾರು 4,64,599 ಮತಗಳ ಭಾರೀ ಅಂತರದಿಂದ ಅಭೂತಪೂರ್ವ ಜಯ ಗಳಿಸಿದ್ದಾರೆ.

Advertisement

ಎದುರಾಳಿ ಸ್ಪರ್ಧಿ, ಬಾಲಿವುಡ್‌ ನಟಿ, ಕಾಂಗ್ರೆಸ್‌ನ ಉರ್ಮಿಳಾ ಮಾತೋಂಡ್ಕರ್‌ ಅವರು 2,40,956 ಮತಗಳನ್ನು ಪಡೆದು ಸೋಲುಂಡಿದ್ದಾರೆ. 2014ರಲ್ಲಿ ಸುಮಾರು 6,64,004 ಮತಗಳನ್ನು ಪಡೆದಿದ್ದ ಗೋಪಾಲ್‌ ಶೆಟ್ಟಿ ಅವರು ಈ ಬಾರಿ ಹೆಚ್ಚುವರಿ 41,551 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ ರಾಷ್ಟ್ರದಲ್ಲೇ ಅತೀ ಹೆಚ್ಚು ಮತಗಳಿಸಿದ ಮೊದಲ 25 ಸಂಸದರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಒಟ್ಟು 9,70,763 ಮತ ಚಲಾವಣೆಗೊಂಡಿದ್ದು, ಅಂಚೆಮತಗಳು, ನೋಟಾ ಮತಗಳು ಅಥವಾ ಅಸಿಂಧು ಮತಗಳು ಚಲಾವಣೆ ಆಗದಿರುವುದು ಮತ್ತೂಂದು ವಿಶೇಷತೆಯಾಗಿದೆ.

ರಾತ್ರಿ ವಿಜಯೋತ್ಸವ
ಇಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಕೆಟ್ಟ ಪರಿಣಾಮ ಮತ್ತು ವಿವಿಪ್ಯಾಟ್‌ನ ಮತ ಎಣಿಕಾ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಮತದಾನದ ಅಂತಿಮ ಲೆಕ್ಕಾಚಾರ ಬಹಿರಂಗಪಡಿಸುವ ಆದೇಶದ ಮೇರೆಗೆ ಅಂತಿಮ ಸುತ್ತಿನ ಮತ ಎಣಿಕೆ ವಿಳಂಬವಾಗಿದ್ದು, ತಡ ರಾತ್ರಿ ವೇಳೆಗೆ ಪೂರ್ಣಪ್ರಮಾಣದ ಫಲಿತಾಂಶ ಪ್ರಕಟಗೊಂಡಿತ್ತು. ರಾತ್ರಿ ನಡೆದ ವಿಜಯೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಗೋಪಾಲ್‌ ಸಿ. ಶೆಟ್ಟಿ ಅವರನ್ನು ಅಭಿನಂದಿಸಿದರು.

ಮಲಾಡ್‌ ಪಶ್ಚಿಮದ ಚಿಂಚೋಲಿ ಬಂದರ್‌ನಿಂದ ಕಾಂದಿವಲಿ ಪಶ್ಚಿಮದ ಎಲ್‌ಟಿ ನಗರದಲ್ಲಿನ ಸಂಸದರ ಅಧಿಕೃತ ಕಚೇರಿಯವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಿತು. ಗೋಪಾಲ್‌ ಸಿ. ಶೆಟ್ಟಿ ತುಳು-ಕನ್ನಡಿಗರ ಅಭಿಮಾನಿ ಬಳಗದ ಮುಖ್ಯಸ್ಥ, ಮಹಾನಗರದಲ್ಲಿನ ಹೆಸರಾಂತ ಸಂಘಟಕ, ಸಂಸದರ ಆಪ್ತ ಹಾಗೂ ಕಾರ್ಯಕ್ರಮಗಳ ಸಂಯೋಜಕ ಎರ್ಮಾಳ್‌ ಹರೀಶ್‌ ಶೆಟ್ಟಿ, ಗೋಪಾಲ್‌ ಶೆಟ್ಟಿ ಅವರ ಮಾತೋಶ್ರೀ ಗುಲಾಬಿ ಚಿನ್ನಯ್ಯ ಶೆಟ್ಟಿ, ಪತ್ನಿ ಉಷಾ ಜಿ. ಶೆಟ್ಟಿ ಮತ್ತು ಪರಿವಾರದವರು ಗೋಪಾಲ್‌ ಶೆಟ್ಟಿ ಅವರಿಗೆ ಸಾಥ್‌ ನೀಡಿದರು.

ವಿಜಯೋತ್ಸವ ರ್ಯಾಲಿಯಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರು, ಬಿಜೆಪಿ, ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಕಾರ್ಯಕರ್ತರು, ಸೇರಿದಂತೆ ಅಪಾರ ಸಂಖ್ಯೆಯ ತುಳು-ಕನ್ನಡಿಗ ಗೋಪಾಲ್‌ ಶೆಟ್ಟಿ ಅಭಿಮಾನಿಗಳು ಭಾಗವಹಿಸಿ ದ್ವಿತೀಯ ಬಾರಿಗೆ ಸಂಸದರಾಗಿ ಆಯ್ಕೆಯಾದ ಗೋಪಾಲ್‌ ಶೆಟ್ಟಿ ಅವರನ್ನು ಮತ್ತಷ್ಟು ಉತ್ತೇಜಿಸಿ ಮೋದಿ ಸರಕಾರದ ಯಶಸ್ಸಿಗೆ ಘೋಷಣೆ ಕೂಗುತ್ತಾ ಶುಭಹಾರೈಸಿದರು.

Advertisement

ಒಲಿಯಲಿದೆಯೇ ಸಚಿವ ಸ್ಥಾನ..?
ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿಯಿಂದ ದ್ವಿತೀಯ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಗೋಪಾಲ್‌ ಶೆಟ್ಟಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಒಲಿದು ಬರಲಿದೆ ಎಂಬ ಕೂಗು ಕೇಳಿಬರುತ್ತಿದೆ. ಎರಡನೇ ಅವಧಿಯಲ್ಲೂ ಅತ್ಯಧಿಕ ಮತಗಳಿಂದ ಜಯಭೇರಿಗಳಿಸಿರುವ ಗೋಪಾಲ್‌ ಶೆಟ್ಟಿ ಅವರು ತುಳು-ಕನ್ನಡಿಗರು ಮಾತ್ರವಲ್ಲದೆ, ಮರಾಠಿ, ಗುಜರಾತಿ ಇನ್ನಿತರ ಭಾಷಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿ ಎಲ್ಲರ ಕಷ್ಟ-ಕಾರ್ಪಣ್ಯಗಳಿಗೆ ಸಹಕರಿಸುತ್ತಿದ್ದಾರೆ. ಅವರ ದಕ್ಷ ಸೇವೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ಒಲಿದು ಬರಲಿ ಎಂಬ ಆಶಯವನ್ನು ಮತದಾರರು ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ವರದಾನ
ಜನ್ಮಭೂಮಿ ಕರ್ನಾಟಕದ ಉಡುಪಿ ಶ್ರೀ ಕೃಷ್ಣನ ನೆಲೆವೀಡಾದರೂ ಮುಂಬಯಿ ನಿವಾಸಿಯಾಗಿ ಸಂಸದರಾಗಿ ಆರಿಸಿ ಬಂದಿರುವ ಗೋಪಾಲ್‌ ಶೆಟ್ಟಿ ಅವರು ಲೋಕ ಸಭೆಯಲ್ಲಿ ಮುಂಬಯಿ ತುಳು-ಕನ್ನಡಿಗರ ಧ್ವನಿಯಾಗುವ ಆಶಯ ಮುಂಬಯಿ ಕನ್ನಡಿಗರದ್ದಾಗಿದೆ. ಕನ್ನಡಿಗರ ಜನಪ್ರತಿನಿಧಿಯಾಗಿ ಪ್ರತಿನಿಧಿಸಲು ಮುಂಬಯಿ ನೆಲೆಯ ಸಂಸದನೋರ್ವನ ಅಗತ್ಯವಿದ್ದು, ದಿಲ್ಲಿಯಲ್ಲಿ ಗೋಪಾಲ್‌ ಶೆಟ್ಟಿ ಅವರ ಪ್ರತಿನಿಧಿತ್ವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ವರದಾನವಾಗಲಿದೆ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next