ದಾವಣಗೆರೆ: ರೈಲ್ವೆ ನಿಲ್ದಾಣದ ನೂತನ ಕಟ್ಟಡ ಮತ್ತುಡಿಸಿಎಂ ರೈಲ್ವೆ ಗೇಟ್ ಉದ್ಘಾಟನಾ ಕಾರ್ಯಕ್ರಮವನ್ನು ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ನೆರವೇರಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಶುಕ್ರವಾರ ನೂತನ ರೈಲ್ವೆ ನಿಲ್ದಾಣ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೊದಲ ಹಂತದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ನೂತನ ಕಟ್ಟಡದ ಕಾಮಗಾರಿ ಶೇ. 80ಕ್ಕಿಂತಲೂ ಹೆಚ್ಚು ಮುಗಿದಿದೆ. ಮಾ. 27ಕ್ಕೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಗಾಗಿ ಮಾ. 28, ಏಪ್ರಿಲ್ 3 ಇಲ್ಲವೇ 4 ರಂದು ಉದ್ಘಾಟನೆ ಮಾಡಲಾಗುವುದು ಎಂದರು.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಎಸ್ಕಲೇಟರ್ ಅಳವಡಿಸಲಾಗುತ್ತಿದೆ. ಮೈಸೂರು ವಿಭಾಗದಲ್ಲಿ ಎಸ್ಕಲೇಟರ್ ಹೊಂದಿರುವ ನಾಲ್ಕನೇ ರೈಲ್ವೆ ನಿಲ್ದಾಣ ದಾವಣಗೆರೆಯಾಗಿದೆ. ಹಿಂದಿನ ಕಟ್ಟಡಕ್ಕೆ ಹೋಲಿಕೆ ಮಾಡಿದರೆ ಈಗಿನ ಕಟ್ಟಡ ಸುಸಜ್ಜಿತ, ವಿಶಾಲ ಮತ್ತು ಸುಂದರವಾಗಿದೆ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ಉಪವಿಭಾಗಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಿ ಆ ಜಾಗವನ್ನು ರೈಲ್ವೆ ಇಲಾಖೆ ಸುಪರ್ದಿಗೆ ನೀಡಲಾಗುವುದು. ಎರಡನೇ ಮಹಡಿ ನಿರ್ಮಾಣ ಮಾಡಿ ಪ್ರಯಾಣಿಕರ ತಂಗುದಾಣ ಒಳಗೊಂಡಂತೆ ಆಧುನಿಕ ಸೌಲಭ್ಯ ಒದಗಿಸುಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಪವಿಭಾಗಾಧಿಕಾರಿ ಕಚೇರಿ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು 5 ಕೋಟಿ ರೂ. ಅನುದಾನ ನೀಡಿದ್ದಾರೆ. ಎರಡನೇ ರೈಲ್ವೆ ಗೇಟ್ ದಾರಿಯಲ್ಲಿ ಕೆಲವು ಅಂಗಡಿ ತೆರವು ಮಾಡಿಕೊಡಬೇಕು ಎಂದು ಇಲಾಖೆಯವರು ಕೇಳಿದ್ದಾರೆ. ಆವುಗಳನ್ನು ತೆರವು ಮಾಡಿಕೊಡಲಾಗುವುದು ಎಂದರು.
ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಅಲ್ಲಿರುವ ಜಾಗದ ಮಾಲೀಕರು ಬೇರೆಡೆ ಜಾಗ ಇಲ್ಲವೇ ಸೂಕ್ತ ಪರಿಹಾರ ಕೇಳಿದ್ದಾರೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕರೂರು ಕ್ರಾಸ್ ಬಳಿ ರೈಲ್ವೆ ಗೇಟ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಜನರ ಬೇಡಿಕೆಗೆ ತಕ್ಕಂತೆ ರೈಲ್ವೆ ಇಲಾಖೆಯಿಂದ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಮೇಯರ್ ಬಿ.ಜಿ. ಅಜಯ್‌ಕುಮಾರ್, ಸದಸ್ಯ ಆರ್.ಎಲ್. ಶಿವಪ್ರಕಾಶ, ದೂಡಾ ಆಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಡಿಆರ್‌ಎಂ ರಾಹುಲ್ ಆಗರವಾಲ್ ಇತರರು ಇದ್ದರು.