ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕುಂದುವಾಡದಲ್ಲಿ ನಿರ್ಮಾಣ ಮಾಡುತ್ತಿರುವ ಲೇಔಟ್‌ನಲ್ಲಿ ಮಾಜಿ ಸೈನಿಕರ ಸಮುದಾಯ ಭವನ, ವೈದ್ಯಕೀಯ ತಪಾಸಣಾ ಕೇಂದ್ರಕ್ಕೆ ನಿವೇಶನ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದ್ದಾರೆ.
ಭಾನುವಾರ ನಿಜಲಿಂಗಪ್ಪ ಲೇಔಟ್‌ನ ಸರ್ಕಾರಿ ನೌಕರರ ಎದುರು ಅಮರ್ ಜವಾನ್ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಸೈನಿಕರ ಬೇಡಿಕೆಯಂತೆ ದೂಡಾದಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಅಮರ್ ಜವಾನ್ ಸ್ಮಾರಕ ಉದ್ಯಾನವನದಲ್ಲಿ ವಾಕಿಂಗ್ ಪಾಥ್ ಹಾಗೂ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ರೈತರು ಮತ್ತು ದೇಶದ ರಕ್ಷಣೆ ಮಾಡುವಂತಹ ಸೈನಿಕರು ಬಹಳ ಮುಖ್ಯ. ಸೈನಿಕರು ಇದ್ದರೆ ಮಾತ್ರ ಎಲ್ಲರು ನೆಮ್ಮದಿಯಿಂದ ಇರಲು ಸಾಧ್ಯ. ಗಡಿಯಲ್ಲಿನ ದಾಳಿ, ದೇಶದ ಒಳಗೆ ನಡೆಯುತ್ತಿರುವ ಭಯೋತ್ಪಾದಕ ದಾಳಿಯಲ್ಲಿ ಎಷ್ಟೋ ಸೈನಿಕರು ಹುತಾತ್ಮರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರ ಜೊತೆ ಹಬ್ಬ ಆಚರಿಸುವ ಮೂಲಕ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾವು ಸಹ ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸೈನಿಕರು ನಮ್ಮ ದೇಶದ ಗಡಿ ಕಾಯುವ ಕೆಲಸ ಮಾಡುತ್ತಿರುವ ಕಾರಣಕ್ಕೆ ನಾವೆಲ್ಲರೂ ಇಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ. ಮಾಜಿ ಸೈನಿಕರು ಎಲ್ಲರ ಸಲಹೆ ಪಡೆದು ಉತ್ತಮ ಉದ್ಯಾನ ನಿರ್ಮಾಣ ಮಾಡಬೇಕು ಎಂದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ದಾವಣಗೆರೆಯಲ್ಲಿ 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹುತಾತ್ಮರಾದ ಆರು ಜನರ ಪುತ್ಥಳಿಗಳನ್ನು ಅಮರ್ ಜವಾನ್ ಉದ್ಯಾನವನದಲ್ಲಿ ನಿರ್ಮಿಸಿದರೆ ಅರ್ಥಪೂರ್ಣವಾಗುತ್ತದೆ ಎಂದರು. ಮಾಜಿ ಸೈನಿಕರ ಸಂಘದ ನಿರ್ದೇಶಕ ಪ್ರಮೋದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಪ್ರಮುಖ ನಾಲ್ಕು ಬೇಡಿಕೆಗಳಲ್ಲಿ ಮಾಜಿ ಸೈನಿಕರಿಗೆ ಕಚೇರಿ ಹಾಗೂ ಸ್ಮಾರಕ ಉದ್ಯಾನದ ಭರವಸೆಗಳು ಈಡೇರಿವೆ. ತರಬೇತಿ ಶಾಲೆ, ವೈದ್ಯಕೀಯ ತಪಾಸಣಾ ಕೇಂದ್ರದ ಬೇಡಿಕೆ ಈಡೇರಿಸಬೇಕು ಎಂದರು.
ಪ್ರಾಧಿಕಾರದ ಸದಸ್ಯರಾದ ದೇವಿರಮ್ಮ, ಸೌಭಾಗ್ಯಮ್ಮ, ಜಯರುದ್ರೇಶ್, ನಗರಪಾಲಿಕೆ ಸದಸ್ಯೆ ಎಚ್.ಸಿ. ಜಯಮ್ಮ, ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ಇತರರು ಇದ್ದರು.