Advertisement

ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿ ಇಲ್ಲ

03:25 PM Sep 11, 2022 | Team Udayavani |

ರಾಮನಗರ: ರಾಜ್ಯದೆಲ್ಲೆಡೆ ಪ್ರವಾಹ ಉಂಟಾಗಿ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ, ಕೆಲವರು ನಿರಾಶ್ರಿತರಾಗಿ ಮನೆ, ಜಮೀನು ಕಳೆದುಕೊಂಡಿದ್ದಾರೆ. ಮಳೆಯ ಪ್ರವಾಹಕ್ಕೆ ಆಸ್ತಿಪಾಸ್ತಿ ಮುಳುಗಿ ಹಲವೆಡೆ ಪ್ರಾಣ ಹಾನಿ ಸಂಭವಿಸಿದ್ದು, ಜನತೆ ನೆರೆಯಿಂದ ನರಳುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದವರು ಜನೋತ್ಸವ ಹೆಸರಲ್ಲೇ ವೇದಿಕೆ ಮೇಲೆ ನೃತ್ಯ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದಾರೆ ಎಂದು ಬೆಂಗಳೂರು ಲೋಕಸಭಾ ಸದಸ್ಯ ಡಿ.ಕೆ. ಸುರೇಶ್‌ ಬಿಜೆಪಿ ವಿರುದ್ಧ ಹರಿಹಾಯ್ದರು.

Advertisement

ನಗರದ ಮಳೆಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಿಜೆಪಿ ಹಮ್ಮಿ ಕೊಂಡಿರುವ ಜನಸ್ಪಂದನ ಕಾರ್ಯಕ್ರಮ ಜನೋತ್ಸವ ಕಾರ್ಯಕ್ರಮವಂತೆ. ಆದರೆ, ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಹಳೆ ಮೈಸೂರು ಭಾಗದ ಜನತೆ ಜೀವ ಉಳಿದಿದೆ. ಆದರೆ, ರಣಮಳೆಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕು ನೆರೆಯಲ್ಲಿ ಕೊಚ್ಚಿ ಕೊಂಡು ಹೋಗಿದ್ದು, ಕಟ್ಟಿಕೊಳ್ಳಲು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಸಾವು-ನೋವಲ್ಲಿ ಜನತೆ: ಒಂದು ಕಡೆ ಜನ ಸಾವು ನೋವಿಂದ ನರಳುತ್ತಿದ್ದಾರೆ. ಮತ್ತೂಂದು ಕಡೆ ಬಿಜೆಪಿ ಪಕ್ಷದ ನಾಯಕರು ವೇದಿಕೆ ಮೇಲೆ ನೃತ್ಯ ಮಾಡಿ ಸಂಭ್ರಮಿಸುತ್ತಿದ್ದಾರೆ. ಜನ ನೋವಿನಲ್ಲಿರುವಾಗ ನೃತ್ಯಮಾಡಿ ಸಂತೋಷ ಪಡೋದು ವಿಕೃತಿಯಲ್ಲದೆ ಮತ್ತೇನು ಎಂದ ಅವರು, ಇದನ್ನು ರಾಜ್ಯದ ಜನ ಕೂಡಾ ಗಮನಿಸಬೇಕು. ವಿಕೃತಿ ಮೆರೆದಿರುವ ಬಿಜೆಪಿ ವರ್ತನೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥರು ವಿಶ್ಲೇಷಣೆ ಮಾಡಬೇಕು ಎಂದರು.

ಸಿಂಹಗೆ ಡಿಕೆಸು ಸವಾಲ್‌: ಪ್ರತಾಪ್‌ ಸಿಂಹ ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಇತ್ತೀಚಿಗೆ ಸುರಿದ ಬಾರಿ ಮಳೆಗೆ ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಅವಾಂತರಕ್ಕೆ ಕೆರೆ ಹಾಗೂ ರಾಜಕಾಲುವೆ ಒತ್ತುವರಿಯಿಂದ ಪ್ರವಾಹ ಉಂಟಾಗಿದೆ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಡಿ.ಕೆ.ಸುರೇಶ್‌, ಮೈಸೂರು ಸಂಸದರು ದಯವಿಟ್ಟು ಮೈಸೂರು ಕೊಡಗಿನಲ್ಲಿ ಏನು ಮಾಡಬೇಕೋ ಅದನ್ನ ಮಾಡಿ, ಅನಾವಶ್ಯಕವಾಗಿ ಎಲ್ಲಾ ನಂದೆ ಎನ್ನುವ ಹಾಗೆ ನಮ್ಮ ಕೇತ್ರಗಳಲ್ಲಿ ಮೂಗು ತೂರಿಸಲು ಬರಬೇಡಿ. ನಮ್ಮ ಕ್ಷೇತ್ರಗಳಲ್ಲಿ ನಿಮ್ಮದೇನಾದ್ರೂ ಇದ್ರೆ ಬನ್ನಿ, ನಾನು ಬರುತ್ತೇನೆ. ಎಲ್ಲಾ ವಿಚಾರಗಳನ್ನು ಜನರ ಮುಂದೆ ಇಡೋಣ. ಜನ ಕೇಳಿದ್ದಕ್ಕೆ ನಾವು, ನೀವು ಉತ್ತರ ಹೇಳ್ಳೋಣ ಎಂದು ಸವಾಲು ಹಾಕಿದರು.

ಕಾಮಗಾರಿ ಸರಿಪಡಿಸಿ: ದಶಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಾಗಾರಿ ಬಗ್ಗೆ ಟೀಕೆ ಮಾಡುವ ಡಿಕೆ ಸಹೋದರರು ಮೊದಲು ಕನಕಪುರ ರಸ್ತೆ ಸರಿ ಮಾಡಿಸಿ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ನಾನು ನಿಮ್ಮಿಂದ ಪಾಠ ಕಲಿ ಯುವ ಅವಶ್ಯಕತೆ ಇಲ್ಲ. ನಿಮ್ಮ ನಾಯಕರ ಸಲಹೆಗಳ ಅವಶ್ಯಕತೆಯೂ ಇಲ್ಲ. ನನಗೆ ನನ್ನದೇ ಜನರ ಸಲಹೆ, ಮಾರ್ಗದರ್ಶನ ಇದೆ. ನಿಮ್ಮ ಅಡ್ವೈಸ್‌ ನನಗೆ ಬೇಕಾಗಿಲ್ಲ. ಮೊದಲು ದಶಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಿ ಎಂದು ತಿರುಗೇಟು ನೀಡಿದರು.

Advertisement

ನೆರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರಣ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಎಲಿವೇಷನ್‌ ರೋಡ್‌ ಹಾಗೂ ಅದರ ಕೆಳಭಾಗದಲ್ಲೂ ನೀರು ನಿಂತಿದೆ. ಕಾಲುವೆ ಸರಿಯಾಗಿ ಮಾಡದೇ ಅವರಿಗೆ ಬೇಕಾದ ಜಾಗದಲ್ಲಿ ಅಂಡರ್‌ ಪಾಸ್‌ ಮಾಡಿದ್ದಾರೆ. ಗ್ರಾಮಗಳ ಚರಂಡಿ ಹೆದ್ದಾರಿ ಗುತ್ತಿಗೆದಾರರು ಮುಚ್ಚಿದ್ದಾರೆ. ಇದರಿಂದ ಸಾಕಷ್ಟು ನಷ್ಟ ಆಗಿದೆ. ಅವ ರಿಗೆ ಸೂಕ್ತ ಪರಿಹಾರವನ್ನು ಗುತ್ತಿಗೆದಾರರು ಅಥವಾ ಕೇಂದ್ರ ಸರ್ಕಾರ ನೀಡಬೇಕು. ಅಲ್ಲದೇ ಹೆದ್ದಾರಿಯ ತಿರುವುಗಳಲ್ಲಿ ಸರಿಯಾದ ಲೆವೆಲ್‌ ನೀಡಿಲ್ಲ. ಹಾಗಾಗಿ, ಲಾರಿ-ಬಸ್‌ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಮಗುಚಿ ಬೀಳುತ್ತಿವೆ. ಎಲ್ಲೆಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಅದನ್ನು ಆದಷ್ಟು ಬೇಗ ಸರಿ ಮಾಡಬೇಕು ಎಂದು ಒತ್ತಾಯಿಸಿದರು.

ಯೋಗ್ಯತೆ ಪ್ರದರ್ಶನ: ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ನೃತ್ಯ ಮಾಡುವ ಮೂಲಕ ಅವರ ಸರ್ಕಾರದ ಯೋಗ್ಯತೆ ತೋರಿಸಿದ್ದಾರೆ. ಜನಕ್ಕೆ ಸ್ಪಂದಿಸದೇ ವಿಕೃತಿ ಮೆರಯುತ್ತಿರುವ ಇವರಿಗೆ ಅಧಿಕಾರ ಯಾಕೆ ಬೇಕು. ಮೂದಲು ರಾಜೀನಾಮೆ ಕೊಟ್ಟು ತೊಲಗಲಿ. ಇದಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಉತ್ತರ ಕೊಡಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಆಗ್ರಹಿಸಿದರು.

ನಗರದಲ್ಲಿ ಎರಡು ಸಾವಿರ ಮನೆ ನೆರೆ ಯಿಂದ ನಲುಗಿ ಹೋಗಿವೆ. ಹಲವಾರು ಬ್ರಿಡ್ಜ್ಗಳು ಬಿದ್ದು ಹೋಗಿವೆ. ಜೊತೆಗೆ ಬೆಳೆಯೊಂದಿಗೆ ಭೂಮಿಯೇ ಕೊಚ್ಚಿ ಹೋಗಿದ್ದು, ರೈತರು ಸಾಮಾನ್ಯರ ಬದುಕು ಹೈರಾಣಾಗಿ ಜಿಲ್ಲೆಯಲ್ಲಿ 300 ಕೋಟಿಗೂ ಹೆಚ್ಚು ಅಂದಾಜು ನಷ್ಟವಾಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು.ಡಿ.ಕೆ.ಸುರೇಶ್‌, ಸಂಸದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next