Advertisement
ಕುಮಾರಸ್ವಾಮಿಗೂ ಮುನ್ನ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದ ಶಾಸಕರಾಗಿದ್ದರು. ಆದರೆ, ಕಾಂಗ್ರೆಸ್ ನಿಂದ ದೂರವೇ ಉಳಿದಿರುವ ಈ ಕ್ಷೇತ್ರದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಹೊಸಬರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷದ ನಾಯಕರು ಚಿಂತನೆ ನಡೆಸಿದ್ದರು. ಚುನಾವಣೆಗೆ ಒಂದು ವರ್ಷ ಇರುವಾಗಲೇ, ಕೈ ಪಡೆ ಪರೋಕ್ಷವಾಗಿ ಉದ್ಯಮಿ ಪ್ರಸನ್ನ ಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಚುನಾವಣೆ ತಯಾರಿ ನಡೆಸಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಘಟಕದಲ್ಲಿ ಹಲವಾರು ಪರ-ವಿರೋಧ ಚರ್ಚೆಗಳ ಜೊತೆಗೆ, ಒಟ್ಟು ಎಂಟು ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿರುವುದು ಕೆಪಿಸಿಸಿ ಅಧಿನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಮೇಲೆ ಹಿಡಿತವಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದಿದ್ದವು.
Related Articles
Advertisement
ಡಿ.ಕೆ.ಸುರೇಶ್ ಏಕೆ?: ಕಾಂಗ್ರೆಸ್‌ನಿಂದ ಚನ್ನಪಟ್ಟಣ ದಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಇಲ್ಲ. 2018ರಲ್ಲಿ ಮಾಗಡಿಯಿಂದ ಎಚ್. ಎಂ. ರೇವಣ್ಣ ಅವರನ್ನು ಚನ್ನಪಟ್ಟಣಕ್ಕೆ ಕರೆಸಲಾಗಿತ್ತು. ಇಲ್ಲಿ ಎಚ್ ಡಿ. ಕುಮಾರಸ್ವಾಮಿ ಹಾಗೂ ಸಿ. ಪಿ. ಯೋಗೇಶ್ವರ್‌ರನ್ನು ಮಣಿಸಲು ಹಳೆ ಮುಖಗಳು ಮನಸ್ಸು ಮಾಡುವುದೇ ಸಂದೇಹ. ಗೆಲ್ಲುವ ಕ್ಷೇತ್ರಕ್ಕಾಗಿ ಕೈ ನಾಯಕರು ಹುಡುಕಾಟ ನಡೆಸುವುದು ಸರ್ವೆ ಸಾಮಾನ್ಯ. ಹೀಗಾಗಿ, ಡಿ.ಕೆ.ಸುರೇಶ್ ಅವರಿಗೆ ಅವಕಾಶ ನೀಡಿ ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚನ್ನಪಟ್ಟಣ ಕ್ಷೇತ್ರ ಒಕ್ಕಲಿಗರ ಭದ್ರಕೋಟೆ. ಇದರೊಂದಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಬಲವು ಹೆಚ್ಚಿರುವ ಕ್ಷೇತ್ರ. ಅವರೇ ಶಾಸಕರಾಗಿ ರುವ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಸಹ ಪೈಪೋಟಿ ನೀಡುತ್ತಿದ್ದಾರೆ. ಕುಮಾರಸ್ವಾಮಿಗೂ ಮುನ್ನ ಸಿಪಿವೈ ಶಾಸಕರಾಗಿದ್ದರು. ಆದರೆ, ಕಾಂಗ್ರೆಸ್ ನಿಂದ ದೂರವೇ ಉಳಿದಿರುವ ಈ ಕ್ಷೇತ್ರದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಡಿ.ಕೆ.ಸುರೇಶ್ ಸ್ಪರ್ಧೆ ಅನಿವಾರ್ಯ ಎಂಬ ಮಾತುಗಳು ಚರ್ಚೆಯಾಗುತ್ತಿವೆ.
ದಳಪತಿಗೆ ದಿಗಿಲು ಮೂಡಿಸುವ ಸುರೇಶ್ ಸ್ಪರ್ಧೆ: ಚನ್ನಪಟ್ಟಣ ಕ್ಷೇತ್ರದ ಅಖಾಡ ಬಿರುಸುಗೊಳ್ಳುತ್ತಿದೆ. ದಳಪತಿಯ ಭದ್ರ ಕೋಟೆ ಭೇದಿಸಲು ಕೈ ನಾಯಕರು ತಯಾರಿ ನಡೆಸಿದ್ದು, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿ.ಕೆ.ಸುರೇಶ್ ಅವರೇ ಸೂಕ್ತ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲೂ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ಸುರೇಶ್ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಕಾರ್ಯಕರ್ತರೇ ವ್ಯಕ್ತಪಡಿಸುತ್ತಿದ್ದಾರೆ.
ಕುತೂಹಲ ಮೂಡಿಸಿದ್ದ ಸಂಸದ ಸುರೇಶ್ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಮಾತುಕತೆ : ತಿಂಗಳ ಹಿಂದೆ ರಾಮನಗರದಲ್ಲಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ಬಂದಿದ್ದ ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನಡುವಿನ ಆಪ್ತ ಮಾತುಕತೆ ಕುತೂಹಲ ಮೂಡಿಸಿತ್ತು. ಇಬ್ಬರೂ ಪಕ್ಕದಲ್ಲೇ ನಿಂತು ನಗುತ್ತಲೇ ಹರಟೆ ಹೊಡೆದರು. “ಕಳೆದ ಬಾರಿ ಬ್ರದರ್? ಸಿಸ್ಟರ್ ಎಂದು ಹೋಗಿದ್ದೀರಿ? ಏನಾಯಿತು ದೋಸ್ತಿ?’ ಎಂದು ಸಿಪಿವೈ ನಗುತ್ತಲೇ ಕಾಲೆಳೆದರು. ಈ ಸಂದರ್ಭ ಮಾತನಾಡಿದ ಇಬ್ಬರೂ “ನಾವಿಬ್ಬರೂ ಮೂವತ್ತು ವರ್ಷದ ಸ್ನೇಹಿತರು. ರಾಜಕಾರಣ ಬೇರೆ. ಇಂದಿನದ್ದು ಬರೀ ವಿಶ್ವಾಸದ ಮಾತುಕತೆ ಅಷ್ಟೇ’ ಎಂದು ಸಮಜಾಯಿಷಿಯನ್ನೂ ನೀಡಿದರು. ಚನ್ನಪಟ್ಟಣದಲ್ಲಿ ಈ ಬಾರಿ ಬಿಜೆಪಿಯಿಂದ ಯೋಗೇಶ್ವರ್ ಹಾಗೂ ಜೆಡಿಎಸ್‌ನಿಂದ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್ ಮಾತ್ರ ಇನ್ನೂ ಅಭ್ಯರ್ಥಿ ಹಾಕಿಲ್ಲ. ಈ ನಡುವೆಯೇ ಈ ಇಬ್ಬರ ಸಾಮೀಪ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಚುನಾವಣೆಯಲ್ಲಿ ಡಿಕೆಸು- ಶರತ್‌ಚಂದ್ರ ಮುಖಾಮುಖಿ! : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಖಾಸ ಭಾವ ಶರತ್‌ಚಂದ್ರ ಅವರು ಈಗಾಗಲೇ ಕಾಂಗ್ರೆಸ್ ತೊರೆದು ಎಎಪಿ ಪಕ್ಷವನ್ನು ಸೇರಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆಪ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂಬ ಮಾತು ಕೂಡ ಚಾಲ್ತಿಯಲ್ಲಿ ಇದೆ. ಈ ನಿಟ್ಟಿನಲ್ಲಿ ಎಚ್ಡಿಕೆ- ಸಿಪಿವೈ ನಡುವಿನ ಜಿದ್ದಾಜಿದ್ದಿನ ಹಣಾಹಣಿ ನಡುವೆ ಸಂಬಂಧಿಗಳಾದ ಡಿ.ಕೆ. ಸುರೇಶ್- ಶರತ್ ಚಂದ್ರ ಅವರ ಮುಖಾಮುಖೀಯೂ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಹೈವೋಲ್ಟೆàಜ್ ಕ್ಷೇತ್ರವಾಗಿ ಚನ್ನಪಟ್ಟಣ ಗಮನ ಸೆಳೆಯಲಿದೆ ಎಂಬ ವಿಶ್ಲೇಷಣೆ ಕೂಡ ನಡೆದಿದೆ.
ಚಂದ್ರಸಾಗರ್ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ! : ವಿಶೇಷವೆಂದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಉಮೇದುವಾರರಾಗಲು ಹಲ ವಾರು ಮುಖಂಡರು, ಯುವ ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಕಾಂಗ್ರೆಸ್ ಯುವ ಮುಖಂಡ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಚಂದ್ರು ಅವರ ಪುತ್ರ ಸಿ.ವಿ.ಚಂದ್ರಸಾಗರ್ ಹೈಕಮಾಂಡ್ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ದ್ದಲ್ಲಿ, ಎಲ್ಲಾ ಹಿರಿಯ, ಕಿರಿಯ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಅಖಂಡ ಬೆಂಬಲದೊಂದಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ತೋರುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾತು ಕೂಡ ಬೊಂಬೆನ ಗರಿಯಲ್ಲಿ ಕೇಳಿಬರುತ್ತಿದೆ. ಅಂತಿಮವಾಗಿ ಕಾಂಗ್ರೆಸ್ ಪಕ್ಷ ಯಾರ ಸ್ಪರ್ಧೆಗೆ ಹಸಿರು ನಿಶಾನೆ ತೋರಲಿದೆ ಎಂದು ಕಾದು ನೋಡಬೇಕಾಗಿದೆ.
– ಎಂ.ಶಿವಮಾದು