ಭೋಪಾಲ್ : ಗಂಡ ಅಥವಾ ಹೆಂಡತಿ ತಮ್ಮ ನಡುವೆ ಸಾಮರಸ್ಯ ಇಲ್ಲದೆ, ತುಂಬಾ ಜಗಳಗಳು ಆದಾಗ ವಿವಾಹ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಆದ್ರೆ ಮನೆಯಲ್ಲಿ ಜಿರಳೆ ಕಾಟ ಎಂಬ ಕಾರಣಕ್ಕೆ ಡಿಪೋರ್ಸ್ ಕೇಳಿರುವ ವ್ಯಕ್ತಿಯನ್ನು ನೀವೆಲ್ಲಾದರು ನೋಡಿದ್ದೀರಾ?. ಆದ್ರೆ ಅಂತಹ ಪ್ರಕರಣ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಹೌದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ದಂಪತಿಗಳು ಮದುವೆಯಾದ ಮೂರು ವರ್ಷಕ್ಕೆ ಬರೋಬ್ಬರಿ 18 ಬಾರಿ ಮನೆಗಳನ್ನು ಬದಲಾಯಿಸಿದ್ದಾರೆ. ಯಾಕಂದ್ರೆ ಹೆಂಡತಿಗೆ ಜಿರಳೆಗಳು ಅಂದ್ರೆ ಇನ್ನಿಲ್ಲದ ಭಯ. ಈ ಕಾರಣದಿಂದ ಒಂದಾದ ಮೇಲೆ ಒಂದರಂತೆ ಮೂರೇ ವರ್ಷಕ್ಕೆ 18 ಬಾರಿ ಮನೆಯನ್ನು ಬದಲಾಯಿಸಿದ್ದಾರೆ.
ಆ ಪತಿಗೆ ತನ್ನ ಹೆಂಡತಿಗೆ ಜಿರಳೆ ಕಂಡರೆ ಇಷ್ಟೊಂದು ಭಯ ಇದೆ ಎಂದು ಮದುವೆಗೂ ಮುಂಚೆ ಗೊತ್ತಿರಲಿಲ್ಲವಂತೆ. ಮದುವೆಯಾದ ನಂತರ ಅಡುಗೆ ಮಾಡಲು ಅಡುಗೆ ಕೋಣೆಗೆ ಹೋದ ಮೇಲೆ ಅಲ್ಲಿ ಇದ್ದ ಜಿರಳೆಗಳನ್ನು ಕಂಡು ಜೋರಾಗಿ ಕಿರುಚುತ್ತ ಹೊರಗಡೆ ಓಡಿ ಬಂದ ನಂತರ ಈ ವಿಚಾರ ತಿಳಿದಿದೆ.
ಇದಾದ ಮೇಲೆ ನಾನು ಜಿರಳೆ ಇರುವ ಅಡುಗೆ ಮನೆಗೆ ಹೋಗುವುದಿಲ್ಲ ಎಂದು ಪತ್ನಿಯು ಹಠ ಹಿಡಿದಿದ್ದಾಳೆ. ಇದನ್ನು ಕಂಡ ಪತಿಯು ತನ್ನ ಮನೆಯನ್ನೇ ಬದಲಾಯಿಸಿದ್ದಾನೆ. 2017ರಲ್ಲಿ ಈ ದಂಪತಿ ಮದುವೆಯಾಗಿದ್ದು, ಮೊದಲ ಬಾರಿಗೆ 2018ರಲ್ಲಿ ತಮ್ಮ ಮನೆಯನ್ನು ಬದಲಾಯಿಸಿದ್ದಾರೆ.
ಮನೆ ಬದಲಾಯಿಸಿ ಬದಲಾಯಿಸಿ ಬೇಸರಗೊಂಡ ಪತಿರಾಯ ತನ್ನ ಮಡದಿಗೆ ವಿಚ್ಛೇದನ ಕೊಡಲು ನಿರ್ಧರಿಸಿದ್ದಾನಂತೆ. ಇದಕ್ಕೂ ಮೊದಲು ತನ್ನ ಹೆಂಡತಿಯನ್ನು ಅನೇಕ ಬಾರಿ ವೈದ್ಯರ ಬಳಿ ಕರೆದು ಕೊಂಡು ಹೋಗಿ ಜಿರಳೆ ಭಯಕ್ಕೆ ಚಿಕಿತ್ಸೆಯನ್ನೂ ಕೊಡಿಸಿದ್ದಾನಂತೆ. ಆದ್ರೆ ಏನು ಮಾಡಿದರೂ ಆ ಭಯ ಕಡಿಮೆಯಾಗಿಲ್ಲದ ಕಾರಣ ಬೇಸರಗೊಂಡು ಡಿವೋರ್ಸ್ ನೀಡಲು ಮುಂದಾಗಿದ್ದಾನೆ.
ಜಿರಳೆಗಳಿಂದ ಆಗುವ ಭಯವನ್ನು ಕಟ್ಸರಿಡಾಫೋಬಿಯಾ ಎಂದು ಕರೆಯಲಾಗುತ್ತದೆ. ಅದರಿಂದ ಬಳಲುತ್ತಿರುವ ವ್ಯಕ್ತಿಗಳು ಕಾಲ ಕ್ರಮೇಣ ದುರ್ಬಲರಾಗಬಹುದು. ಕಟ್ಸರಿಡಾಫೋಬಿಯಾದಂತಹ ಅರಿವಿನ ವರ್ತನೆಯ ಚಿಕಿತ್ಸೆಯನ್ನು ಬಳಸಿಕೊಂಡು ಕ್ರಮೇಣ ಡಿಸೆಂಟೈಸೇಶನ್ ವಿಧಾನದ ಮೂಲಕ ಇವರಿಗೆ ಚಿಕಿತ್ಸೆ ನೀಡಲಾಗುತ್ತದೆ.