ಹೈದರಾಬಾದ್: ನಟ ಪವನ್ ಕಲ್ಯಾಣ ಅಭಿನಯದ ‘ವಕೀಲ್ ಸಾಬ್’ ಚಿತ್ರಪ್ರದರ್ಶನ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶಗೊಂಡ ಅಭಿಮಾನಿಗಳು ಚಿತ್ರಮಂದಿರ ಧ್ವಂಸಗೊಳಿಸಿರುವ ಘಟನೆ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ನಡೆದಿದೆ.
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ ಅಭಿನಯದ ವಕೀಲ್ ಸಾಬ್ ಸಿನಿಮಾ ರಾಜ್ಯಾದ್ಯಂತ ಇಂದು (ಏಪ್ರಿಲ್ 9 ) ಬಿಡುಗಡೆಯಾಗಿದೆ. ಆದರೆ, ಗುರುವಾರ ರಾತ್ರಿ ಅಭಿಮಾನಿಗಳಿಗೋಸ್ಕರ ಆಯೋಜಿಸಲಾಗಿದ್ದ ಚಿತ್ರಪ್ರದರ್ಶನವನ್ನು ರದ್ದುಗೊಳಿಸಿರುವುದು ಈ ಘಟನೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ತಿರುಪತಿ ವ್ಯಾಪ್ತಿಗೆ ಬರುವ ಕೃಷ್ಣತೇಜಾ, ಶಾಂತಿ ಹಾಗೂ ಸಂದ್ಯಾ ಸೇರಿದಂತೆ ಐದು ಸಿನಿಮಾ ಮಂದಿರಗಳ ಮೇಲೆ ಉದ್ರಿಕ್ತ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಥಿಯೇಟರ್ ಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ತೆಲಂಗಾಣದ ಜೋಗುಳಾಂಬಾ ಗದ್ವಾಲ್ ನಲ್ಲಿರುವ ಶ್ರೀನಿವಾಸ ಚಿತ್ರ ಮಂದಿರ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. ಸ್ಯಾಟ್ ಲೈಟ್ ಸಮಸ್ಯೆಯಿಂದ ಮೊದಲ ಶೋ ರದ್ದಾದ ಪರಿಣಾಮ ಫ್ಯಾನ್ಸ್ ಗಳು ಚಿತ್ರಮಂದಿರದ ಬಾಗಿಲು ಹಾಗೂ ಕಿಟಕಿಗಳನ್ನು ಮುರಿದು ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಘಟನೆ ಕುರಿತು ಸ್ಥಳೀಯ ಮಾಧ್ಯಮಗಳ ಎದುರು ಆಕ್ರೋಶ ವ್ಯಕ್ತಪಡಿಸಿರುವ ಪವನ್ ಕಲ್ಯಾಣ ಅಭಿಮಾನಿಗಳು, ಆಂಧ್ರ ಪ್ರದೇಶದ ಸರ್ಕಾರವು ಉದ್ದೇಶಪೂರ್ವಕವಾಗಿ ಸಿನಿಮಾ ಪ್ರದರ್ಶನ ರದ್ದುಪಡಿಸಿದೆ ಎಂದು ದೂರಿದ್ದಾರೆ.
ಅದೇ ರೀತಿ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡದವೊಲು ಪ್ರದೇಶದ ಎಂಎಲ್‍ಎ ಮನೆ ಎದುರು ಪ್ರತಿಭಟನೆ ನಡೆಸಿರುವ ಅಭಿಮಾನಿಗಳು, ವಿಶೇಷ ಪ್ರದರ್ಶನ ಶುರುಮಾಡುವಂತೆ ಆಗ್ರಹಿಸಿದರು.
ಕಡಪಾ ಜಿಲ್ಲೆ ಬೆಡ್ವಾಲ್ ಪ್ರದೇಶದಲ್ಲಿ ಚಿತ್ರಮಂದಿರದ ಸಿಬ್ಬಂದಿ ಹಾಗೂ ಪವನ್ ಕಲ್ಯಾಣ ಅಭಿಮಾನಿಗಳ ಮಧ್ಯೆ ಸಂಘರ್ಷ ನಡೆದಿದೆ. ಅಭಿಮಾನಿಗಳ ಗುಂಪು ಟಾಕೀಸ್‍ನಲ್ಲಿರುವ ಚೇರ್ ಗಳನ್ನು ಮುರಿದಿರುವ ಕುರಿತು ವರದಿಯಾಗಿದೆ.