Advertisement

ಗತ ವೈಭವ ಮೆರೆದಿದ್ದ ಟಾಕೀಸ್‌ಗಳಿಗೆ ಅಸ್ತಿತ್ವದ ಪ್ರಶ್ನೆ

03:16 PM Feb 16, 2021 | Team Udayavani |

ಹಾಸನ: ಕಿರುತೆರೆ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಹಾವಳಿಯಿಂದ ಪ್ರೇಕ್ಷಕರಿಲ್ಲದೆ ಸಂಕಷ್ಟ ಅನುಭವಿಸಿದ್ದ ಚಿತ್ರಮಂದಿರಗಳು, ವಾಣಿಜ್ಯ ಸಂಕೀರ್ಣ, ಕಲ್ಯಾಣ ಮಂಟಪ, ಗೋದಾಮುಗಳಾಗಿ ಪರಿವರ್ತನೆಯಾಗ ತೊಡಗಿದ್ದವು. ಗಾಯದ ಮೇಲೆ ಬರೆ ಎಂಬಂತೆ ಚಿತ್ರೋದ್ಯಮಕ್ಕೆ, ವಿಶೇಷವಾಗಿ ಚಿತ್ರ ಮಂದಿರಗಳಿಗೆ ಕೋವಿಡ್ ಬಹುದೊಡ್ಡ ಹೊಡೆತ ಕೊಟ್ಟಿತು.

Advertisement

ಕಳೆದ ಮಾರ್ಚ್‌ನಲ್ಲಿ ಮುಚ್ಚಿದ್ದ ಚಿತ್ರಮಂದಿರಗಳ ಪೈಕಿ ಇನ್ನೂ ಕೆಲವು ಚಿತ್ರಮಂದಿರಗಳು ತೆರೆದಿಲ್ಲ. ವಾರದ ಹಿಂದೆ ಪುನರಾರಂಭವಾದ ಕೆಲವು ಚಿತ್ರಮಂದಿರಗಳಿಗೂನಿರೀಕ್ಷಿಸಿದಷ್ಟು ಪ್ರೇಕ್ಷಕರು ಬರುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಅಳಿದುಳಿದ ಚಿತ್ರ ಮಂದಿರಗಳು ಕಣ್ಮರೆಯಾಗುವ ಆತಂಕ ಎದುರಾಗಿದೆ.

ಹೊಯ್ಸಳರ ನಾಡು, ಶಿಲ್ಪ ಕಲೆಗಳ ಬೀಡು ಹಾಸನ ಜಿಲ್ಲೆಯಲ್ಲೂ ಚಿತ್ರ ಮಂದಿರಗಳ ಸ್ಥಿತಿಗತಿ ಹೀನಾಯವಾಗಿದೆ. ಹಾಸನ ನಗರದಲ್ಲಿದ್ದ ಎಂಟು ಚಿತ್ರ ಮಂದಿರಗಳ ಪೈಕಿ ಈಗಾಗಲೇ ಎರಡು ಚಿತ್ರಮಂದಿರಗಳು ಎರಡು ದಶಕಗಳ ಹಿಂದೆಯೇ ಮುಚ್ಚಿ ಹೋಗಿವೆ. ಆದರೆ, ಒಂದು ಚಿತ್ರಮಂದಿರ ಹೊಸದಾಗಿ ನಿರ್ಮಾಣವಾಗಿದ್ದು, ಚಿತ್ರರಸಿಕರಿಗೆ ಸಮಾಧಾನ ತಂದಿದೆ.

ಈಗ ಹಾಸನ ನಗರದಲ್ಲಿ 6 ಚಿತ್ರಮಂದಿರಗಳಿದ್ದು, ಕೋವಿಡ್ ಸಂದರ್ಭದಲ್ಲಿ ಮುಚ್ಚಿದ್ದರಲ್ಲಿ ಈಗ ಎರಡು ಮಾತ್ರ ತೆರದಿವೆ. ಇನ್ನೂ ನಾಲ್ಕು ಬಾಗಿಲೇ ತೆರೆದಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ವಿಶ್ವಾಸದಲ್ಲಿ ಮಾಲಿಕರು ಇದ್ದಾರೆ.

ಪಿಕ್ಚರ್‌ ಪ್ಯಾಲೇಸ್‌ನ ವೈಭವ.. :

Advertisement

ಹಾಸನದ ಬಸ್‌ ನಿಲ್ದಾಣರಸ್ತೆಯಲ್ಲಿದ್ದ ಪಿಕ್ಚರ್‌ ಪ್ಯಾಲೇಸ್‌ನಿರ್ಮಾಣವಾಗಿದೆ. ದೇಶಕ್ಕೆಸ್ವಾತಂತ್ರ್ಯ ಬಂದಸಂದರ್ಭದಲ್ಲಿ ಆರಂಭವಾದ ಈ ಪಿಕ್ಚರ್‌ ಪ್ಯಾಲೇಸ್‌ 75 ವರ್ಷ ಪೂರೈಸಿದೆ. ಒಳಆವರಣ ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಆಧುನಿಕ ಶೈಲಿ ಮೈಗೂಡಿಸಿ ಕೊಂಡರೂ ಹೊರ ಆವರಣ ಮಾತ್ರ ಬದಲಾಗಿಲ್ಲ. ಕಡಿಮೆ ಬಜೆಟ್‌ನ ಚಿತ್ರ ಹಾಕಿದರೂ ಬಂಡವಾಳಕ್ಕೆ ಮೋಸವಿಲ್ಲ ಎಂಬಂತೆ ಚಿತ್ರ ಮಂದಿರ ತುಂಬಿರುತ್ತಿತ್ತು. ಆದರೆ, ಬದಲಾದ ಕಾಲ ಮಾನದಲ್ಲಿ ಪಿಕ್ಚರ್‌ ಪ್ಯಾಲೇಸ್‌ಗೂ ಪ್ರೇಕ್ಷಕರ ಕೊರತೆಯಾಯಿತು. ಕೋವಿಡ್ ಸಂದರ್ಭದಲ್ಲಿ ಮುಚ್ಚಿದ ಪಿಕ್ಚರ್‌ ಪ್ಯಾಲೇಸ್‌ನಲ್ಲಿ ಇನ್ನು ಚಿತ್ರಪ್ರದರ್ಶನಕ್ಕೆ ತೆರೆದುಕೊಂಡಿಲ್ಲ. ಒಂದೆರಡು ತಿಂಗಳು ತಡವಾದರೂ ಚಿತ್ರಮಂದಿರ ನವೀಕರಿಸಿ ಪುನರಾರಂಭಿಸಲು ಮಾಲಿಕರು ನಿರ್ಧರಿಸಿದ್ದಾರೆ. 1948ರಲ್ಲಿ ನಿರ್ಮಾಣವಾದ ಚಿತ್ರಮಂದಿರಕ್ಕೆ ಅಂದಿನ ಮಾಲಿಕ ಎಂ.ಆರ್‌.ಪುಟ್ಟಸ್ವಾಮಯ್ಯ ಅವರು ತಮ್ಮ ಸಹೋದರಿ ಪ್ರಮೀಳಾ ಹೆಸರಿಡಲು ನಿರ್ಧರಿಸಿದ್ದರಂತೆ. ಆದರೆ, ಪ್ರಮೀಳಾ ಅವರು ಅಕಾಲಿಕ ಮರಣ ಹೊಂದಿದ್ದರಿಂದ ನೆನಪು ಕಾಡದಿರಲೆಂದು ಪ್ರಮೀಳಾ ಟಾಕೀಸ್‌ ಬದಲು ಪಿಕ್ಚರ್‌ ಪ್ಯಾಲೇಸ್‌ ಎಂದು ಹೆಸರಿಟ್ಟರೆಂದು ಈಗಿನ ಮಾಲಿಕ ಗುರುಪ್ರಸಾದ್‌ ಹೇಳುತ್ತಾರೆ. ಎಂಥ ಸಂಕಷ್ಟ ಸಮಯ ಬಂದರೂ ಚಿತ್ರಮಂದಿರ ಉಳಿಸಿಕೊಂಡು ಹೆರಿಟೇಜ್‌ ಕಟ್ಟಡವಾಗಿ ಉಳಿಸಿಕೊಳ್ಳುವುದು ನಮ್ಮ ಇಚ್ಛೆ ಎಂದೂ

ಇಂಪೀರಿಯಲ್‌ ನೆನಪು ಮಾತ್ರ :

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದ್ದ ಇಂಪೀರಿಯಲ್‌ ಚಿತ್ರಮಂದಿರ ನೆಲಸಮವಾಗಿ ಎರಡು ದಶಕಗಳೇ ಕಳೆದಿವೆ. ಎನ್‌.ಆರ್‌.ವೃತ್ತದ ಸಮೀಪ, ಹೊಳೆನರಸೀಪುರ ರಸ್ತೆಯಲ್ಲಿದ್ದ ಇಂಪೀರಿಯಲ್‌ ಚಿತ್ರಮಂದಿರದ ಪುರಾತನ ಕಟ್ಟಡದಂತಿತ್ತು. ಅತ್ಯಾಧುನಿಕ ಶೈಲಿ, ಡಿಟಿಎಚ್‌ ತಂತ್ರಜ್ಞಾನಕ್ಕೆ ಇಂಪೀರಿಯಲ್‌ ಚಿತ್ರ ಮಂದಿರ ಹೊಂದಿಕೊಳ್ಳಲಾಗಲಿಲ್ಲ. ಚಿತ್ರ ನಿರ್ಮಾಪಕರು, ವಿತರಕರು ಆಚಿತ್ರಮಂದಿರದಲ್ಲಿ ಚಲನ ಚಿತ್ರ ಬಿಡುಗಡೆಗೆ ಹಿಂದೇಟು ಹಾಕಿದ್ದರ ಪರಿಣಾಮ ಇಂಪೀರಿಯಲ್‌ ಮುಚ್ಚಿತು. ಕೆಲ ವರ್ಷ ಪಾಳು ಕಟ್ಟಡದಂತಿದ್ದ ಚಿತ್ರಮಂದಿರವನ್ನುನೆಲಸಮ ಮಾಡಲಾಯಿತು. ಕೆನರಾ ಬ್ಯಾಂಕ್‌ ಪಕ್ಕದಲ್ಲಿ ಖಾಲಿ ನಿವೇಶನವಾಗಿರುವ ಸ್ಥಳ ಇಂಪೀರಿಯಲ್‌ನ ಗತ ವೈಭವ ಹೇಳುವಂತಿದೆ.

ವೈಭವ ಕಳೆದು ಕೊಂಡ ಪೃಥ್ವಿ :

ಹಾಸನದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತೆ ನಾಲ್ಕುದಶಕಗಳ ಹಿಂದೆ ವಿಶಾಲವಾಗಿಆಧುನಿಕ ಶೈಲಿಯಲ್ಲಿನಿರ್ಮಾಣವಾದ ಪೃಥ್ವಿ ಚಿತ್ರಮಂದಿರದಲ್ಲಿ ಪರಭಾಷಾಚಿತ್ರಗಳನ್ನು ನೋಡುವುದೇ ಒಂದು ಪ್ರತಿಷ್ಠೆಯಾಗಿತ್ತು.ಬಸವೇಶ್ವರ ಸಾಮಿಲ್‌ ಮಾಲಿಕ ಬಸಪ್ಪ ಅವರ ನಿರ್ಮಿಸಿದಪೃಥ್ವಿ ಚಿತ್ರ ಮಂದಿರವನ್ನು ಅವರ ಪುತ್ರ ಧರ್ಮರಾಜ್‌ ಕೆಲ ವರ್ಷ ನಿರ್ವಹಿಸಿದರು. ಆ ನಂತರ ಮಾರಾಟವಾದ ಚಿತ್ರ ಮಂದಿರ ನಿರ್ವಹಣೆ ಹಾಗೂ ಪ್ರೇಕ್ಷಕರ ಕೊರತೆಯಿಂದ ವೈಭವ ಕಳೆದುಕೊಳ್ಳುತ್ತಾ ಬಂದಿತು. ಈಗಲೂ ಆಕರ್ಷಕವಾಗಿಯೇ ಇರುವ ಚಿತ್ರ ಮಂದಿರ ಕೋವಿಡ್ ಸಂದರ್ಭದಲ್ಲಿ ಮುಚ್ಚಿದ್ದು ಮತ್ತೆ ತೆರೆದಿಲ್ಲ.

ಬಾಲ್ಕನಿ ಇಲ್ಲದ ಶ್ರೀಗುರು :  ಮೂರು ದಶಕದ ಹಿಂದೆ ನಿರ್ಮಾಣವಾದರೂಬಾಲ್ಕನಿ ಇಲ್ಲದ ವಿಶೇಷಚಿತ್ರ ಮಂದಿರ ಎಂದೇಗುರ್ತಿಸ ಲಾಗುತ್ತಿರುವಶ್ರೀಗುರು ಚಿತ್ರಮಂದಿರ ಉತ್ತಮ ನಿರ್ವಹಣೆಯಿಂದಾಗಿ ಬಿಗ್‌ ಬಜೆಟ್‌ನ ಚಿತ್ರಗಳು ಆ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದವು. ಕೋವಿಡ್ ಸಂದರ್ಭದಲ್ಲಿ ಮುಚ್ಚಿದ್ದ ಚಿತ್ರ ಮಂದಿರ ಈಗ ಪುನಾರಂಭವಾಗಿದೆ. ಆದರೆ, ನಿರೀಕ್ಷಿತ ಪೇಕ್ಷಕರು ಬರುತ್ತಿಲ್ಲ ಎಂದು ಚಿತ್ರಮಂದಿರದ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಮರೆಯಾದ ಮಲ್ಲಿಕಾರ್ಜುನ :

ಹಾಸನ ಎಪಿಎಂಸಿ ಎದುರು ಬಿ.ಎಂ. ರಸ್ತೆಗೆ ಹೊಂದಿಕೊಂಡಂತಿರುವ ಮಲ್ಲಿಕಾರ್ಜುನ ಚಿತ್ರ ಮಂದಿರ ಹೆಚ್ಚು ದಿನ ಉಳಿಯಲಿಲ್ಲ. ಹೆಚ್ಚು ಹಿಂದಿ, ತಮಿಳು ಚಲನಚಿತ್ರಗಳೇ ಪ್ರದರ್ಶನವಾಗುತ್ತಿದ್ದ ಮಲ್ಲಿಕಾರ್ಜುನ ಚಿತ್ರ ಮಂದಿರಕ್ಕೆ ಹಾಸನದ ನಾಗರಿಕರು ಹೊಂದಿಕೊಳ್ಳಲೇ ಇಲ್ಲ. ದಶಕ ಕಾಲ ಕುಂಟುತ್ತಾ ಸಾಗಿದ ಚಿತ್ರ ಮಂದಿರ ಮುಚ್ಚಿತು. ಮಲ್ಲಿಕಾರ್ಜುನ ಚಿತ್ರ ಮಂದಿರ ಒಂದು ದಶಕದ ಹಿಂದೆಯೇ ಗೋದಾಮ ಆಗಿ ಪರಿವರ್ತನೆಯಾಗಿದೆ.

ಪಾಳು ಬಿದ್ದ ಭಾನು :  ಬೂವನಹಳ್ಳಿ ಬೆಟ್ಟಪ್ಪ ಅವರ ಕನಸಿನ ಭಾನು ಚಿತ್ರಮಂದಿರ ಆಗಿನ ಕಾಲದ ಬೃಹತ್‌ ಚಿತ್ರ ಮಂದಿರ. ಬೆಟ್ಟಪ್ಪ ಅವರ ಜೀವಿತಾವಧಿವರೆಗೂ ವೈಭವ ಕಾಪಾಡಿಕೊಂಡಿದ್ದ ಭಾನು ಚಿತ್ರಮಂದಿರ, ಬೆಟ್ಟಪ್ಪ ಅವರ ಕುಟುಂಬದವರ ವ್ಯವಹಾರಕ್ಕೆ ಸಿಲುಕಿ ಗೊಂದಲದಿಂದಾಗಿ ವಿವಾದಕ್ಕೀಡಾಯಿತು. ನ್ಯಾಯಾಲಯದ ಮೆಟ್ಟಿಲು ಏರಿ ವಿವಾದ ಬಗೆ ಹರಿಯಲೇ ಇಲ್ಲ. ನಾಲ್ಕೈದು ವರ್ಷಗಳಿಂದ ಭಾನು ಚಿತ್ರಮಂದಿರ ಮುಚ್ಚಿದ್ದು, ಪಾಳು ಬಿದ್ದ ಕಟ್ಟಡದ ಸ್ವರೂಪ ಪಡೆಯುತ್ತಿದೆ. ಮತ್ತೆ ಪುನರಾಂಭವಾಗುವ ಸೂಚನೆಗಳೂ ಕಾಣುತ್ತಿಲ್ಲ.

ಹವಾನಿಯಂತ್ರಿತ ಎಸ್‌ಬಿಜಿ :

ಹರ್ಷಮಹಲ್‌ ರಸ್ತೆಯಲ್ಲಿ ಎರಡು ದಶಕಗಳಿಂದೀಚೆಗೆ ನಿರ್ಮಾಣವಾದ ಎಸ್‌ಬಿಜಿ ಹಾಸನದ ಏಕೈಕ ಹವಾ ನಿಯಂತ್ರಿತ ಚಿತ್ರ ಮಂದಿರ ಎಂಬ ಹೆಗ್ಗಳಿಕೆ ಹೊಂದಿದೆ. ನೆಲ ಮಹಡಿಯಲ್ಲಿ ವಾಹನಗಳ ನಿಲುಗಡೆಯ ವ್ಯವಸ್ಥೆ, ವಿಶಿಷ್ಟ ಸೌಂಡ್‌ ಎಫೆಕ್ಟ್‌ನ ತಂತ್ರಜ್ಞಾನ ಅಳವಡಿಸಿಕೊಂಡ ಆಧುನಿಕ ಶೈಲಿಯ ಚಿತ್ರ ಮಂದಿರದ ವೈಭವ ಈಗಲೂ ಕಡಿಮೆಯಾಗಿಲ್ಲ. ಉದ್ಯಮಿ ಎಸ್‌.ಬಿ.ಗೌಡಯ್ಯ ಅವರ ಸ್ಮರಣಾರ್ಥ ಅವರ ಪುತ್ರ ನಾರಾಯಣಗೌಡ ಮತ್ತು ಮಕ್ಕಳು ಚಿತ್ರ ಮಂದಿರ ನಿರ್ಮಿಸಿ ಸದಭಿರುಚಿಯ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಮಂದಿರಕ್ಕೆ ಪ್ರೇಕ್ಷಕರ ಕೊರತೆಯಾಗದಂತೆ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ.

ಪರಿಸ್ಥಿತಿ ಸುಧಾರಿಸುತ್ತಿದೆ ಒಂದು ವಾರದಿಂದ ಎಸ್‌ಬಿಜಿ ಚಿತ್ರ ಮಂದಿರದಲ್ಲಿ ಚಿತ್ರ ಪ್ರದರ್ಶನ ಆರಂಭವಾಗಿದೆ. ಹಾಸನದಲ್ಲಿ ಈಗ 2 ಚಿತ್ರಮಂದಿರಗಳು ಮಾತ್ರ ಪುನರಾರಂಭವಾಗಿವೆ. ಸರ್ಕಾರ ಈಗ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದ ನಂತರ ಪರಿಸ್ಥಿತಿ ಸುಧಾರಿಸುತ್ತಿದ್ದು, ಪೇಕ್ಷಕರೂ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.  ಈಗ ಇನ್‌ಸ್ಪೆಕರ್‌ ವಿಕ್ರಂ ಚಿತ್ರ ಪ್ರದರ್ಶನವಾಗುತ್ತಿದೆ. ಶೇ.60 ರಿಂದ 70 ಚಿತ್ರ ಮಂದಿರ ತುಂಬುತ್ತಿದೆ. –ಕಾಂತರಾಜ್‌, ವ್ಯವಸ್ಥಾಪಕ, ಎಸ್‌ಬಿಜಿ ಚಿತ್ರ ಮಂದಿರ

ಪ್ರೇಕ್ಷಕರು ಬಂದೇ ಬರ್ತಾರೆ :  ಕೋವಿಡ್ ಹೊಡೆತ ಚಿತ್ರ ರಂಗಕ್ಕೆ ಭಾರೀ ಹೊಡೆತ ಕೊಟ್ಟಿತು. ಈಗ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿವೆ. ಏನೇ ತಂತ್ರಜ್ಞಾನ ಸುಧಾರಣೆಯಾದರೂ ಜನರು ಮತ್ತೆ ಚಿತ್ರಮಂದಿರದತ್ತ ಬಂದೇ ಬರುವ ವಿಶ್ವಾಸವಿದೆ. ಹಾಗಾಗಿ ನಮ್ಮ ಪಿಕ್ಚರ್‌ ಪ್ಯಾಲೇಸ್‌ ಅನ್ನು ಆಧುನೀಕರಿಸಿ ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಒಂದೆರಡು ತಿಂಗಳಲ್ಲೇ ಪುನರಾರಂಭಿಸುತ್ತೇವೆ. ಎಂ .ಬಿ.ಗುರುಪ್ರಸಾದ್‌, ಪಿಕ್ಚರ್‌ ಪ್ಯಾಲೇಸ್‌ ಮಾಲಿಕ

 

-ನಂಜುಂಡೇಗೌಡ.ಎನ್‌

Advertisement

Udayavani is now on Telegram. Click here to join our channel and stay updated with the latest news.

Next