Advertisement

ಚಿತ್ರಮಂದಿರದ ಗಮ್ಮತ್ತು ಮರುಕಳಿಸೋದು ಡೌಟ್‌

05:14 PM Oct 12, 2020 | Suhan S |

ದಾವಣಗೆರೆ: ಕೇಂದ್ರ ಸರ್ಕಾರ ಅನ್‌ಲಾಕ್‌-5.0ದಲ್ಲಿ ಅ. 15 ರಿಂದ ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿಯನ್ನೇನೋ ನೀಡಿದೆ. ಆದರೆ ಪ್ರೇಕ್ಷಕ ವರ್ಗದ ಮನೋಭಾವ, ಮಾರ್ಗಸೂಚಿ ಪಾಲನೆ, ನಿರ್ವಹಣಾ ವೆಚ್ಚ ಮತ್ತಿತರ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಷ್ಟ ಸಾಧ್ಯ.

Advertisement

ಬೆಂಗಳೂರು ಹೊರತುಪಡಿಸಿದರೆ ಮಧ್ಯ ಕರ್ನಾಟಕ ಕೇಂದ್ರ ದಾವಣಗೆರೆ ಕನ್ನಡ ಚಿತ್ರರಂಗಕ್ಕೆ ಅತಿ ದೊಡ್ಡ ಕಲೆಕ್ಷನ್‌ ಪಾಯಿಂಟ್‌. ದಾವಣಗೆರೆಯಲ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತುಎಂದರೆ ಆ ಚಿತ್ರ ಗೆದ್ದಂತೆಯೇ ಎಂಬ ಮಾತುಗಳು ಕನ್ನಡ ಚಿತ್ರರಂಗದಲ್ಲಿದೆ. ಹೀಗೆ ಅತೀಹೆಚ್ಚುಪ್ರೇಕ್ಷಕರನ್ನು ಒಳಗೊಂಡ ದಾವಣಗೆರೆಯಲ್ಲೇ ಎಲ್ಲಾ ಚಿತ್ರಮಂದಿರಗಳು ಪುನರಾರಂಭ ಆಗುವ ಲಕ್ಷಣಸದ್ಯಕ್ಕೆ ಕಾಣುತ್ತಿಲ್ಲ.

ಕೋವಿಡ್ ವೈರಸ್‌ ಹರಡುವುದನ್ನು ತಡೆಯಲು  ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮ ಅ.12ಕ್ಕೆಚಿತ್ರಮಂದಿರಗಳು ಬಂದ್‌ ಆಗಿ ಬರೋಬ್ಬರಿ 7 ತಿಂಗಳಾಗುತ್ತದೆ. ಚಿತ್ರಮಂದಿರಗಳು ಇಷ್ಟೊಂದು ಸುದೀರ್ಘ‌ ಅವಧಿ ಮುಚ್ಚಿದ ಉದಾಹರಣೆಯೇ ಇಲ್ಲ. ಈಗ ಕೇಂದ್ರ ಸರ್ಕಾರ ಬೆಳ್ಳಿ ಪರದೆಯ ಮೇಲೆ ಚಿತ್ರಗಳ ಪ್ರದರ್ಶನಕ್ಕೆ ಹಸಿರು ನಿಶಾನೆ ನೀಡಿದೆ. ಆದರೆ ಕೋವಿಡ್ ಅಬ್ಬರಿಸುತ್ತಿರುವ ಸಂದರ್ಭದಲ್ಲಿ ಪ್ರೇಕ್ಷಕರು ಹಿಂದಿನಂತೆ ನಿರ್ಭೀತಿಯಿಂದ ಚಿತ್ರಮಂದಿರಗಳಿಗೆ ಬರುತ್ತಾರಾ ಎಂಬ ಪ್ರಶ್ನೆ ಚಿತ್ರಮಂದಿರದ ಮಾಲೀಕರು, ಬಾಡಿಗೆದಾರರು, ವಿತರಕರನ್ನು ಕಾಡುತ್ತಿದೆ. ಅದಕ್ಕೆ ಉತ್ತರ ಕಷ್ಟ. ಕಾರಣ ಎಲ್ಲವೂ ಪ್ರೇಕ್ಷಕರ ನಿರ್ಧಾರವನ್ನು ಅವಲಂಬಿಸಿದೆ.

ಮಹಾಮಾರಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತದೆ. ಜನಸಂದಣಿ ತಪ್ಪಿಸಲು ಮುಂಗಡವಾಗಿ, ಆನ್‌ಲೈನ್‌ ಟಿಕೆಟ್‌ ವಿತರಣೆ ವ್ಯವಸ್ಥೆ ಮಾಡಬೇಕು ಎಂಬ ನಿಯಮಪಾಲನೆ ಕಷ್ಟ. ಸಮಯ ಕಳೆಯಲೆಂದೇಚಿತ್ರಮಂದಿರಕ್ಕೆ ಬರುವವರೂ ಇದ್ದಾರೆ. ಶೋ ಪ್ರಾರಂಭವಾದ ನಂತರವೂ ಚಿತ್ರಮಂದಿರಕ್ಕೆ ಬರುವವರನ್ನು ವಾಪಸ್‌ ಕಳುಹಿಸಲು ಆಗದು. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಚಿತ್ರಮಂದಿರ ಮಾಲೀಕರಿಗೆ ಎದುರಾಗಿದೆ.

ಇದಲ್ಲದೆ ಚಿತ್ರಗಳನ್ನು ನೋಡಲು ಕನಿಷ್ಠವೆಂದರೂ 100-200, ತಮ್ಮ ನೆಚ್ಚಿನ ನಾಯಕ, ನಾಯಕಿಯ ಚಿತ್ರಗಳಿದ್ದರೆ 500, ದಿನಕ್ಕೆ ಸಾವಿರದಷ್ಟು ಪ್ರೇಕ್ಷಕರು ಬಂದಾಗ ಪ್ರತಿಯೊಬ್ಬರ ವಿಳಾಸ, ಮೊಬೈಲ್‌ ನಂಬರ್‌ ಒಳಗೊಂಡಂತೆ ಎಲ್ಲಾ ವಿವರ ದಾಖಲಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೂ ಚಿತ್ರಮಂದಿರದವರನ್ನು ಕಾಡುತ್ತಿದೆ.

Advertisement

ಚಿತ್ರಮಂದಿರದ ಸಾಮರ್ಥ್ಯದ ಶೇ.50 ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂಬ ನಿಯಮ ವಿಧಿಸಲಾಗಿದೆ. ಈಗಾಗಲೇ ಪ್ರೇಕ್ಷಕರ ಕೊರತೆಯಿಂದ ಸಮಸ್ಯೆಯಲ್ಲಿರುವ ಚಿತ್ರಮಂದಿರಗಳಿಗೆ ಇದು ಇನ್ನಷ್ಟು ಸಮಸ್ಯೆ ಉಂಟು ಮಾಡಲಿದೆ. ಸಾಮಾನ್ಯ ಚಿತ್ರಗಳಬಿಡುಗಡೆಯಾದಾಗ ಅಷ್ಟೊಂದು ಸಮಸ್ಯೆ  ಆಗಲಾರದು. ದೊಡ್ಡ ದೊಡ್ಡ ನಟರ, ಭಾರೀ

ಬಜೆಟ್‌ ಚಿತ್ರಗಳು ಬಿಡುಗಡೆಯಾದಾಗ ಬಹಳ ಸಮಸ್ಯೆ ಆಗುತ್ತದೆ. ಸರ್ಕಾರ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿದ ನಂತರವೂ ಕೆಲವಾರು ಚಿತ್ರಗಳು ಮರು ಬಿಡುಗಡೆ ಆಗುವ ಅಂಶ ಕೂಡ ಅ.15 ರಿಂದಲೇ ಚಿತ್ರಮಂದಿರಗಳ ಪುನಾರಂಭಕ್ಕೆ ಲೆಕ್ಕಾಚಾರ ಹಾಕುವಂತೆ ಮಾಡಿದೆ. ಚಿತ್ರಮಂದಿರಗಳು ಪುನಾರಂಭಗೊಂಡರೂ ಹಿಂದಿನ ಗಮ್ಮತ್ತು ಕಾಣೋದು ಕಷ್ಟ.

ಸರ್ಕಾರ ಸ್ಯಾನಿಟೈಸರ್‌ ಒದಗಿಸಲಿ : ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿ ನೀಡಿರುವ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳ ಪಾಲನೆ ಮತ್ತು ನಿರ್ವಹಣೆ ಚಿತ್ರಮಂದಿರಗಳ ಮಾಲೀಕರಿಗೆ ಹೆಚ್ಚಿನ ಹೊರೆಯಾಗಲಿದೆ. ಪ್ರತಿ ಶೋ ನಂತರ ಸ್ಯಾನಿಟೈಸೇಷನ್‌ಗೆ ಕನಿಷ್ಠ 1 ಸಾವಿರ ರೂ. ಲೆಕ್ಕ ಹಾಕಿದರೂ ನಾಲ್ಕು ಪ್ರದರ್ಶನಕ್ಕೆ 4 ಸಾವಿರ ರೂ. ಆಗುತ್ತದೆ. ಅಂದರೆ ತಿಂಗಳಿಗೆ 1.20 ಲಕ್ಷ ರೂ. ವೆಚ್ಚ ಭರಿಸಬೇಕಾಗುತ್ತದೆ. ಈಗಿನ ಕಲೆಕ್ಷನ್‌ ನೋಡಿದರೆ ಮಾಲೀಕರು, ಬಾಡಿಗೆದಾರರಿಗೆ ಹೊರೆ ಆಗಿಯೇ ಆಗುತ್ತದೆ. ಹಾಗಾಗಿ ಸರ್ಕಾರ ಕಡಿಮೆ ದರದಲ್ಲಿ ಸ್ಯಾನಿಟೈಸರ್‌ ಒದಗಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು ಎನ್ನುತ್ತಾರೆ ಗೀತಾಂಜಲಿ ಚಿತ್ರಮಂದಿರದ ಚಂದ್ರಶೇಖರ್‌.

ಬೇರೆ ಕೆಲಸದತ್ತ ನೌಕರರು :ಲಾಕ್‌ಡೌನ್‌ನಿಂದ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿದ್ದಂತಹವರು ಜೀವನ ನಿರ್ವಹಣೆಗೆ ಬೇರೆ ಬೇರೆ ಕೆಲಸಗಳನ್ನುಅರಸಿ ಹೋಗಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದಂತಹ ಕೆಲಸಗಾರರಿಗೆಸಂಘ- ಸಂಸ್ಥೆಗಳವರು, ಚಿತ್ರಮಂದಿರಗಳ ಮಾಲೀಕರು ಆಹಾರದ ಕಿಟ್‌ ಇತರೆ ನೆರವು ನೀಡಿದ್ದನ್ನು ಬಿಟ್ಟರೆ ನೆರವಿಗೆಬರಲೇಬೇಕಾದವರು ಬರಲೇ ಇಲ್ಲ ಎಂಬ ಕೊರಗು ಕೆಲಸಗಾರರದ್ದಾಗಿದೆ.

 

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next