ಮೈಸೂರು: ಕೋವಿಡ್ ನಂತರ ಚಿತ್ರಮಂದಿರಗಳು ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದರೂ ರಾಜ್ಯ ಸರ್ಕಾರದ ತೆರಿಗೆ ನೀತಿ ಹಾಗೂ ಚಿತ್ರ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರ ನಡುವಿನ ಇನ್ನೂ ಇತ್ಯರ್ಥವಾಗದಿರುವ ಸಮಸ್ಯೆಯಿಂದಾಗಿ ಮತ್ತಷ್ಟು ಚಿತ್ರಮಂದಿರಗಳು ಮುಚ್ಚುವ ಆತಂಕದಲ್ಲಿವೆ.
ಕಾರ್ಮಿಕರ ವಿಚಾರಕ್ಕೆ ಬಂದಾಗ ಚಿತ್ರಮಂದಿರಗಳನ್ನು ಚಲನಚಿತ್ರ ಉದ್ಯಮಕ್ಕೆ ಸೇರಿಸಲಾಗಿದೆ. ವಿದ್ಯುತ್ ದರ ನಿಗದಿ ವಿಚಾರದಲ್ಲಿ ವಾಣಿ ಜ್ಯದ ಅಡಿಯಲ್ಲಿ ಹೆಸರಿಸಲಾಗಿದೆ. ಬ್ಯಾಂಕುಗಳಲ್ಲಿ ಸಾಲಸೌಲಭ್ಯದಲ್ಲಿ ವಾಣಿಜ್ಯ ಉದ್ದೇಶ ಎನ್ನಲಾಗುತ್ತದೆ. ವಿದ್ಯುತ್ ದರದಲ್ಲಿ ರಿಯಾಯ್ತಿ ಕೇಳುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದು ಚಿತ್ರಮಂದಿ ರಗಳ ಮಾಲೀಕರ ಅಳಲು. ಹೀಗಾಗಿ, ದಿನಕಳೆದಂತೆ ಚಿತ್ರಮಂದಿರಗಳು ಮುಚ್ಚುವ ಹಾದಿಯಲ್ಲೇ ಸಾಗಿವೆ.
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲ, ಚಿತ್ರ ನಿರ್ಮಾಪಕರು, ವಿತರಕರ ಮಧ್ಯೆ ಚಿತ್ರ ಪ್ರದರ್ಶನದ ಕಲೆಕ್ಷನ್ ಆಧರಿತ ಶೇಕಡವಾರು ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ಆದರೆ, ಇದು ಇನ್ನೂ ತೀರ್ಮಾನವಾಗಿಲ್ಲ. ಈ ವಿಚಾರದಲ್ಲಿ ನಮ್ಮ ಬೇಡಿಕೆ ಈಡೇರಿ ದರೆ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಪ್ರ ದರ್ಶಕರ ಮಹಾಮಂಡಲ ಉಪಾಧ್ಯಕ್ಷ ಎಂ.ಆರ್.ರಾಜಾರಾಂ. ಕೋವಿಡ್‌ನಲ್ಲಿ ಆಸ್ತಿ ತೆರಿಗೆಯಲ್ಲಿ ಒಂದು ವರ್ಷದ ಬಾಕಿ ವಿನಾಯಿತಿಯನ್ನು ಸರ್ಕಾರ ನೀಡಿತು. ಆದರೂ, ಕೋವಿಡ್ ಸಂದರ್ಭ ಹಾಗೂ ನಂತರ ಮೈಸೂರಿನಲ್ಲಿಯೂ ಕೆಲವು ಚಿತ್ರಮಂದಿರಗಳು ಬಾಗಿಲು ಎಳೆಯಿತು. ಮೈಸೂರಿನಲ್ಲಿ ಈಗ ಹತ್ತು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರಪ್ರದರ್ಶನಗಳಿವೆ. ಚಿತ್ರಮಂದಿರಗಳು ಹಳೆಯದಾದಷ್ಟು ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂಬುದು ಚಿತ್ರಪ್ರದರ್ಶಕರ ಒತ್ತಾಯವಾಗಿದೆ.
ಆಸ್ತಿ ತೆರಿಗೆ ಹಾಗೂ ಟ್ರೇಡ್ ಲೈಸನ್ಸ್ ವಿಚಾರದಲ್ಲಿ ಮೈಸೂರಿನ ಚಿತ್ರ ಮಂದಿರಗಳ ಮಾಲೀಕರು ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ವಿಚಾರಣೆ ನಡೆದಿದೆ. ಚಿತ್ರಮಂದಿರಕ್ಕೆ ಪರವಾನಗಿ ಪಡೆಯುವುದು ಅಥವಾ ನವೀಕರಿಸಬೇಕಿದ್ದರೆ ಮಾಲೀಕರು ಜಿಎಸ್‌ಟಿ ಕಚೇರಿ (ವಾಣಿಜ್ಯ ತೆರಿಗೆ ಇಲಾಖೆ), ಲೋಕೋಪಯೋಗಿ ಇಲಾಖೆ, ವಿದ್ಯುತ್ ಸರಬರಾಜುದಾರರು, ಮಹಾನಗರ ಪಾಲಿಕೆ, ಅಗ್ನಿಶಾಮಕ ದಳದವರಿಂದ ಎನ್‌ಒಸಿ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಬೇಕು. ನಂತರ ಜಿಲ್ಲಾಧಿಕಾರಿಗಳಿಂದ ಪರವಾನಗಿ ಪಡೆಯಬೇಕು.
ನವೀಕರಣ ಅವಧಿ ಈ ಹಿಂದೆ ಮೂರು ವರ್ಷವಿತ್ತು. ಸರ್ಕಾರ 2019ರಲ್ಲಿ ಈ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿದೆ. ಐದು ಇಲಾಖೆಗಳಿಂದ ಐದು ವರ್ಷಗಳಿಗೆ ಒಮ್ಮೆ ಶುಲ್ಕ ಪಾವತಿಸಿ ಎನ್‌ಒಸಿ ಸರ್ಟಿಫಿಕೇಟ್ ಪಡೆಯಬೇಕು. ನಂತರ ಜಿಲ್ಲಾಧಿಕಾರಿಗಳಿಂದ ನವೀಕರಣ ಪಡೆಯಬೇಕು. ಇದಾದ ನಂತರವೂ ಪಾಲಿಕೆಯಿಂದ ಪ್ರತಿ ವರ್ಷ ಉದ್ದಿಮೆ ರಹದಾರಿ ಪತ್ರ ಪಡೆಯಬೇಕು. ಉದ್ದಿಮೆ ರಹದಾರಿ ಪತ್ರವನ್ನು ಪ್ರತಿವರ್ಷ ಪಡೆಯುವ ಅಗತ್ಯವಿಲ್ಲ ಎಂಬುದು ಚಿತ್ರಮಂದಿರ ಮಾಲೀಕರ ವಾದವಾಗಿದೆ. ಉದ್ದಿಮೆ ರಹದಾರಿ ಪತ್ರದ ಈ ವಿಚಾರ ಈಗ ನ್ಯಾಯಾಲಯದಲ್ಲಿದೆ.
ರಾಜ್ಯ ಸರ್ಕಾರವು ಚಿತ್ರಮಂದಿರ ನವೀಕರಣ ಶುಲ್ಕವನ್ನು ಉದಾಹರಣೆಗೆ 15 ಸಾವಿರ ರೂ. ಇದ್ದದ್ದು ಏಕಾಏಕೀ 1.35 ಲಕ್ಷ ರೂ.ಗೆ ಐದು ವರ್ಷಗಳಿಗೆ ಏರಿಸಿತು. ನವೀಕರಣ ಶುಲ್ಕ ಹೆಚ್ಚಿಸಲಿ. ಆದರೆ, ಏಕಾಏಕೀ ಈ ಪ್ರಮಾಣದಲ್ಲಿ ಏರಿಸಿದರೆ ಹೇಗೆ? ಎಂದು ಚಿತ್ರಮಂದಿ ರದ ಮಾಲೀಕರು ಪ್ರಶ್ನಿಸಿದಾಗ ಸರ್ಕಾರ ಮತ್ತು ಚಿತ್ರಮಂದಿರದ ಮಾಲೀಕರ ಮಧ್ಯೆ ಚರ್ಚೆ ನಡೆದು ಸಮಸ್ಯೆ ಬಗೆಹರಿಯಿತು.
ಸಮಸ್ಯೆ ಸುಳಿಯಲ್ಲಿ ಚಿತ್ರಮಂದಿರ ಮಾಲೀಕರು: ಮೈಸೂರು ಜಿಲ್ಲೆಯಲ್ಲಿ 60 ಚಿತ್ರಮಂದಿರಗಳಿವೆ. ನಗರದಲ್ಲಿದ್ದ 21ಗಳ ಪೈಕಿ 10 ಥಿಯೇಟರ್‌ಗಳು 10 ವರ್ಷಗಳಲ್ಲಿ ಮುಚ್ಚಿವೆ. ಗ್ರಾಮೀಣ ಪ್ರದೇಶದಲ್ಲಿ 39 ಚಿತ್ರಮಂದಿರಗಳಲ್ಲಿ 20 ಥಿಯೇಟರ್ ಗಳು ಬಾಗಿಲು ಹಾಕಿವೆ. ಮೈಸೂರಿನಲ್ಲಿ ಲಕ್ಷ್ಮಿ, ಶಾಂತಲಾ, ಸರಸ್ವತಿ ಚಿತ್ರಮಂದಿರಗಳು ಇತ್ತೀಚಿನ ದಿನಗಳಲ್ಲಿ ಮುಚ್ಚಿತು. ಲಕ್ಷ್ಮೀ ಚಿತ್ರಮಂದಿರವಂತೂ ಸುಮಾರು 75 ವರ್ಷಗಳ ಹಳೆಯ ಚಿತ್ರಮಂದಿ ರವಾಗಿತ್ತು. ಥಿಯೇಟರ್ ಪರವಾನಗಿ ನವೀಕರಣ, ವಿದ್ಯುತ್ ದರ ಪಾವತಿ, ಟ್ರೇಡ್ ಲೈಸೆನ್ಸ್, ಆಸ್ತಿ ತೆರಿಗೆ ಚಲನಚಿತ್ರ ಮಂದಿರಗಳ ಮಾಲೀಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ.
ಕಾಂತಾರ, ಚಾರ್ಲಿ 777, ಜೇಮ್ಸ್, ರಾಬರ್ಟ್, ಬಡವ ರಾಸ್ಕಲ್, ಕೆಜಿಎಫ್-2, ಆರ್‌ಆರ್ ಆರ್, ಪುಷ್ಪಾ, ಪಿಎಸ್ -1, ಗುರು ಶಿಷ್ಯರು, ಗಾಳಿಪಟ- 2 ಯಶಸ್ವಿ ಚಿತ್ರಗಳು ಕೋವಿಡ್ ನಂತರ ಚಲನಚಿತ್ರ ಮಂದಿರಗಳು ಉಸಿರಾಡಲು ಅನುಕೂಲ ಮಾಡಿವೆ. ಆದರೆ, ಚಿತ್ರಮಂದಿರಗಳ ಮಾಲೀಕರ ಬೇಡಿಕೆಗಳು ಈಡೇರಿದರೆ ಪರಿಸ್ಥಿತಿ ಸುಧಾರಿಸುತ್ತದೆ.
– ಎಂ.ಆರ್.ರಾಜಾರಾಂ, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲ ಉಪಾಧ್ಯಕ್ಷ
– ಕೂಡ್ಲಿ ಗುರುರಾಜ