ಹರಪನಹಳ್ಳಿಯ ನಾಗರಿಕರೇ, ಸುತ್ತಮುತ್ತಲಿನ ಹಳ್ಳಿಯ ರೈತ ಬಾಂಧವರೇ,ಇದು ನಿಮ್ಮ ನೆಚ್ಚಿನ ಬಸವರಾಜ ಚಿತ್ರಮಂದಿರದ ಪ್ರಚಾರ. ಇಂದಿನಿಂದ ರಾಜ್‌ಕುಮಾರ್, ಲೀಲಾವತಿ, ಉದಯ ಕುಮಾರ್ ನಟಿಸಿರುವ ವೀರ ಕೇಸರಿಸಿನಿಮಾ. ನೋಡಲು ಮರೆಯದಿರಿ, ಮರೆತು ಮರುಗದಿರಿ..
ಹೀಗೆ ಹೇಳುತ್ತಾ ಒಂಟೆತ್ತಿನ ಗಾಡಿಯಲ್ಲಿಮೈಕ್ ಹಿಡಿದು ಖಾಸಿಂ ಅಲಿ ಪ್ರಚಾರಕ್ಕೆಬಂದರೆ ನಮಗೇನೋ ಪುಳಕ. ಅವನುಪುರ್ರೆಂದು ತೂರುವ ಹ್ಯಾಂಡ್‌ಬಿಲ್‌ಸಂಗ್ರಹಿಸುವ ತವಕ, ಯಾವಾಗ ವೀರಕೇಸರಿ ನೋಡುವೆವೆಂಬ ತಹತಹ ಆರಂಭ.
ನಾನಾಗ 3ನೇ ತರಗತಿಯಲ್ಲಿದ್ದೆ. ಬಸವರಾಜ ಟಾಕೀಸಿನ ಹೆಗ್ಗಳಿಕೆಯೆಂದರೆ ಇತ್ತೀಚಿನವರೆಗೂ ಶೇ.95ರಷ್ಟು ಕನ್ನಡಚಿತ್ರಗಳನ್ನೇ ಪ್ರದರ್ಶಿಸಿದ್ದು! ಕಾರಣಮಾಲೀಕ ವರ್ಗದವರ ಕನ್ನಡ ಪ್ರೀತಿ. ಆದಿನಗಳಲ್ಲಿ ನಾವು ಸಿನೆಮಾ ನೋಡುತ್ತಿದ್ದುದಾದರೂ ಹೇಗೆ ಗೊತ್ತೆ? ನಾಲ್ಕಾಣೆ, ಎಂಟಾಣೆ, ಹನ್ನೆರಡಾಣೆಯ ಕ್ಲಾಸ್‌ಗಳಲ್ಲಿ ಮನೆಯವರೆಲ್ಲ ವಿರಾಜಮಾನರಾಗುತ್ತಿದ್ದೆವು. ನಮೋ ವೆಂಕಟೇಶ…ಘಂಟ ಸಾಲರ ಗೀತೆ ಮೊಳಗಿದೊಡನೆ ಸಿನೆಮಾ ಆರಂಭದ ಸೂಚನೆ.
ಅಬ್ಬಾ! ರಾಜ್ ಕುಮಾರ್ ಸ್ವಾಭಿಮಾನದ ನಲ್ಲೇ ಎಂದು ಹಾಡುತ್ತಾ ಲೀಲಾವತಿಯನ್ನು ಕುದುರೆಯ ಮೇಲೆ ಕೂರಿಸಿಕೊಂಡು ಹೋಗುವುದು, ಉದಯ್‌ಕುಮಾರ್ ಅವರೊಂದಿಗೆ ಕತ್ತಿವರಸೆ… ಇದೆಲ್ಲವೂ ನಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಮನೆಗೆಬಂದು ಮಲಗಿದ ಮೇಲೂ ಅದೇ ದೃಶ್ಯಗಳ ಯಾದೋಂಕಿ ಬಾರಾತ್ ಕಣ್ಣೆದುರು.ಅವರೆಲ್ಲ ರಾತ್ರಿ ಪರದೆಯ ಹಿಂದೆ ಇರುತ್ತಾರಾ? ಎಂದು ಬೆಳಿಗ್ಗೆ ನಾವು ನಾಲ್ಕಾರುಜನ ಪರದೆಯ ಹಿಂದಿನ ಮೋಟುಗೋಡೆನೋಡಿ ಬಂದಿದ್ದೂ ಉಂಟು!ಕಸ್ತೂರಿ ನಿವಾಸ, ಭಕ್ತ ಸಿರಿಯಾಳ, ಜನ್ಮರಹಸ್ಯ, ಪ್ರತಿಧ್ವನಿ, ಮಾವನ ಮಗಳು,ಅದೆಷ್ಟೋ ಚಿತ್ರಗಳೊಂದಿಗೆ ಬಸವರಾಜ ಚಿತ್ರ ಮಂದಿರದ ಕುರ್ಚಿಗಳು ತಳಕು ಹಾಕಿಕೊಂಡಿವೆ. ಕೋವಿಡ್ ನಂತರದಲಾಕ್‌ಡೌನ್‌ಗೆ ನಲುಗಿ ಬಸವರಾಜಚಿತ್ರಮಂದಿರ ನೆಲಸಮವಾದರೂ ಆಚಿತ್ರಮಂದಿರದೊಂದಿಗಿನ ಸವಿ ನೆನಪುಗಳು ಇಂದಿಗೂ ನಮ್ಮೊಂದಿಗಿದೆ.
– ಕೆ. ಶ್ರೀನಿವಾಸ್ ರಾವ್