Advertisement

ಮಿಸ್ಟರ್‌ ಪರ್ಫೆಕ್ಟ್ ‘ಪುರುಷೋತ್ತಮ’

01:47 PM May 08, 2022 | Team Udayavani |

ಗಂಡ ಕೇವಲ ಹೆಂಡತಿಯ ಯಜಮಾನನಾಗಿರದೇ ಆಕೆಯ ಪ್ರತಿಯೊಂದು ಭಾವನೆ, ಸಮಸ್ಯೆಗಳನ್ನು ಅರಿತು ಬದುಕು ಸಾಗಿಸಬೇಕು. ಪುರುಷ, ಹೆಣ್ಣನ್ನು ಗೌರವದಿಂದ, ವಿಶ್ವಾಸದಿಂದ ಕಂಡಾಗ ಮಾತ್ರ ಆತ “ಪುರುಷೋತ್ತಮ’ ಎನಿಸಿಕೊಳ್ಳುತ್ತಾನೆ.  ಇಂತಹ ಒಂದು ಕಥಾಹಂದರದೊಂದಿಗೆ ತೆರೆಗೆ ಬಂದಿರುವ ಚಿತ್ರ “ಪುರುಷೋತ್ತಮ’.

Advertisement

ಡೈವೋರ್ಸ್‌ ಲಾಯರ್‌, ಅಡ್ವೊಕೇಟ್‌ ಪುರುಷೋತ್ತಮ ಸಕಲ ಕಲಾವಲ್ಲಭ. ಈತನದ್ದು ಹೆಂಡತಿ ಮಗಳಿರುವ ಸುಂದರ ಕುಟುಂಬ. ಜಗತ್ತಿನಲ್ಲಿ ಗಂಡ – ಹೆಂಡತಿಯಷ್ಟು ಸುಂದರವಾದ ಸ್ನೇಹ ಸಂಬಂಧ ಬೇರೊಂದಿಲ್ಲಾ ಅನ್ನುವ ಪುರು, ಅಪ್ಪಟ ಗೃಹಿಣಿಯಾಗಿಯೂ ಯಕ್ಷಗಾನ ಕಲಾವಿದೆಯಾಗಿರುವ ಮನೆ ಒಡತಿ ವಾಸುಕಿ. ಎಲ್ಲರಿಗಂತಲೂ ಚೂಟಿ, ಪಟ ಪಟ ಅಂತಾ ಮಾತನಾಡುವ ಮಗಳು ಪಿಂಕಿ. ಒಂದು ಸುಂದರ ಕುಟುಂಬ ಪ್ರೀತಿಯಿಂದ ಸಾಗುತ್ತಾ ಇದೆ ಅಂದರೆ ಅದು ಚಿತ್ರ ಆಗಲಾರದು. ಅಂತಯೇ ಎಲ್ಲಾ ಚಿತ್ರಗಳಲ್ಲಿ ಬರುವಂತೆ ಈ ಕುಟುಂಬದಲ್ಲೂ ಒಂದು ಸಮಸ್ಯೆ ಎದುರಾಗುತ್ತೆ. ಏನು ಆ ಸಮಸ್ಯೆ? ಅದನ್ನು ಹೇಗೆ ಬಗೆಹರಿಸುತ್ತಾರೆ ಎಂದು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕು.

ಚಿತ್ರದ ಆರಂಭದಿಂದಲೇ ಒಂದು ಅಂಶ ಪ್ರೇಕ್ಷಕರನ್ನು ಯೋಚನೆಗೆ ತಳ್ಳುವಂತೆ ಮಾಡುತ್ತದೆ. ಚಿತ್ರದ ಮೊದಲ ಭಾಗ ಸರಾಗವಾಗಿ ಸಾಗಿ ಕಥೆಯ ಪ್ರಮುಖ ಘಟ್ಟಕ್ಕೆ ತಂದು ನಿಲ್ಲಿಸುತ್ತದೆ. ಆದರೆ ಎರಡನೇ ಭಾಗ ಕೆಲವು ಕಡೆ ಬೋರ್‌ ಆಗುವ ಜೊತೆಗೆ ಅತಿಯಾಗಿ ಎಳೆದಾಡಿದಂತೆ ಅನಿಸುವುದು ಉಂಟು. ಅವಶ್ಯಕತೆಗಿಂತ ಜಾಸ್ತಿ ದೃಶ್ಯಗಳನ್ನು ತುರುಕಲಾಗಿದೆ. ಆದರೂ ಚಿತ್ರದ ಕೊನೆಯವರೆಗೂ ಒಂದು ಕೂತುಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕ ಅಮರನಾಥ್‌ ಯಶಸ್ವಿಯಾಗಿದ್ದಾರೆ.

ಚಿತ್ರದ ಮೊದಲ ಭಾಗದಲ್ಲಿ ಹೀರೋ ಮಿಂಚಿದರೆ, ಎರಡನೇ ಭಾಗದಲ್ಲಿ ಹಿರೋಯಿನ್‌ ನಟನೆಯಲ್ಲಿ ಪಾರುಪತ್ಯ ಮೆರೆದಿದ್ದಾರೆ. ಚಿತ್ರದ ನಾಯಕನ ಪಾತ್ರ ಇಷ್ಟೆನಾ ಅನ್ನಿಸುವವರಿಗೆ ಕೊನೆಯಲ್ಲಿ ಸಿಗುವ ಟ್ವಿಸ್ಟ್‌ ಎಲ್ಲದಕ್ಕೂ ಉತ್ತರ ನೀಡುತ್ತದೆ. ಒಂದಿಷ್ಟು ಡೈಲಾಗ್‌, ಅಲ್ಲಲ್ಲಿ ಕಾಮಿಡಿ, ಪ್ರೀತಿ, ಡ್ರಾಮಾ ಹಾಗೂ ಸಪ್ಸೆನ್ಸ್‌ ಥ್ರಿಲ್ಲರ್‌ ಕೂಡಿಸಿ ಪುರುಷೋತ್ತಮನಾಗಿದ್ದಾನೆ.

ಇಲ್ಲಿತನಕ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಜಿಮ್‌ ರವಿ ನಾಯಕನಾಗಿ ಅಭಿನಯಿಸದ ಮೊದಲ ಚಿತ್ರವಾಗಿದ್ದು, ತಮ್ಮ ಡೈಲಾಗ್‌ಗಳ ಮೂಲಕವೇ ಮಿಂಚಿದ್ದಾರೆ. ಇನ್ನು ಕೇವಲ ಬಬ್ಲಿ ಪಾತ್ರಗಳಲ್ಲಿ ಅಭಿನಯಿಸಿದ್ದ ಅಪೂರ್ವ ಒಂದು ಜವಾಬ್ದಾರಿಯುತ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಉಳಿದಂತೆ ಪಾತ್ರಧಾರಿಗಳು ಕಥೆಗೆ ಪೂರಕವಾಗಿ ಅಭಿನಯಿಸಿದ್ದಾರೆ. ಶ್ರೀಧರ್‌ ವಿ ಸಂಭ್ರಮ್‌ ಅವರ ಸಂಗೀತ ಕಥೆಗೆ ಸಾಥ್‌ ನೀಡುವಂತಿದ್ದು, ಕುಮಾರ್‌ ಎಂ ತಮ್ಮ ಕ್ಯಾಮಾರ ಮೂಲಕ ಮೈಸೂರಿನ ದರ್ಶನ ಮಾಡಿಸಿದ್ದಾರೆ.

 

– ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next