ಆತ ಬಾಲ್ಯದಿಂದಲೂ ನಿಷ್ಕಲ್ಮಶವಾಗಿ ಜಾನಕಿಯನ್ನು ಪ್ರೀತಿಸುವ ಹುಡುಗ ರಾಮ್. ಅನಾಥೆಯಾಗಿರುವ ತನ್ನ ಪ್ರೀತಿಯ “ಜಾನು’ವಿಗೆ ಮರೆವಿನ ಖಾಯಿಲೆ ಇದೆ ಎಂದು ಗೊತ್ತಿದ್ದರೂ, ಆಕೆಯನ್ನು ಸದಾ ಕಣ್ಣ ರೆಪ್ಪೆಯಂತೆ ಕಾಪಾಡುವ ರಾಮ್, ಅವಳ ಸಂತೋಷ-ಹಿತಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಅಪ್ಪಟ “360′ ಆದರ್ಶ ಪ್ರೇಮಿ.
ಇನ್ನು ಮುಗ್ಧ ಮನಸ್ಸಿನ ಮುದ್ದು ಹುಡುಗಿ ಜಾನಕಿಗೂ ರಾಮನೇ ಸರ್ವಸ್ವ. ರಾಮ್ ಇಲ್ಲದ ಜಗತ್ತು ಜಾನುವಿಗೂ ಖಾಲಿ ಖಾಲಿ. ತಮ್ಮದೇ ಆದ ಪುಟ್ಟ ಗೂಡಿನಲ್ಲಿ ಹಾಯಾಗಿದ್ದ ಈ ಜೋಡಿಯ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದು, ಜಾನಕಿಯನ್ನು ಜೈಲು ಪಾಲಾಗುವಂತೆ ಮಾಡುತ್ತದೆ. ತನ್ನ ಜೀವದಂತಿರುವ ಹುಡುಗಿಯನ್ನು ಕಂಬಿಯಿಂದ ಹೊರತರಲು ರಾಮ್ ಏನೇನು ಮಾಡುತ್ತಾನೆ, ಅಂತಿಮವಾಗಿ ರಾಮ್-ಜಾನಕಿ ಪ್ರೇಮಕಥೆ ಏನಾಗುತ್ತದೆ ಅನ್ನೋದೇ ಈ ವಾರ ತೆರೆಗೆ ಬಂದಿರುವ “ಲವ್ 360′ ಸಿನಿಮಾದ ಕಥಾಹಂದರ. ಸಿನಿಮಾದ ಟೈಟಲ್ಲೇ ಹೇಳುವಂತೆ, “ಲವ್ 360′ ಅಪ್ಪಟ ಲವ್‌ಸ್ಟೋರಿ ಸಿನಿಮಾ.
ನವಿರಾದ ಪ್ರೇಮಕಥೆಯ ಜೊತೆಗೆ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಎಳೆಯೊಂದನ್ನು ಇಟ್ಟುಕೊಂಡು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಶಶಾಂಕ್. ಮನುಷ್ಯನ ಕಾಮನೆ, ಪೊಲೀಸ್ ವ್ಯವಸ್ಥೆ, ಕಾನೂನು ಹೋರಾಟ, ಸಾಮಾಜಿಕ ಮನಸ್ಥಿತಿ ಇವೆಲ್ಲದಕ್ಕೂ ಬಲಿಯಾಗುವ ಮುಗ್ಧ ಪ್ರೀತಿಯನ್ನು ಶಶಾಂಕ್ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಮೊದಲರ್ಧ ಲವ್ ಟ್ರ್ಯಾಕ್‌ನಲ್ಲಿ ಸಾಗುವ ಕಥೆ ಮಧ್ಯಂತರದ ನಂತರ ಬ್ಲಿಡ್ ಶೇಡ್ ಪಡೆದುಕೊಂಡು ಕ್ಲೈಮ್ಯಾಕ್ಸ್ ಗೆ ಬಂದು ನಿಲ್ಲುತ್ತದೆ. ಚಿತ್ರಕಥೆ, ನಿರೂ ಪಣೆ ಮತ್ತು ಪಾತ್ರಗಳ ಮೂಲಕ “ಲವ್ 360′ ನೇಟಿವಿಟಿಯನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ.
ಇನ್ನು ನವ ನಟ ಪ್ರವೀಣ್ ಚೊಚ್ಚಲ ಸಿನಿಮಾದಲ್ಲಿಯೇ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಪ್ರೇಮಿಯಾಗಿ, ಆ್ಯಕ್ಷನ್ ಹೀರೋ ಆಗಿ ಪ್ರವೀಣ್ ಸ್ಕ್ರೀನ್‌ನಲ್ಲಿ ಫುಲ್ ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ. ನಾಯಕಿ ರಚನಾ ಇಂದರ್ ಕೂಡಾ ಮರೆಗುಳಿ ಹುಡುಗಿಯಾಗಿ ಹೋಮ್ಲಿ ಲುಕ್‌ನಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ, ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಸುಕನ್ಯಾ ಗಿರೀಶ್ ಪಾತ್ರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಇನ್ನುಳಿದ ಪಾತ್ರಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ತಾಂತ್ರಿಕವಾಗಿ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಕಡಲತೀರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಸಿನಿಮಾದ ಸಂಕಲನ, ಕಲರಿಂಗ್, ಸೌಂಡ್ ಎಫೆಕ್ಟ್ ಗುಣಮಟ್ಟದಲ್ಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಮೂರು ಹಾಡುಗಳು ಥಿಯೇಟರ್ ಹೊರಗೂ ಪ್ರೇಕ್ಷಕರನ್ನು ಗುನುಗುವಂತೆ ಮಾಡುವಂತಿದೆ. ಮೇಲ್ನೋಟಕ್ಕೆ “ಲವ್ 360′ ಒಂದು ಲವ್ ಸ್ಟೋರಿ ಎನಿಸಿದರೂ, ಥಿಯೇಟರ್‌ನಲ್ಲಿ ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಹೀಗೆ ವಿಭಿನ್ನ ಅನುಭವ ಕೊಡುವ ಸಿನಿಮಾ ಎನ್ನಲು ಅಡ್ಡಿಯಿಲ್ಲ. ಮಾಮೂಲಿ ಸಿನಿಮಾಗಳಿಗಿಂತ ವಿಭಿನ್ನವಾಗಿ ನಿಲ್ಲುವ “ಲವ್ 360′ ಸಿನಿಮಾವನ್ನು ಒಮ್ಮೆ ಕಣ್ತುಂಬಿಕೊಂಡು ಬರಬಹುದು.
ಚಿತ್ರ: ಲವ್ 360
ನಿರ್ಮಾಣ: ಶಶಾಂಕ್ ಸಿನಿಮಾಸ್
ನಿರ್ದೇಶನ: ಶಶಾಂಕ್
ತಾರಾಗಣ: ಪ್ರವೀಣ್, ರಚನಾ ಇಂದರ್, ಗೋಪಾಲಕೃಷ್ಣ ದೇಶಪಾಂಡೆ, ಕಾವ್ಯಾ ಶಾಸ್ತ್ರೀ, ಡ್ಯಾನಿ ಕುಟ್ಟಪ್ಪ, ಯಮುನಾ ಶ್ರೀನಿಧಿ, ಸುಕನ್ಯಾ ಗಿರೀಶ್, ಬಾಬು ಹಿರಣಯ್ಯ, ಗಿರೀಶ್ ಜತ್ತಿ ಮತ್ತಿತರರು