ಆಕೆ ಸಮೃದ್ಧಿಯಿಂದ ಕೂಡಿರುವ ಅಶೋಕವನ ಎಂಬ ಐಷಾರಾಮಿ ಎಸ್ಟೇಟ್‌ನಲ್ಲಿರುವ ಸೀತೆ! ಆಳು-ಕಾಳು, ಸಕಲ ಸಂಪತ್ತು ಎಲ್ಲವೂ ಇದ್ದರೂ, ಅದೆಲ್ಲವೂ ಆಕೆಗೆ ಗೌಣ. ಅದಕ್ಕೆ ಕಾರಣ, ಬದುಕಿಗೆ ಬೇಕಾದ ಪ್ರೀತಿ, ಅಕ್ಕರೆ, ಆರೈಕೆ ಯಾವುದೂ ಅಲ್ಲಿಲ್ಲ. ರಕ್ತದೋಕುಳಿ ಹರಿಸುವ, ಕ್ರೌರ್ಯತೆಯೇ ಹೊತ್ತು ನಿಂತಿರುವ, ರಾವಣನಂತಿರುವ ಗಂಡನ ಜೊತೆ ಆಕೆಯದ್ದು “ಬಂಗಾರದ ಪಂಜರ’ದಲ್ಲಿನ ಬದುಕು. ಕನಸು – ಭಾವನೆ ಎಲ್ಲವನೂ ಕಳೆದುಕೊಂಡು “ಶೋಕ’ದಿಂದಲೇ ಆಕೆ ಬದುಕುವ ಆ ಅಶೋಕವನಕ್ಕೆ, ಹೇರ್ ಸ್ಟೈಲಿಸ್ ಆಗಿ ಅವನೊಬ್ಬ ಎಂಟ್ರಿ ಕೊಡುತ್ತಾನೆ. ಅವನೇ “ಹೀರೋ’. ಆತನ ಎಂಟ್ರಿಯೊಂದಿಗೆ ಇಡೀ ಸಿನಿಮಾದ ಕಲರ್ ಬದಲಾಗುತ್ತದೆ. ಅದನ್ನು ನೀವು ಕೆಂಪು ಕಲರ್ ಎಂದುಕೊಳ್ಳಲು ಅಡ್ಡಿಯಿಲ್ಲ.
ಆರಂಭದಲ್ಲಿಯೇ ಚಿತ್ರದ ಪೋಸ್ಟರ್, ಟ್ರೇಲರ್, ಹಾಡುಗಳಲ್ಲಿ ಪ್ರೇಕ್ಷಕರು ಗಮನಿಸಿರುವಂತೆ, ಇದೊಂದು ಕಂಪ್ಲೀಟ್ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ಶೈಲಿಯ ಚಿತ್ರ. ಇಲ್ಲಿ ಒಂದು ಪ್ರೇಮಕಥೆ ಇದೆ, ಜೊತೆಗೊಂದು ತೊಳಲಾಟ, ಕ್ರೌರ್ಯದ ಆರ್ಭಟ ಎಲ್ಲವೂ ಇದೆ. ಇದನ್ನು ಸರಿದೂಗಿಸಲು ಮನಮುಟ್ಟುವ ಹಾಡು, ಮಾಸ್ ಪ್ರಿಯರಿಗಾಗಿ ಆ್ಯಕ್ಷನ್, ಚೇಸಿಂಗ್ ಎಲಿಮೆಂಟ್ಸ್… ಹೀಗೆ ಎಲ್ಲವನ್ನೂ ಹದವಾಗಿ ಸೇರಿಸಿ “ಹೀರೋ’ನನ್ನು ತೆರೆಮೇಲೆ ತರಲಾಗಿದೆ.
ಹಾಗೆ ನೋಡಿದರೆ “ಹೀರೋ’ ಚಿತ್ರದ ಕಥೆ ತುಂಬಾ ಸರಳ. ಆದರೆ ಇಲ್ಲಿ ಮೆಚ್ಚಬೇಕಾದ ಅಂಶವೆಂದರೆ ಒಂದು ಸರಳ ಕಥೆಯನ್ನಿಟ್ಟುಕೊಂಡು ಆಟವಾಡಿರುವುದು. ಈ ಚಿತ್ರ ನಿಮಗೆ ಎಲ್ಲೂ ಬೋರ್ ಹೊಡೆಸದೇ ನಿಮ್ಮನ್ನು ನೋಡಿಸಿಕೊಂಡು ಹೋಗುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರತಂಡದ ಶ್ರಮ ಹಾಗೂ ಪೂರ್ವತಯಾರಿ.
ಇದನ್ನೂ ಓದಿ:ನಟ ದ್ವಾರಕೀಶ್ ಮನೆ ಖರೀದಿಸಿದ ರಿಷಬ್ ಶೆಟ್ಟಿ
ಚಿತ್ರತಂಡವೇ ಹೇಳಿಕೊಂಡಂತೆ ಇದು ಲಾಕ್‌ಡೌನ್ ಸಮಯದಲ್ಲಿ ಕೇವಲ 24 ಮಂದಿಯನ್ನಿಟ್ಟುಕೊಂಡು ನಗರ ಪ್ರದೇಶದ ಸಂಪರ್ಕದಿಂದ ದೂರವಿರುವ ಎಸ್ಟೇಟ್ ನಲ್ಲಿ ತಯಾರಾದ ಚಿತ್ರ. ಆದರೆ, ಆ ಕೊರತೆ ಇಲ್ಲಿ ಕಾಣುವುದಿಲ್ಲ. ಒಂದು ಫ್ರೆàಮ್‌ನಲ್ಲಿ ಏನೆಲ್ಲಾ ಇರಬೇಕೋ ಅವೆಲ್ಲವೂ ನಿಮಗೆ ಇಲ್ಲಿ ಕಾಣುತ್ತದೆ. ಇನ್ನು ಕಥೆ, ಚಿತ್ರಕಥೆಯಲ್ಲೂ ಚಿತ್ರತಂಡ ಹಿಂದೆ ಬಿದ್ದಿಲ್ಲ. ಸರಳವಾದ ಕಥೆಯ ಎಳೆಯನ್ನು ಇಟ್ಟುಕೊಂಡು, ಅದರಲ್ಲಿ ಒಂದಷ್ಟು ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಸೇರಿಸಿ “ಹೀರೋ’ ಮೂಲಕ ತೆರೆಮೇಲೆ ಹೇಳಿದ್ದಾರೆ ನಿರ್ದೇಶಕ ಭರತ್ ರಾಜ್.
ಚಿತ್ರದ ಮೊದಲಾರ್ಧ ಸರಾಗವಾಗಿ ಸಾಗುವ ಚಿತ್ರಕಥೆ ಮತ್ತು ನಿರೂಪಣೆ, ದ್ವಿತೀಯಾರ್ಧದಲ್ಲಿ ಕೊಂಚ ವೇಗ ಕಳೆದುಕೊಂಡು ಆ್ಯಕ್ಷನ್ ದೃಶ್ಯಗಳಿಗಷ್ಟೇ ಸೀಮಿತವಾಗುತ್ತದೆ. ಚಿತ್ರಕಥೆ, ನಿರೂಪಣೆ ಮತ್ತು ಸಂಭಾಷಣೆ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ, “ಹೀರೋ’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.
ಈ ಹಿಂದೆ ರಿಷಭ್ ಶೆಟ್ಟಿ ಅವರ “ಬೆಲ್ ಬಾಟಂ’ ಸಿನಿಮಾ ಇಷ್ಟಪಟ್ಟವರಿಗೆ ರಿಷಭ್ ಅವರ ಈ ಹೊಸ ಪಾತ್ರವೂ ಇಷ್ಟವಾಗುವ ಸಾಧ್ಯತೆ ಇದೆ. ಭಗ್ನ ಪ್ರೇಮಿಯಾಗಿ, ಆ್ಯಕ್ಷನ್ “ಹೀರೋ’ ಆಗಿ, ನಡುವೆ ಅಲ್ಲಲ್ಲಿ ಸಿಂಪಲ್ ಕಾಮಿಡಿ ಮೂಲಕ ರಿಷಭ್ ತಮ್ಮ ಪಾತ್ರದಲ್ಲಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಇನ್ನು ಕಿರುತೆರೆಯಿಂದ ಮೊದಲ ಬಾರಿಗೆ ಹಿರಿತೆರೆಗೆ ಬಂದಿರುವ ನಾಯಕಿ ಗಾನವಿ ಲಕ್ಷ್ಮಣ್ ಅವರದ್ದು ಕೂಡ ಚಿತ್ರದಲ್ಲಿ ಗಂಭೀರ ಅಭಿನಯ. ಉಳಿದಂತೆ ಖಳನಟರಾಗಿ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಕೂಡ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ಕನಿಷ್ಠ ಪಾತ್ರಗಳಿದ್ದರೂ, ಬಹುತೇಕ ಕಲಾವಿದರದ್ದು ಗರಿಷ್ಠ ಅಭಿನಯದ ನೀಡಿದ್ದಾರೆ.
ಇದನ್ನೂ ಓದಿ: ಕನಸಿನಲ್ಲಿ ಹೇಳಿದಂತೆ ಬಾಲಕನಿಗೆ ವಿಗ್ರಹ ಸಿಕ್ಕಿದೆಯೇ? ವಿಸ್ಮಯಯೋ, ವದಂತಿಯೋ?
ಇನ್ನು ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ “ಹೀರೋ’ನನ್ನ ತೆರೆಮೇಲೆ ಚೆನ್ನಾಗಿ ಕಾಣುವಂತೆ ಮಾಡಿದೆ.ಒಂದೇ ಲೊಕೇಶನ್ ಇದ್ದರೂ, ಎಲ್ಲೂ ನೋಡುಗರಿಗೆ ಬೋರ್ ಹೊಡೆಸದಂತೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಿದ್ದರೆ, “ಹೀರೋ’ ಓಟಕ್ಕೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಗಳಿತ್ತು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಹಾಡುಗಳು, ಸಾಹಿತ್ಯ ಕೆಲಹೊತ್ತು ನೋಡುಗರ ಬಾಯಲ್ಲಿ ಗುನುಗುಡುವಂತಿದೆ. ಹಿನ್ನೆಲೆ ಸಂಗೀತ ಕೂಡ ಚಿತ್ರದ ದೃಶ್ಯಗಳಿಗೆ ಪೂರಕವಾಗಿದೆ.
ಒಟ್ಟಾರೆ ಹೊಸ ವರ್ಷದ ಆರಂಭದಲ್ಲಿ “ಹೀರೋ’ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ರಿಷಭ್ ಶೆಟ್ಟಿ ಮತ್ತವರ ತಂಡದ ಪ್ರಯತ್ನವನ್ನು ಒಮ್ಮೆ ಥಿಯೇಟರ್ ನಲ್ಲಿ ಆಸ್ವಾಧಿಸಲು ಅಡ್ಡಿಯಿಲ್ಲ.
ಜಿ. ಎಸ್. ಕಾರ್ತಿಕ ಸುಧನ್