Advertisement

ಕೊಲೆಯ ಹಾದಿಯಲ್ಲಿ ಸಿಕ್ಕ ನಿಗೂಢ ಹೆಜ್ಜೆ ಗುರುತು!

03:39 PM Nov 29, 2020 | Suhan S |

ನಗರದ ಹೊರ ವಲಯದಲ್ಲಿರುವ ದೊಡ್ಡ ಮನೆಯೊಂದರಲ್ಲಿ ಅದರ ಮಾಲೀಕ ನಿಗೂಢವಾಗಿ ಕೊಲೆಯಾಗಿರುತ್ತಾನೆ. ಚಿತ್ರ ನಿರ್ಮಾಪಕನಾಗಿ, ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಆ ವ್ಯಕ್ತಿ ಹೇಗೆ ನಿಗೂಢವಾಗಿ ಕೊಲೆಯಾದ? ಆ ಕೊಲೆಯ ಪಾತ್ರಧಾರಿಗಳು, ಸೂತ್ರಧಾರರು ಯಾರು ಅನ್ನೋದೆ ಪ್ರೇಕ್ಷಕರ ಮುಂದಿದ್ದ ಪ್ರಶ್ನೆ. ಆ ಎಲ್ಲ ಪ್ರಶ್ನೆಗಳಿಗೂ ಬಹು ಆಯ್ಕೆಯ ಉತ್ತರಗಳಿರುತ್ತವೆ. ಅದಕ್ಕೆ ಕ್ಲೈಮ್ಯಾಕ್ಸ್‌ ನಲ್ಲಿ ಒಂದಷ್ಟು ಸಮರ್ಥನೆ ನೀಡಲಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ ” ಅರಿಷಡ್ವರ್ಗ” ಚಿತ್ರದ ಕಥೆಯ ಒಂದು ಎಳೆ.

Advertisement

ಇದನ್ನೂ ಓದಿ : ಫ್ಯಾಂಟಮ್‌ಗಾಗಿ ಮತ್ತೆ ಜಿಮ್‌ನತ್ತ ಕಿಚ್ಚ

ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಇದೇ ಥರದ ಸಸ್ಪೆನ್ಸ್‌ -ಕ್ರೈಂ ಥ್ರಿಲ್ಲರ್‌ ಕಥಾ ಹಂದರ ಹೊತ್ತಿರುವ ಹತ್ತಾರು ಚಿತ್ರಗಳು ಪ್ರತಿವರ್ಷ ಬರುತ್ತಿರುವುದರಿಂದ, ಚಿತ್ರದಕಥೆಯಲ್ಲಿ ತೀರಾ ಹೊಸತನ ಹುಡುಕುವಂತಿಲ್ಲ. ಕಥೆ ಅದೇಯಾದರೂ, ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ನಿರ್ದೇಶಕರು ಹೊಸದಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಲ್ಲಲ್ಲಿ ಬರುವ ಒಂದಷ್ಟು ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಥ್ರಿಲ್ಲಿಂಗ್‌ ಅನುಭವ ನೀಡಿದರೆ, ಇನ್ನೊಂದಿಷ್ಟು ತರ್ಕಕ್ಕೆ ನಿಲುಕದೇ ಸಾಗಿ ಹೋಗುತ್ತವೆ. ಚಿತ್ರಕಥೆ ನಿರೂಪಣೆಯ ಜೊತೆಗೆ ಸಂಭಾಷಣೆ, ಅಲ್ಲಲ್ಲಿ ಹಳಿ ತಪ್ಪಿದ ತಾಂತ್ರಿಕಕಾರ್ಯಗಳಿಗೆ ಇನ್ನಷ್ಟು ಗಮನಕೊಟ್ಟಿದ್ದರೆ, “ಅರಿಷಡ್ವರ್ಗ’ ಪ್ರೇಕ್ಷಕರಿಗೆ ಇನ್ನೂ ಹೆಚ್ಚಿನ ಥ್ರಿಲ್ಲಿಂಗ್‌ ಅನುಭವಕೊಡುವ ಸಾಧ್ಯತೆಯಿತ್ತು. ಇನ್ನು ಚಿತ್ರದ ಎರಡು ಮೂರು ಪಾತ್ರಗಳನ್ನು ಹೊರತುಪಡಿಸಿದರೆ, ಉಳಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕೆಲವು ಪಾತ್ರಗಳಿಗೆ ಚಿತ್ರಕಥೆಯಲ್ಲಿ ನಿರ್ದೇಶಕರು ಸ್ಪಷ್ಟನೆ ಕೊಡದಿದ್ದರಿಂದ,ಆಪಾತ್ರಗಳು ಕೊನೆಯವರೆಗೂ ಪ್ರಶ್ನಾರ್ಥಕವಾಗಿಯೇ ಉಳಿಯುತ್ತವೆ.

ನಟಿ ಸಂಯುಕ್ತಾ ಹೊರನಾಡ್‌, ನಂದ ಗೋಪಾಲ್‌, ಅವಿನಾಶ್‌, ಅರವಿಂದ್‌ಕುಪ್ಲಿಕರ್‌, ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸುಧಾ ಬೆಳವಾಡಿ ಪಾತ್ರಕ್ಕೆ ಚಿತ್ರದಲ್ಲಿ ಹೆಚ್ಚಿನಜಾಗವಿಲ್ಲ. ಚಿತ್ರದ ಇನ್ನೆರಡು ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂಜು ಆಳ್ವ ನಾಯ್ಕ್, ಮಹೇಶ್‌ ಭಂಗ್‌ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಅಷ್ಟಾಗಿ ಉಳಿಯುವುದಿಲ್ಲ.ಚಿತ್ರದ ಛಾಯಾಗ್ರಹಣ ಚೆನ್ನಾಗಿ ಮೂಡಿಬಂದಿದೆ. ಲೈಟಿಂಗ್‌ ಮತ್ತು ಸಂಕಲನ ಕಾರ್ಯಕ್ಕೆ ಇನ್ನಷ್ಟು ಗಮನಕೊಡಬಹುದಿತ್ತು. ಅಲ್ಲಲ್ಲಿ ಬರುವ ಮೆಲೋಡಿ ಸೌಂಡ್‌ ಟ್ರ್ಯಾಕ್‌ ಕೆಲ ತಾಂತ್ರಿಕ ಲೋಪಗಳನ್ನು ಮರೆ ಮಾಚುತ್ತದೆ. ಒಟ್ಟಿನಲ್ಲಿ, ಸುಮಾರು ಎಂಟು ತಿಂಗಳ ಬಳಿಕಈವಾರ”ಅರಿಷಡ್ವರ್ಗ’ ಎಂಬ ಮತ್ತೂಂದು ಸಸ್ಪೆನ್ಸ್‌ಕ್ರೈಂ ಥ್ರಿಲ್ಲರ್‌ ಚಿತ್ರ ತೆರೆಗೆ ಬಂದಿದೆ. ಕೆಲ ಲೋಪಗಳನ್ನು, ತರ್ಕಕ್ಕೆ ನಿಲುಕದ ಸಂಗತಿಗಳನ್ನು ಬದಿಗಿಟ್ಟು ನೋಡುವುದಾದರೆ, “ಅರಿಷಡ್ವರ್ಗ’ ಒಂದಷ್ಟು ಥ್ರಿಲ್ಲಿಂಗ್‌ ಅನುಭವ ಕೊಡುವುದರಲ್ಲಿ ಎರಡು ಮಾತಿಲ್ಲ.

ಚಿತ್ರ: ಅರಿಷಡ್ವರ್ಗ

Advertisement

ನಿರ್ದೇಶನ: ಅರವಿಂದ್‌ ಕಾಮತ್‌

ನಿರ್ಮಾಣ: ಕನಸು ಟಾಕೀಸ್‌

ತಾರಾಗಣ: ಸಂಯುಕ್ತಾ ಹೊರನಾಡ್‌, ಅಂಜು ಆಳ್ವ ನಾಯ್ಕ,ಮಹೇಶ್‌ ಭಂಗ್‌, ನಂದಗೋಪಾಲ್, ಅವಿನಾಶ್‌, ಅರವಿಂದ್‌ ಕುಪ್ಲಿಕರ್‌, ಗೋಪಾಲಕೃಷ್ಣ ದೇಶಪಾಂಡೆ, ಸುಧಾ ಬೆಳವಾಡಿ ಮತ್ತಿತರರು.

 

-ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next